
ಜಿಎಸ್‌ಟಿ
ಬೆಳಗಾವಿ: ಕಳೆದ ನಾಲ್ಕು ವರ್ಷಗಳಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಬಳಿಸುತ್ತಿದ್ದ ಆರೋಪಿ ನಕೀಬ್ ನಜೀಬ್ ಮುಲ್ಲಾ (24) ಸಿಕ್ಕಿಬಿದ್ದಿದ್ದೇ ಅಚ್ಚರಿ.
ಇಲ್ಲಿನ ಜಿಎಸ್‌ಟಿ ಹಿರಿಯ ಅಧಿಕಾರಿಗಳ ತಂಡ ಎರಡು ತಿಂಗಳ ಕಾಲ ನಿರಂತರವಾಗಿ ಆರೋಪಿ ಕೇಂದ್ರಿತವಾಗಿ ಪರಿಶೋಧನೆ ನಡೆಸಿದೆ. ಸಾವಿರಾರು ನಕಲಿ ಇನ್‌ವಾಯಿಸ್ (ಬಿಲ್)ಗಳನ್ನು ಸೃಷ್ಟಿ ಮಾಡಿದರೂ ಎಲ್ಲಿಯೂ ಸಿಕ್ಕಿಕೊಳ್ಳದಂತೆ ಎಚ್ಚರಿಕೆ ವಹಿಸಿದ್ದ. ಒಂದೆರಡು ಇನ್‌ವಾಯಿಸ್‌ಗಳು ಅಸಂಬದ್ಧವಾಗಿದ್ದವು. ಅದನ್ನು ಆಧರಿಸಿ ಮೀನು ಹಿಡಿಯಲು ಹೋದ ಅಧಿಕಾರಿಗಳಿಗೆ ತಿಮಿಂಗಲೇ ಬಲೆಗೆ ಬಿದ್ದಿದೆ.
ನಕೀಬ್ ₹132 ಕೋಟಿ ವ್ಯವಹಾರದ ನಕಲಿ ದಾಖಲೆ ಸೃಷ್ಟಿಸಿ, ₹23.82 ಕೋಟಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆದಿದ್ದಾನೆ. ಕೇವಲ ಮೂರು ತಿಂಗಳಲ್ಲಿ ಇಷ್ಟು ದೊಡ್ಡ ಮೊತ್ತದ ತೆರಿಗೆ ಕ್ರೆಡಿಟ್ ಪಡೆದುಕೊಂಡಿದ್ದು ಯಾರು? ಯಾವ ವ್ಯವಹಾರ ಎಂಬ ಕುತೂಹಲ ಅಧಿಕಾರಿಗಳಿಗೆ ಮೂಡಿತ್ತು. ಪರಿಶೀಲಿಸಿದಾಗ ಆತ ಸೃಷ್ಟಿಸಿದ ಸಾವಿರಾರು ದಾಖಲೆಗಳು ನಿಖರ, ನಿಯಮಾನುಸಾರ ಇದ್ದವು.
ಆದರೆ, ಒಂದೆರಡು ವ್ಯವಹಾರಗಳಲ್ಲಿ ಆರೋಪಿ ಎಡವಿದ್ದ. ಉದಾಹರಣೆಗೆ; ಒಬ್ಬರಿಂದ ಪ್ಲಾಸ್ಟಿಕ್ ಕಚ್ಚಾವಸ್ತು ಖರೀದಿಸಿ, ಅದರಿಂದ ಸಿದ್ಧಪಡಿಸಿದ ಪ್ಲಾಸ್ಟಿಕ್ ಬಾಟಲಿಗಳನ್ನು ಮಾರಬೇಕಿತ್ತು. ಆದರೆ, ಈ ಯುವಕ ಪ್ಲಾಸ್ಟಿಕ್ ಕಚ್ಚಾವಸ್ತು ಖರೀದಿಸಿ ಅದರಿಂದ ಅಕ್ಕಿ ತಯಾರಿಸಿ ಮಾರಿದ್ದಾಗಿ ದಾಖಲೆ ಸೃಷ್ಟಿಸಿದ್ದ. ಈ ರೀತಿಯ ವ್ಯವಹಾರ ಅಸಾಧ್ಯ ಎಂದು ಅರಿತ ಅಧಿಕಾರಿಗಳು ಆತನಿಗೆ ಬಲೆ ಬೀಸಿದರು.
‘ಜಿಎಸ್‌ಟಿ ವ್ಯವಸ್ಥೆ ಅತ್ಯಂತ ಸುರಕ್ಷಿತ ಹಾಗೂ ಜಟಿಲ ನಿಯಮಗಳನ್ನು ಒಳಗೊಂಡಿದೆ. ನಕೀಬ್ ಹೇಗೆ ವಂಚಿಸಿದ ಎಂಬುದು ನಮ್ಮನ್ನೂ ದಿಗಿಲುಗೊಳಿಸಿದೆ’ ಎನ್ನುತ್ತಾರೆ ಹಿರಿಯ ಅಧಿಕಾರಿ.
ಈ ಮೊದಲು; ತೆರಿಗೆ ಪಾವತಿಯಾದ ಬಗ್ಗೆ ಅಧಿಕಾರಿಗಳೇ ಸ್ಪಷ್ಟೀಕರಣ ಮಾಹಿತಿ ನೀಡುತ್ತಿದ್ದರು. ಆದರೆ ಜಿಎಸ್‌ಟಿಯಲ್ಲಿ ‘ಸೆಲ್ಫ್ ಅಸೆಸ್ಮೆಂಟ್ (ಸ್ವಯಂ ಘೋಷಣೆ)’ಗೆ ಅವಕಾಶವಿದೆ. ವ್ಯಕ್ತಿ ತಾನು ಯಾವ ವ್ಯವಹಾರ ಮಾಡುತ್ತೇನೆ ಎಂದು ತಾನೇ ಘೋಷಣೆ ಮಾಡಿಕೊಳ್ಳಬಹುದು. ಅಧಿಕಾರಿಗಳು ಅದನ್ನು ಎಚ್‌ಎಸ್‌ಎನ್ (Harmonized System of Nomenclature) ಕೋಡ್ ಮೂಲಕ ಖಚಿತ ಮಾಡಿಕೊಳ್ಳುತ್ತಾರೆ. ಈ ಸೌಲಭ್ಯವನ್ನೇ ಆರೋಪಿ ಕೃತ್ಯಕ್ಕೆ ಬಳಸಿಕೊಂಡಿದ್ದಾನೆ ಎನ್ನುತ್ತವೆ ಮೂಲಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.