ADVERTISEMENT

ಲಂಚ ಪಡೆದ ಹೆಡ್‌ ಕಾನ್ಸ್‌ಟೆಬಲ್‌ಗೆ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2019, 13:42 IST
Last Updated 11 ಜನವರಿ 2019, 13:42 IST

ಬೆಳಗಾವಿ: ಪ್ರಕರಣವೊಂದನ್ನು ಮುಚ್ಚಿಹಾಕಲು ₹ 4,000 ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದ ಬೆಳಗಾವಿ ಗ್ರಾಮೀಣ ಪೊಲೀಸ್‌ ಠಾಣೆಯ ಹೆಡ್‌ ಕಾನ್ಸ್‌ಟೆಬಲ್‌ ಅನಿಲಕುಮಾರ ಭೀಮರಾವ ಮಾಲಗಾವಿಗೆ ಜೈಲು ಶಿಕ್ಷೆ ವಿಧಿಸಿ 4ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಶಶಿಧರ ಶೆಟ್ಟಿ ಶುಕ್ರವಾರ ಆದೇಶ ನೀಡಿದ್ದಾರೆ.

ತಮ್ಮ ಹಾಗೂ ಸ್ನೇಹಿತನ ಮೇಲಿರುವ ಪ್ರಕರಣವನ್ನು ಮುಚ್ಚಿಹಾಕಲು ಅನಿಲಕುಮಾರ ₹ 5,000 ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ರಾಯಬಾಗ ತಾಲ್ಲೂಕಿನ ಮಾವಿನಹೊಂಡದ ಉದಯ ಸಿದ್ದಪ್ಪ ಮಾಂಗ ಲೋಕಾಯುಕ್ತಕ್ಕೆ 2014ರ ಸೆಪ್ಟೆಂಬರ್‌ 5ರಂದು ದೂರು ಸಲ್ಲಿಸಿದ್ದರು.

ದೂರಿನ ಮೇರೆಗೆ ಬಲೆ ಬೀಸಿದ ಲೋಕಾಯುಕ್ತ ಅಧಿಕಾರಿಗಳು, ₹ 4,000 ಲಂಚ ಸ್ವೀಕರಿಸುತ್ತಿದ್ದಾಗ ಅನಿಲಕುಮಾರನನ್ನು ಬಂಧಿಸಿದ್ದರು.

ADVERTISEMENT

ವಿಚಾರಣೆ ನಡೆಸಿದ ನ್ಯಾಯಾಧೀಶರು, ಲಂಚ ತಡೆ ಕಾಯ್ದೆ 1988ರ ಕಲಂ 7ರ ಅಡಿ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹ 5,000 ದಂಡ ಹಾಗೂ ಕಲಂ 13(1) ಡಿ ಸಹ ಕಲಂ 13 (2) ಅಡಿ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹ 8,000 ದಂಡ ವಿಧಿಸಿ ಆದೇಶ ನೀಡಿದ್ದಾರೆ.

ವಿಶೇಷ ಸರ್ಕಾರಿ ಅಭಿಯೋಜಕ ಕೆ.ಆರ್ ಎಕ್ಸಂಬಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.