
ಬೆಳಗಾವಿ: ಮಕ್ಕಳನ್ನು ಮೊಬೈಲ್ ಫೋನ್ ಗೀಳಿನಿಂದ ಹೊರತಂದು ಓದಿನತ್ತ ಸೆಳೆಯಲು ಮತ್ತು ಮನೆಗಳಲ್ಲಿ ಕೌಟುಂಬಿಕ ಸಂವಹನ ವೃದ್ಧಿಸಲು ತಾಲ್ಲೂಕಿನ ಹಲಗಾ ಗ್ರಾಮಸ್ಥರು ನಿತ್ಯ ಸಂಜೆ 7 ರಿಂದ ರಾತ್ರಿ 9ರವರೆಗೆ (ತುರ್ತು ಸಂದರ್ಭ ಹೊರತುಪಡಿಸಿ) ತಮ್ಮ ಮನೆಗಳಲ್ಲಿ ಮೊಬೈಲ್ ಫೋನ್ ಮತ್ತು ಟಿವಿ ಬಂದ್ ಮಾಡಲು ನಿರ್ಧರಿಸಿದ್ದಾರೆ.
ಸುವರ್ಣ ವಿಧಾನಸೌಧದ ಬಳಿಯಿರುವ ಹಲಗಾ ಗ್ರಾಮದಲ್ಲಿ 1,452 ಮನೆಗಳಿವೆ. ಗ್ರಾಮದ ಬಹುತೇಕರ ಮನೆಗಳಲ್ಲಿ ಮಕ್ಕಳು ಮೊಬೈಲ್ ಫೋನ್ ಬಳಸುವುದು ಮತ್ತು ಮನೆಗಳಲ್ಲಿ ಕುಟುಂಬದವರು ಹೆಚ್ಚಾಗಿ ಟಿವಿ ವೀಕ್ಷಿಸುತ್ತಿರುವುದು ಗ್ರಾಮಸ್ಥರ ಗಮನಕ್ಕೆ ಬಂದಿತ್ತು.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಗ್ರಾಮವೊಂದರಲ್ಲಿ ಇಂಥದ್ದೇ ಸಮಸ್ಯೆಯನ್ನು ನಿವಾರಿಸಲು ಅಲ್ಲಿನ ಗ್ರಾಮಸ್ಥರು ನಿತ್ಯ ಸಂಜೆ ಎರಡು ಗಂಟೆ ಮೊಬೈಲ್, ಟಿವಿ ಬಳಕೆಗೆ ಕಡಿವಾಣ ಹಾಕಲು ನಿರ್ಧರಿಸಿದ್ದರು. ಇದು ಹಲಗಾ ಗ್ರಾಮಸ್ಥರಿಗೆ ಪ್ರೇರಣೆಯಾಗಿದೆ.
‘ಗ್ರಾಮ ಪಂಚಾಯಿತಿ ಕಚೇರಿ ಬಳಿಯಿರುವ ಸೈರನ್ ನಿತ್ಯ ಸಂಜೆ 7ಕ್ಕೆ ಮೊಳಗುತ್ತಿದ್ದಂತೆ, ಮೊಬೈಲ್ ಫೋನ್, ಟಿವಿ ಬಳಕೆ ನಿಲ್ಲಿಸಲು ಗ್ರಾಮಸ್ಥರಿಗೆ ಕೋರಿದ್ದೇವೆ. ಅವರು ಸ್ಪಂದಿಸಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಗೆಜಪತಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮಕ್ಕಳಲ್ಲಿ ಓದುವ ಹವ್ಯಾಸ ವೃದ್ಧಿಸಲು ಮತ್ತು ಸಂವಹನದ ಮೂಲಕ ಕುಟುಂಬಸ್ಥರಲ್ಲಿ ಬಾಂಧವ್ಯ ಬೆಳೆಸಲು ಕೈಗೊಂಡ ಈ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ’ ಎಂದು ಗ್ರಾಮಸ್ಥ ನಿಂಗಪ್ಪ ಕಾಲಿಂಗ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.