ADVERTISEMENT

ಒಂದು ತಿಂಗಳೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ: ಸಚಿವ ಎಚ್‌.ಕೆ.ಪಾಟೀಲ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2023, 16:03 IST
Last Updated 9 ಜುಲೈ 2023, 16:03 IST
   

ಸವದತ್ತಿ/ಉಗರಗೋಳ: ‘ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಒಂದು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು’ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್‌.ಕೆ.ಪಾಟೀಲ ಸೂಚಿಸಿದರು.

ಸಮೀಪದ ಯಲ್ಲಮ್ಮನಗುಡ್ಡಕ್ಕೆ ಭಾನುವಾರ ಭೇಟಿ ನೀಡಿ ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗಳನ್ನು ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.

‘ಇಲ್ಲಿ ಜಾತ್ರೆಗೆ ಬರುವ ಚಕ್ಕಡಿಗಳ ನಿಲುಗಡೆಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಭಕ್ತರಿಗೆ ಅಗತ್ಯವಿರುವ ಮೂಲಸೌಕರ್ಯಗಳ ಪಟ್ಟಿ ಸಿದ್ಧಪಡಿಸಿ, ವರದಿ ಸಲ್ಲಿಸಬೇಕು’ ಎಂದು ನಿರ್ದೇಶನ ನೀಡಿದರು.

ADVERTISEMENT

‘ಈ ಹಿಂದೆ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ, ಯಲ್ಲಮ್ಮನಗುಡ್ಡದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿತ್ತು. ಈಗ ಮಂಡಿಸಿದ ಬಜೆಟ್‌ನಲ್ಲೂ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಮೀಸಲಿಡಲಾಗಿದೆ’ ಎಂದರು.

ಇದಕ್ಕೂ ಮುನ್ನ ಯಲ್ಲಮ್ಮ ದೇವಿ ದರ್ಶನ ಪಡೆದ ಸಚಿವರನ್ನು ಸತ್ಕರಿಸಲಾಯಿತು. ಶಾಸಕ ವಿಶ್ವಾಸ ವೈದ್ಯ, ಮಾಜಿ ಶಾಸಕ ಎಸ್‌.ಆರ್‌.ಪಾಟೀಲ, ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವೈ.ವೈ.ಕಾಳಪ್ಪನವರ, ಲಕ್ಷ್ಮಿ ಹೂಲಿ, ರಾಮನಗೌಡ ತಿಪರಾಶಿ, ಯಲ್ಲಮ್ಮ ದೇವಿ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್‌ಪಿಬಿ ಮಹೇಶ, ಎ.ಎಸ್‌.ಗ್ರಾಮೋಪಾಧ್ಯಾಯ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.