ADVERTISEMENT

ವೈಕಲ್ಯ ಮರೆಸಿದ ಪದಕಗಳ ಫಸಲು

ಬೆಳಗಾವಿಯ ಶ್ರೀಕಾಂತ ದೇಸಾಯಿ ಯಶೋಗಾಥೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 11:27 IST
Last Updated 2 ಡಿಸೆಂಬರ್ 2021, 11:27 IST
ಈಜು ತರಬೇತುದಾರ ಉಮೇಶ ಕಲಘಟಗಿ ಅವರೊಂದಿಗೆ ಶ್ರೀಕಾಂತ ದೇಸಾಯಿ
ಈಜು ತರಬೇತುದಾರ ಉಮೇಶ ಕಲಘಟಗಿ ಅವರೊಂದಿಗೆ ಶ್ರೀಕಾಂತ ದೇಸಾಯಿ   

ಬೆಳಗಾವಿ: ಪ್ರಸ್ತುತ, ಸಾಮಾಜಿಕ ಮಾಧ್ಯಮ ದ್ಬಳಕೆಗಿಂತ ದುರ್ಬಳಕೆ ಕುರಿತಾಗಿಯೇ ಹೆಚ್ಚು ಚರ್ಚೆಗೀಡಾಗುತ್ತಿದೆ. ಆದರೆ, ಇಲ್ಲೊಬ್ಬರ ಬಾಳಿಗೆ ಸಾಮಾಜಿಕ ಮಾಧ್ಯಮವೇ ಪ್ರೇರಣೆ ನೀಡಿದೆ. ‘ನನ್ನ ಬದುಕೇ ಮುಗಿದ್ಹೋಯ್ತು’ ಎಂದು ಭಾವಿಸಿದ್ದ ವ್ಯಕ್ತಿ, ಇಂದು ರಾಷ್ಟ್ರಮಟ್ಟದ ಈಜು ಸ್ಪರ್ಧೆಗಳಲ್ಲಿ ಮಿಂಚುತ್ತಿದ್ದಾರೆ.

ಇದು ಬೆಳಗಾವಿ ತಾಲ್ಲೂಕಿನ ಹಲಭಾವಿಯ 44ನೇ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ) ಬಟಾಲಿಯನ್‌ನಲ್ಲಿ ಕಾನ್‌ಸ್ಟೆಬಲ್‌ ಆಗಿರುವ ಶ್ರೀಕಾಂತ ದೇಸಾಯಿ (35) ಅವರ ಯಶೋಗಾಥೆ.

4 ವರ್ಷ ಆಸ್ಪತ್ರೆಯಲ್ಲೇ:

ADVERTISEMENT

‘2013ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದಾಗ ವಿದ್ಯುತ್ ಸ್ಪರ್ಶದಿಂದ ಬೆನ್ನು ಮೂಳೆಗೆ ತೊಂದರೆಯಾಯಿತು. ಹೊಟ್ಟೆಯಿಂದ ಕೆಳ ಭಾಗ ಸ್ವಾಧೀನವನ್ನೇ ಕಳೆದುಕೊಂಡಿತು. 4 ವರ್ಷ ಚಂಡೀಗಡ ಆಸ್ಪತ್ರೆಯಲ್ಲೇ ಚಿಕಿತ್ಸೆಗೆ ದಾಖಲಾಗಿದ್ದೆ. ಈ ವೇಳೆ ನನ್ನ ಬದುಕಿಗೇ ಕತ್ತಲು ಆವರಿಸಿದಂತಾಗಿತ್ತು. ಒಂದು ದಿನ ಯೂಟ್ಯೂಬ್‌ನಲ್ಲಿ ಅಂಗವಿಕಲರು ಕ್ರೀಡಾಕೂಟದಲ್ಲಿ ಸಾಧನೆ ಮೆರೆಯುತ್ತಿರುವ ವಿಡಿಯೊ ಕಣ್ಣಿಗೆ ಬಿತ್ತು. ಅಲ್ಲಿಂದ ನನ್ನ ಚಿಂತನಾ ಲಹರಿಯೇ ಬದಲಾಯಿತು’ ಎಂದು ಶ್ರೀಕಾಂತ ತಿಳಿಸಿದರು.

