ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ವೀರಣ್ಣ ಮಡಿವಾಳರ ಅವರು ಪ್ರತಿಭಟನೆ ನಡೆಸಿದರು
ರಾಯಬಾಗ(ಬೆಳಗಾವಿ ಜಿಲ್ಲೆ): ನಿಡಗುಂದಿ ಗ್ರಾಮದ ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳ ಸಂಖ್ಯೆ ಅನುಸಾರ ಕೊಠಡಿಗಳ ಮಂಜೂರಾತಿಗೆ ಕೋರಿ ಮಂಗಳವಾರ ಶಾಲೆಯ ಮುಖ್ಯಶಿಕ್ಷಕ ವೀರಣ್ಣ ಮಡಿವಾಳರ ಉಪವಾಸ ಮತ್ತು ಮೌನ ಕಾಲ್ನಡಿಗೆ ಜಾಥಾವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯವರೆಗೆ ಕೈಗೊಂಡರು.
‘ಈ ಶಾಲೆಯಲ್ಲಿ 146 ವಿದ್ಯಾರ್ಥಿಗಳಿದ್ದರೂ ಅಗತ್ಯ ಕೊಠಡಿಗಳಿಲ್ಲ. ಈ ಹಿಂದೆ ಶಿಕ್ಷಣ ಇಲಾಖೆ ಆಯುಕ್ತರಾಗಿದ್ದ ಅನ್ಬುಕುಮಾರ ಅವರು ಶಾಲೆಗೆ ಅಗತ್ಯವಾಗಿದ್ದ 3 ಶಾಲಾ ಕೊಠಡಿಗಳನ್ನು ಮಂಜೂರು ಮಾಡಿ ಮೂರು ವರ್ಷಗಳೇ ಕಳೆದಿದೆ. ಆದರೆ, ಈವರೆಗೆ ಈ ಬೇಡಿಕೆ ಈಡೇರಿಲ್ಲ’ ಎಂದು ವೀರಣ್ಣ ಹೇಳಿದರು.
ವೀರಣ್ಣ ಮಡಿವಾಳರ ಅವರು ಮಂಗಳವಾರ ಮೌನ ಕಾಲ್ನಡಿಗೆ ಜಾಥಾ ನಡೆಸಿದರು
‘ಮೇಲಧಿಕಾರಿಗಳ ಮೂಲಕ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ರಾಯಬಾಗ ತಹಶೀಲ್ದಾರ್ ಸುರೇಶ ಮುಂಜೆ ಅವರು ಹೇಳಿದ ಬಳಿಕ ವೀರಣ್ಣ ಪ್ರತಿಭಟನೆ ಹಿಂಪಡೆದರು.
‘ಸರ್ಕಾರಿ ಶಾಲೆಗೆ ಕೊಠಡಿಗಳನ್ನು ಮಂಜೂರು ಮಾಡುವಂತೆ ಕೋರಿದ್ದು ಒಳ್ಳೆಯ ವಿಚಾರ. ಆದರೆ, ಸರ್ಕಾರಿ ಶಾಲಾ ಶಿಕ್ಷಕರಾಗಿ ಶಿಕ್ಷಣ ಇಲಾಖೆ ವಿರುದ್ಧ ಪ್ರತಿಭಟಿಸಿದ್ದು ತಪ್ಪು. ಇದರಿಂದ ಶಿಕ್ಷಣ ಇಲಾಖೆಗೆ ಮುಜುಗರವಾಗಿದೆ. ಸರ್ಕಾರದ ವಿರುದ್ಧ ತಪ್ಪು ಸಂದೇಶ ರವಾನೆಯಾಗುತ್ತದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ.ಆರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.