ಇಲ್ಲಿನ ಕಟಕೋಳ ಬ್ಯಾಂಕ್ ವೃತ್ತದ ರಸ್ತೆ ಮೇಲೆ ನೀರು ನಿಂತು ಜನರು ಪರದಾಡಿದರು.
ಸವದತ್ತಿ: ಸ್ಥಳೀಯವಾಗಿ ಶುಕ್ರವಾರ ಎರಡು ಗಂಟೆಗೂ ಅಧಿಕ ಕಾಲ ಭಾರಿ ಪ್ರಮಾಣದಲ್ಲಿ ಸುರಿದ ಧಾರಾಕಾರ ಮಳೆಯಿಂದ ಸಿದ್ದನಕೊಳ್ಳ, ಸಂಗಪ್ಪನಕೊಳ್ಳ, ದಬದಭೆಗಳು ಮೈದುಂಬಿ ಹರಿದವು.
ಸುರಿದ ಅಧಿಕ ಪ್ರಮಾಣದ ಮಳೆಯಿಂದ ನಗರ ಸೇರಿ ಎಲ್ಲೆಡೆ ರಸ್ತೆಗಳ ಮೇಲೆ ನೀರು ಹರಿದು ಸವಾರರು ಪರದಾಡುಂವತಾಯಿತು. ಬಜಾರ ಮಾರ್ಗ, ಆನಿ ಅಗಸಿ, ಕಟಕೋಳ ಬ್ಯಾಂಕ ವೃತ್ತ, ರಾಮಾಪೂರ ಸೈಟ್ ಸೇರಿ ರಸ್ತೆಗಳೆಲ್ಲವೂ ಜಲಾವೃತಗೊಂಡಿದ್ದವು. ಸಂಜೆ ಸಮಯ ಶಾಲೆ ಬಿಟ್ಟು ಮನೆ ಸೇರುವ ಮಕ್ಕಳು ಮನೆಗಳಿಗೆ ತೆರಳು ಸಾಧ್ಯವಾಗದೇ ಹರಸಾಹಸ ಪಟ್ಟರು. ಜನರು ನೀರಿನಲ್ಲಿ ಸಂಚರಿಸುವಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿದರು. ಗುರ್ಲಹೊಸೂರು ಬಡಾವಣೆಯ ಕೆಲ ರಸ್ತೆಗಳಲ್ಲಿ ಕಾಂಕ್ರೀಟ್ ಸಿಡಿ ಒಡೆದು ರಸ್ತೆ ಮೇಲೆ ಹರಿದು ಜನ ಪರದಾಡಿದರು.
ಕಟಕೋಳ ಬ್ಯಾಂಕ್ ರಸ್ತೆ ಮೇಲೆ ಹರಿವ ನೀರಲ್ಲಿ ಹಾವು ಕಾಣಿಸಿಕೊಂಡು ಕೆಲಕಾಲ ಸಾರ್ವಜನಿಕರು ಭಯದಲ್ಲಿ ಸಾಗಿದರು. ಜಾಲತಾಣದಲ್ಲಿ ಹಂಚಿಕೊಂಡ ಸಮಸ್ಯೆಗಳ ಕುರಿತು ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಹಾಗೂ ಅಧಿಕಾರಿಗಳು ಮಳೆಯಲ್ಲಿಯೇ ನಗರ ಸಂಚಾರ ನಡೆಸಿ ಪರಿಶೀಲಿಸಿದರು. ಅಲ್ಲಲ್ಲಿ ಒಡೆದ ಗಟಾರು, ತುಂಬಿದ ಚರಂಡಿಗಳನ್ನು ಪುರಸಭೆಯಿಂದ ಸ್ವಚಗೊಳಿಸುವ ಕಾರ್ಯ ನಡೆಯಿತು.
