ಅಮಾನತು
ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲ್ಲೂಕಿನ ನಿಡಗುಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಅವರನ್ನು ಅಮಾನತು ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಜೂನ್ 11ರಂದು ಬೆಳಿಗ್ಗೆ 11ಕ್ಕೆ ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಡಿಡಿಪಿಐ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಮನ್ಸ್ ಜಾರಿ ಮಾಡಿದೆ.
ತಮ್ಮ ಶಾಲೆಗೆ ಹೆಚ್ಚುವರಿ ಕೊಠಡಿಗಳನ್ನು ಕಟ್ಟಿಸಿಕೊಡಬೇಕು ಎಂದು ಆಗ್ರಹಿಸಿ ವೀರಣ್ಣ ಅವರು ಮೌನ ಪ್ರತಿಭಟನೆ ಮಾಡಿದ್ದರು. ಇಲಾಖೆಯ ಶಿಸ್ತನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ನಿಖರ ವರದಿಗಳು ಪ್ರಕಟವಾದವು. ಅವುಗಳ ಆಧಾರದ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಆಯೋಗ ತಿಳಿಸಿದೆ.
‘ಉಪವಾಸ ಪ್ರತಿಭಟನೆ ನಡೆಸಿದವರನ್ನು ಅಮಾನತ್ತು ಮಾಡಲಾಗಿದೆ. ಈ ಮೂಲಕ ಮಕ್ಕಳ ಶಿಕ್ಷಣದ ಹಕ್ಕನ್ನು ಹತ್ತಿಕ್ಕಲಾಗಿದೆ. ಗ್ರಾಮೀಣ ಭಾಗದಲ್ಲಿ ಅದರಲ್ಲೂ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಕುಟುಂಬದಿಂದ ಬಂದ ಮಕ್ಕಳು ಹೆಚ್ಚಾಗಿ ಸರ್ಕಾರಿ ಶಾಲೆಗಳನ್ನೇ ಅವಲಂಬಿಸಿದ್ದಾರೆ. ಮುಖ್ಯ ಶಿಕ್ಷಕರು 9 ವರ್ಷಗಳಿಂದ ಶಾಲೆ ಅಭಿವೃದ್ಧಿಗೆ ಹೋರಾಡಿದ್ದಾರೆ. ಶಿಕ್ಷಕರ ಈ ಕ್ರಮವನ್ನು ಆಯೋಗವು ಎತ್ತಿ ಹಿಡಿಯುವುದಲ್ಲದೇ, ಇವರ ವಿರುದ್ಧ ಅಮಾನತ್ತಿನಂತಹ ಕ್ರಮ ಜರುಗಿಸಿದ್ದನ್ನು ಗಂಭೀರವಾಗಿ ಪರಿಗಣಿಸುತ್ತದೆ. ಮತ್ತು ಶಾಲೆಗಾಗಿ ಕೊಠಡಿ ಬೇಡಿಕೆ ಇಟ್ಟಿದ್ಯು ನಿಯಮಬಾಹಿರವಲ್ಲ ಎಂದು ಆಯೋಗವು ಭಾವಿಸುತ್ತದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಕೈಗೊಂಡ ಕ್ರಮಗಳ ಮಾಹಿತಿಯನ್ನು, ಅಗತ್ಯ ದಾಖಲೆಗಳನ್ನು ನೇರವಾಗಿ ಮತ್ತು ಖುದ್ದಾಗಿ ಕಡ್ಡಾಯವಾಗಿಸಲ್ಲಿಸಬೇಕು’ ಎಂದೂ ಹೇಳಿದೆ.
ಸೆಕ್ಷನ್ 14(1) (ಎ) ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕಾಯ್ದೆ 2005ರ ಅನ್ವಯ ಈ ಸಮನ್ಸ್ ಜಾರಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.