ಮೂಡಲಗಿ: ಇಲ್ಲಿಯ ಆರ್‌ಡಿಎಸ್ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ಪ್ರಾಥಮಿಕ, ಪ್ರೌಢ ಶಾಲೆಯ ಮಕ್ಕಳು ಮಹರ್ಷಿ ವೇದ ವ್ಯಾಸರು ಮತ್ತು ಗುರುಕುಲ ರೂಪಕವನ್ನು ಮಾಡಿ ಎಲ್ಲರ ಗಮನಸೆಳೆದರು. ಪುರಾಣ ಕಾಲದಂತೆ ಹುಲ್ಲಿನ ಗುಡಿಸಲು, ಅಗ್ನಿಕುಂಡವನ್ನು ಸೃಷ್ಟಿಸಿದ್ದರು. ಮಹರ್ಷಿ ವೇದ ವ್ಯಾಸರು ವೇದ, ಉಪನಿಷತ್ತು ಬೋಧಿಸುವುದು ಮತ್ತು ಪುಟಾಣಿಗಳು ಗುರುಕುಲ ಮಾದರಿಯ ಧಿರಿಸಿನಲ್ಲಿ ಏಕಚಿತ್ತದಲ್ಲಿ ಧ್ಯಾನಿಸುವ ಮೂಲಕ ಗುರಪೂರ್ಣಿಮೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆರ್‌ಡಿಎಸ್ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಪೂಜಾ ಪಾರ್ಶಿ ಮಾತನಾಡಿ, ‘ಭಾರತೀಯ ಸಂಸ್ಕೃತಿ ಪರಂಪರೆಯು ವಿಶ್ವಕ್ಕೆ ಮಾದರಿಯಾಗಿದ್ದು, ಆಧುನಿಕತೆಯಲ್ಲಿ ಮರೆಯಾಗುತ್ತಿರುವ ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ಮಕ್ಕಳಿಗೆ ಗೊತ್ತು ಮಾಡುವುದು ಇಂದಿನ ಅವಶ್ಯಕತೆ ಇದೆ. ಮಕ್ಕಳಿಗೆ ಪುರಾಣಗಳ ಅರಿವು ಮೂಡಿಸುವುದು ಅವಶ್ಯವಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಸಂಗಮೇಶ ಹಳ್ಳೂರ ಮಾತನಾಡಿದರು. ಅಧ್ಯಕ್ಷತೆವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಸಂತೋಷ ಪಾರ್ಶಿ ಮಾತನಾಡಿ ಮಕ್ಕಳಿಗೆ ಪುಸ್ತಕ ಜ್ಞಾನದ ಜೊತೆಗೆ ಪ್ರಾಯೋಗಿಕವಾಗಿ ಅವರನ್ನು ತೊಡಗಿಸುವ ಮೂಲಕ ದೇಶದ ಪರಂಪರೆಯ ಬಗ್ಗೆ ಪರಿಣಾಮಕಾರಿಯಾಗಿ ಅರಿವು ಮೂಡಿಸಬೇಕು ಎಂದರು.
ಶಾಲೆಯ ಎಲ್ಲ ಶಿಕ್ಷಕರಿಗೆ ಅರತಿ ಮಾಡಿ ಪುಷ್ಪವೃಷ್ಟಿ ಮಾಡಿ ಗೌರವಿಸಿದರು. ಅಶ್ವಿನಿ ಮೆಳ್ಳಿಕೇರಿ ನಿರೂಪಿಸಿದರು, ಯಾಕೂಬ ಹಾದಿಮನಿ, ಲತಾ ಅಂಬವಗೋಳ ಸ್ವಾಗತಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.