ರಾಮಾಪೂರ ಸೈಟಿನ ಮರೆಮ್ಮದೇವಿ ದೇವಸ್ಥಾನ, ಖಾದಿ ಗ್ರಾಮೋದ್ಯೋಗ, ದ್ಯಾಮವ್ವನ ದೇವಸ್ಥಾನ, ಬೆಳ್ಳುಬ್ಬಿ, ಜನತಾ ಪ್ಲಾಟ, ಭಗೀರಥ ವೃತ್ತ, ಬೇವಿನಕಟ್ಟಿ, ಸವಳಭಾವಿ, ಚಿನಿವಾಲರ, ಕೊಳ್ಳಾರ, ಹಗ್ಗದೇವರ, ಬಾಲೇಶನವರ, ಹೊಸಪೇಟಿ, ಗಿರಿಜಣ್ಣವರ, ಬೆಣ್ಣಿಕಟ್ಟಿ, ಕುಂಬಾರ, ಕಲಾದಗಿ, ದಿವಟಗಿ ಓಣಿ ಹಾಗೂ ಮೊಖಾಶಿ ಗಲ್ಲಿಗಳಲ್ಲಿ ನೀರು ಕಾಲುವೆ ಭರ್ತಿಯಾಗಿ ರಸ್ತೆ ಮೇಲೆ ಹರಿಯಿತು. ರಸ್ತೆ ಮೇಲೆ ನಿಂತ ಕೆಲ ವಾಹನಗಳ ಎಂಜಿನ್‌ಗಳಲ್ಲಿ ನೀರು ನುಗ್ಗಿ ಜಖಂಗೊಂಡಿವೆ. ದನಕರುಗಳಿಗೆ ಸಂಗ್ರಹಿಸಿಟ್ಟ ಮೇವು ಕೆಲವೆಡೆ ಕೊಚ್ಚಿಹೋಗಿದೆ.
ತಾಲ್ಲೂಕಿನ ಉಗರಗೋಳ, ಹಿರೇಕುಂಬಿ, ಚುಳಕಿ, ಚಿಕ್ಕುಂಬಿ ಗ್ರಾಮಗಳಲ್ಲಿ ಮಳೆ ಸುರಿದು ಕೆಲ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಪರಿಣಾಮ ಜನಜೀವನ ಅಸ್ತವ್ಯಸ್ಥಗೊಂಡಿತು. ಮಳೆ ಸುರಿದಾಗ ನಗರದಲ್ಲಿ ಸಂಚರಿಸಿ ಮತ್ತೆ ಕಚೇರಿ ಸೇರುವ ಅಧಿಕಾರಿಗಳು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುತ್ತಿಲ್ಲ. ರಾಜ ಕಾಲುವೆ ಮೇಲೆ ನಿರ್ಮಿಸಿದ ಕಾಂಪ್ಲೆಕ್ಸ್‌ನಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಇದನ್ನು ಪುರಸಭೆ ಗಮನಿಸಬೇಕೆಂದು ಸವದತ್ತಿ ನಾಗರಿಕ ವೇದಿಕೆ ಪ್ರಮುಖ ಮಲ್ಲಿಕಾರ್ಜುನ ಬೀಳಗಿ ಆಗ್ರಹಿಸಿದರು.
ಮನೆ ಹಾನಿ: ಜೂನ್ 1 ರಿಂದ ಅ. 8 ವರೆಗೆ ತಾಲ್ಲೂಕಿನಾದ್ಯಂತ 25 ಮನೆಗಳು ಭಾಗಶಃ ಹಾನಿಗೀಡಾದ ವರದಿಯಾಗಿದೆ. ಈ ಮನೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಜಲಾವೃತ್ತಗೊಂಡ ಯಲ್ಲಮ್ಮ ದೇವಸ್ಥಾನ : ತಾಲ್ಲೂಕಿನಾದ್ಯಂತ ಸುರಿದ ಮಳೆಗೆ ಯಲ್ಲಮ್ಮ ದೇವಸ್ಥಾನ ಸಂಪೂರ್ಣ ಜಲಾವೃತ್ತಗೊಂಡಿತು. ಗುಡ್ಡಗಳಿಂದ ಹರಿದ ರಭಸದ ನೀರು ಎಲ್ಲೆಡೆ ನುಗ್ಗಿತು. ಎಣ್ಣೆಹೊಂಡ, ಪರಶುರಾಮ ದೇವಸ್ಥಾನ, ಕ್ಯೂಲೈನ್, ದೇಗುಲದ ಪ್ರಾಂಗಣ, ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಭಾರಿ ಪ್ರಮಾಣದ ನೀರು ಹರಿದು ಜನರು ಪರದಾಡಿದರು.
ಇಲ್ಲಿನ ಕಟಕೋಳ ಬ್ಯಾಂಕ್ ವೃತ್ತದ ರಸ್ತೆ ಮೇಲೆ ನೀರು ನಿಂತು ಜನತೆ ಪರದಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.