ADVERTISEMENT

ಕುಣಿಯಲು ಬಾರದವರು ನೆಲ ಡೊಂಕು ಅಂದ್ರಂತೆ :ಕುಮಾರಸ್ವಾಮಿ ಹೇಳಿಕೆಗೆ ಸವದಿ ಟೀಕೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 1:25 IST
Last Updated 11 ಸೆಪ್ಟೆಂಬರ್ 2020, 1:25 IST
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ   

ಬೆಳಗಾವಿ: ‘ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ್ದೇ ಡ್ರಗ್ಸ್‌ ದಂಧೆಕೋರರು ಎಂಬ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆ ನೋಡಿ ನಗು ಬಂತು. ಅವರ ಮಾತು, ಕುಣಿಯಲು ಬಾರದವರು ನೆಲ ಡೊಂಕು ಎನ್ನುವಂತಿದೆ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಟೀಕಿಸಿದರು.

ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ತಮ್ಮ ಅಧಿಕಾರ ಅವಧಿಯಲ್ಲಿ ಡ್ರಗ್ಸ್‌ ಮಾಫಿಯಾ ಇತ್ತು. ಆದರೆ, ನಿಭಾಯಿಸಲು ಅಸಮರ್ಥನಾಗಿದ್ದೆ ಎಂದು ಅವರೇ ಹೇಳಿಕೊಂಡಂತಾಗಿದೆ’ ಎಂದು ಕುಟುಕಿದರು.

‘ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಸರ್ಕಾರ ಸಿದ್ಧವಿದೆ. ತನಿಖೆಯಲ್ಲಿ ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಗೃಹ ಸಚಿವರು ನಿಗಾ ಇಟ್ಟಿದ್ದಾರೆ. ರಾಜಕಾರಣಿಗಳು, ಅಧಿಕಾರಿಗಳು ಮಕ್ಕಳೋ ಯಾರೇ ಇದ್ದರೂ ಕ್ರಮವಾಗಲಿದೆ. ಮಾದಕ ವಸ್ತುಗಳ ಜಾಲದಿಂದ ರಾಜ್ಯದ ಯಾವುದೇ ಜಿಲ್ಲೆಯೂ ಹೊರತಾಗಿಲ್ಲ’ ಎಂದರು.

ADVERTISEMENT

‘ಈಗ ಬಂಧಿತರಾಗಿರುವ ರಾಗಿಣಿ ಹಾಗೂ ಸಂಜನಾ ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಜೊತೆಗಿರುವ ಫೋಟೊಗಳು ಕೂಡ ಹರಿದಾಡುತ್ತಿವೆ. ಆ ನಟಿಯರು ಡ್ರಗ್ಸ್ ಮಾಫಿಯಾದಲ್ಲಿ ಇದ್ದರೆಂದು ಆ ನಾಯಕರಿಗಾಗಲಿ, ನಮಗಾಗಲಿಗೊತ್ತಿರಲಿಲ್ಲ. ಚುನಾವಣೆ ಸಂದರ್ಭದಲ್ಲಿ ಜನಾಕರ್ಷಣೆಗೆ ತಾರೆಯರನ್ನು ಕರೆತರುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.