ADVERTISEMENT

‘ಗ್ಯಾರಂಟಿ’ಗಳ ಅನುಷ್ಠಾನ; ದೇಶಕ್ಕೆ ಮಾದರಿ: ಸತೀಶ ಜಾರಕಿಹೊಳಿ

ಜಿಲ್ಲಾಮಟ್ಟದ ಕಾರ್ಯಾಗಾರದಲ್ಲಿ ಸಚಿವ ಸತೀಶ ಜಾರಕಿಹೊಳಿ ಅಭಿಮತ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 2:01 IST
Last Updated 1 ಡಿಸೆಂಬರ್ 2025, 2:01 IST
ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಜಿಲ್ಲಾಮಟ್ಟದ ಕಾರ್ಯಾಗಾರವನ್ನು ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿದರು
ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಜಿಲ್ಲಾಮಟ್ಟದ ಕಾರ್ಯಾಗಾರವನ್ನು ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿದರು   

ಬೆಳಗಾವಿ: ‘ನಮ್ಮ ಸರ್ಕಾರ ಬಡವರ ಪರವಾಗಿದೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶಕ್ಕೆ ಮಾದರಿಯಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಜಿಲ್ಲಾ‌ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಗ್ಯಾರಂಟಿ ಯೋಜ‌ನೆಗಳನ್ನು ಜಾರಿಗೆ ತರುವ ಮುನ್ನ, ಅನೇಕ ಟೀಕೆ ಎದುರಾದವು. ಆದರೆ, ರಾಜ್ಯ ಸರ್ಕಾರ ಯಾವುದಕ್ಕೂ ಕಿವಿಗೊಡದೆ ಯೋಜನೆ ಜಾರಿಗೆ ತಂದು ಬಡ ಜನರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಿ, ಸಮಾಜದ‌ ಮುಖ್ಯವಾಹಿನಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸಿದೆ’ ಎಂದರು. 

ADVERTISEMENT

‘ಗ್ಯಾರಂಟಿ ಯೋಜನೆಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳನ್ನು ಶೀಘ್ರ ಸರಿಪಡಿಸಲಾಗುವುದು. ಪ್ರತಿಯೊಬ್ಬರಿಗೂ ‘ಗ್ಯಾರಂಟಿ’ಗಳ ಲಾಭ ಸಿಗುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು. ಗ್ಯಾರಂಟಿ ಯೋಜನೆಗಳಡಿ ನೀಡಿದ ಹಣ ಸದ್ಬಳಕೆಯಾಗಬೇಕು’ ಎಂದು ಕರೆಕೊಟ್ಟರು.

ಗ್ಯಾರಂಟಿ ಯೋಜನೆಗಳ‌ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ, ‘ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ಇಂದು ರಾಜ್ಯದಲ್ಲಿ ಅನೇಕ ಬದಲಾವಣೆ ಕಂಡುಬರುತ್ತಿವೆ. ಈ ಯೋಜ‌ನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕು’ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳ‌ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಪಾಟೀಲ, ‘2023ರ ವಿಧಾನಸಭೆ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಗ್ಯಾರಂಟಿ ಯೋಜನೆ ಜಾರಿಗೊಳಿಸಿ, ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ’ ಎಂದರು.

ಶಾಸಕ ಆಸಿಫ್‌ ಸೇಠ್‌, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸಂಪನ್ಮೂಲ ವ್ಯಕ್ತಿ ಮುತ್ತುರಾಜ್ ಮಾತನಾಡಿದರು.

ಇದೇವೇಳೆ, ಗ್ಯಾರಂಟಿ ಯೋಜನೆ ಫಲಾನುಭವಿಗಳ‌ ಯಶೋಗಾಥೆ ಕೈಪಿಡಿ ಬಿಡುಗಡೆ ಮಾಡಲಾಯಿತು.

ಶಾಸಕ ಗಣೇಶ ಹುಕ್ಕೇರಿ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ‌ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಬುಡಾ ಅಧ್ಯಕ್ಷ‌ ಲಕ್ಷ್ಮಣರಾವ್ ಚಿಂಗಳೆ, ಕಾಡಾ ಅಧ್ಯಕ್ಷ ಯುವರಾಜ‌ ಕದಂ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸುನೀಲ‌ ಹನುಮಣ್ಣವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಮಹಿಳಾ ಮತ್ತು ಮಕ್ಕಳ‌ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎನ್.ಚೇತನಕುಮಾರ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಇತರರಿದ್ದರು. ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಸ್ವಾಗತಿಸಿದರು.

ಇದಕ್ಕೂ ಮುನ್ನ, ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕುಮಾರ ಗಂಧರ್ವ ರಂಗಮಂದಿರದ ವರೆಗೆ ಮೆರವಣಿಗೆ ನಡೆಯಿತು. ಜಾನಪದ ಕಲಾತಂಡಗಳ ಪ್ರದರ್ಶನ ಮನಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.