‘ದೈಹಿಕ ನ್ಯೂನತೆ ಮಧ್ಯೆಯೂ ಈಜು ಸ್ಪರ್ಧೆಯಲ್ಲಿ ಸಾಧನೆ ಮಾಡಿದವರ ವಿಡಿಯೊಗಳನ್ನು ಆಸ್ಪತ್ರೆಯಲ್ಲಿ ನಿತ್ಯವೂ ಸಾಮಾಜಿಕ ಮಾಧ್ಯಮ, ಯೂಟ್ಯೂಬ್‌ನಲ್ಲಿ ವೀಕ್ಷಿಸಲು ಆರಂಭಿಸಿದೆ. ಅವು ನನ್ನಲ್ಲಿ ಸ್ಫೂರ್ತಿ ತುಂಬಿದವು. 2018ರಲ್ಲಿ ಬೆಳಗಾವಿಗೆ ಮರಳಿದಾಗ ತರಬೇತುದಾರ ಉಮೇಶ ಕಲಘಟಗಿ ಸಂಪರ್ಕಿಸಿದೆ. ಅವರು ನನ್ನಲ್ಲಿ ಧೈರ್ಯ ತುಂಬಿ ನಾಲ್ಕೈದು ತಿಂಗಳಲ್ಲೇ ಈಜು ಕಲಿಸಿದರು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

10 ಪದಕ ಬಾಚಿಕೊಂಡರು:

ನಗರದ ಕೆಎಲ್ಇ ಸಂಸ್ಥೆಯ ಜೆಎನ್ಎಂಸಿ ಈಜುಕೊಳದಲ್ಲಿ ಅಭ್ಯಾಸ ನಡೆಸುವ ಅವರು, 2021ರಲ್ಲಿ ಬೆಂಗಳೂರಿನಲ್ಲಿ ನಡೆದ 20ನೇ ನ್ಯಾಷನಲ್ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀ. ಬ್ಯಾಕ್ ಸ್ಟ್ರೋಕ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಇದೇ ವರ್ಷ ಕೇರಳದಲ್ಲಿ ನಡೆದ ಮೊದಲ ಪ್ಯಾರಾ ಮಾಸ್ಟರ್ ನ್ಯಾಷನಲ್ ಔಟ್ ಡೋರ್ ಗೇಮ್ಸ್‌ನಲ್ಲಿ 50 ಮೀ. ಫ್ರೀ ಸ್ಟೈಲ್, 50 ಮೀ. ಬ್ರೆಸ್ಟ್ ಸ್ಟ್ರೋಕ್ ಹಾಗೂ 100 ಮೀ. ಬ್ಯಾಕ್ ಸ್ಟ್ರೋಕ್ ವಿಭಾಗಗಳಲ್ಲಿ ತಲಾ ಒಂದು ಚಿನ್ನದ ಪದಕ ಗೆದ್ದಿದ್ದಾರೆ. ರಾಜ್ಯ ಮಟ್ಟದ ಟೂರ್ನಿಗಳಲ್ಲಿ 6 ಚಿನ್ನದ ಪದಕ ಬಾಚಿಕೊಂಡಿದ್ದಾರೆ. 2022ರ ಮೇ ತಿಂಗಳಲ್ಲಿ ಜಪಾನ್‌ನಲ್ಲಿ ನಿಗದಿಯಾಗಿರುವ ಪ್ಯಾರಾ ಮಾಸ್ಟರ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡ ಪ್ರತಿನಿಧಿಸಲಿದ್ದು, ಅಭ್ಯಾಸ ನಡೆಸುತ್ತಿದ್ದಾರೆ.

‘ಸರಿಯಾಗಿ ಬಳಸಿದರೆ ಸಾಮಾಜಿಕ ಮಾಧ್ಯಮವೂ ಕೈಹಿಡಿಯುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿ’ ಎನ್ನುತ್ತಾರೆ.

ಆತ್ಮವಿಶ್ವಾಸವಿರಲಿ

ಎಷ್ಟೇ ನ್ಯೂನತೆಗಳಿದ್ದರೂ ಎದೆಗುಂದದೆ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. 2024ರ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಡುವುದೇ ನನ್ನ ಗುರಿ.

–ಶ್ರೀಕಾಂತ ದೇಸಾಯಿ, ಈಜುಪಟು, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.