ADVERTISEMENT

ಬೆಳಗಾವಿ: ಕಾಲುವೆಯಂತಾದ ರಸ್ತೆಗಳು, ಮನೆಗಳು ಜಲಾವೃತ

ಬೆಳಗಾವಿ ನಗರದಲ್ಲಿ ಮಳೆ ಅಬ್ಬರಕ್ಕೆ ಜನಜೀವನ ತತ್ತರ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 12:25 IST
Last Updated 23 ಜುಲೈ 2021, 12:25 IST
ಸತತ ಮಳೆಯಿಂದಾಗಿ ಬೆಳಗಾವಿಯ ಶಿವಾಜಿನಗರದ 5ನೇ ಮುಖ್ಯರಸ್ತೆಯಲ್ಲಿ ಮನೆಯೊಂದರ ಗೋಡೆ ಕುಸಿದಿದೆ
ಸತತ ಮಳೆಯಿಂದಾಗಿ ಬೆಳಗಾವಿಯ ಶಿವಾಜಿನಗರದ 5ನೇ ಮುಖ್ಯರಸ್ತೆಯಲ್ಲಿ ಮನೆಯೊಂದರ ಗೋಡೆ ಕುಸಿದಿದೆ   

ಬೆಳಗಾವಿ: ನಗರವೂ ಸೇರಿದಂತೆ ತಾಲ್ಲೂಕಿನಲ್ಲಿ ಮಳೆಯ ಅಬ್ಬರ ಶುಕ್ರವಾರವೂ ಮುಂದುವರಿದಿದ್ದು, ಜನಜೀವನ ತತ್ತರಿಸಿ ಹೋಗಿದೆ. ಕೆಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಗೋಡೆಗಳು ಕುಸಿದಿವೆ. ಅಲ್ಲಲ್ಲಿ ಸಂಪರ್ಕ ಕಡಿತಗೊಂಡಿದೆ.

ಗುರುವಾರದಿಂದಲೂ ಸುರಿಯುತ್ತಿರುವ ಮಳೆಯಿಂದಾಗಿ ಬಳ್ಳಾರಿ ನಾಲಾ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ, ಹೊರವಲಯದಲ್ಲಿರುವ ನಾಲೆಯ ಅಕ್ಕಪಕ್ಕದ ಭತ್ತ ಮೊದಲಾದ ನೂರಾರು ಎಕರೆ ಬೆಳೆಗಳು ಮುಳುಗಿವೆ.

ತಿಲಕವಾಡಿ ಪ್ರದೇಶದ ಕರಿಯಪ್ಪ ಕಾಲೊನಿ, ಮರಾಠಾ ಕಾಲೊನಿ, ಶಾಸ್ತ್ರಿನಗರ, ನಾನಾವಾಡಿ, ಟಿಳಕವಾಡಿಯ ಪಂಚಾಮೃತ ಹೋಟೆಲ್ ಎದುರಿನ ರಸ್ತೆ ಹೀಗೆ... ಹಲವೆಡೆ ರಸ್ತೆಗಳಲ್ಲಿ ನೀರು ಸಂಗ್ರಹವಾಗಿತ್ತು. ಮನೆಗಳಿಗೆ ನೀರು ನುಗ್ಗಿದ್ದರಿಂದ, ನಿವಾಸಿಗಳು ತೀವ್ರ ತೊಂದರೆ ಅನುಭವಿಸಿದರು. ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿದು ಹೋಗುವುದಕ್ಕೆ ವ್ಯವಸ್ಥೆ ಇಲ್ಲದಿರುವುದು ಹಾಗೂ ನಿರಂತರವಾಗಿ ಜೋರು ಮಳೆ ಆಗುತ್ತಿದ್ದುದ್ದರಿಂದ ಮನೆಗಳು ಜಲಾವೃತವಾಗಿವೆ.

ADVERTISEMENT

ಶಾಹೂನಗರದ ಬೆನಕೆ ಕಾಲೊನಿಯಲ್ಲೂ ಮಳೆ ನೀರು ಮನೆಗಳನ್ನು ಸುತ್ತುವರಿದಿತ್ತು. ತಾಲ್ಲೂಕಿನ ಪೀರನವಾಡಿಯಲ್ಲಿ 15ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಚರಂಡಿ ಉಕ್ಕಿದ್ದರಿಂದಾಗಿ ನೀರು ರಸ್ತೆಯಲ್ಲಿ ಹರಿಯುತ್ತಿತ್ತು.

ಶಿವಾಜಿನಗರ 5ನೇ ಮುಖ್ಯರಸ್ತೆಯಲ್ಲಿ ಹಲವು ಮನೆಗಳ ಗೋಡೆಗಳು ಕುಸಿದಿವೆ. ರಾಮಚಂದ್ರ ವಿ. ಚೌಗುಲೆ, ರಾಜೇಂದ್ರ ನಿಲಜಕರ, ಸುನೀಲ್ ಜಿ. ನಿಲಜಕರ ಎನ್ನುವವರ ಮನೆಗಳ ಗೋಡೆಗಳು ಬಿದ್ದಿವೆ. ಇದರಿಂದಾಗಿ, ಆ ಕುಟುಂಬದವರು ತೊಂದರೆಗೆ ಸಿಲುಕಿದ್ದಾರೆ.

ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಮಳೆಯಿಂದಹಾನಿಗೊಳಗಾದ ನಾನಾವಾಡಿ, ಶಾಸ್ತ್ರಿನಗರ ಮೊದಲಾದ ‍ಪ್ರದೇಶಗಳಿಗೆ ಭೇಟಿನೀಡಿಪರಿಶೀಲಿಸಿದರು. ಸ್ವತಃ ಕೊಡೆ ಹಿಡಿದುಕೊಂಡು ರಸ್ತೆಗಳಲ್ಲಿ ನಡೆದಾಡಿ, ಪರಿಸ್ಥಿತಿ ಅವಲೋಕಿಸಿದರು. ಜನರ ಸಮಸ್ಯೆಗಳನ್ನು ಆಲಿಸಿದರು. ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲು ಪ್ರಯತ್ನಿಸಿದರು. ನಗರಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕರೆಸಿ, ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಿಸಿದರು.

ತಾಲ್ಲೂಕಿನ ಕಡೋಳಿ ರಸ್ತೆಯಲ್ಲಿ ಮಾರ್ಕಂಡೇಯ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಬೆಳಗಾವಿ ತಾಲ್ಲೂಕಿನ ಬೆನಕನಹಳ್ಳಿ–ಬೆಳಗುಂದಿ–ರಕ್ಕಸಕೊಪ್ಪ ರಸ್ತೆ ಜಲವೃತವಾಗಿದ್ದು, ಸಂಚಾರ ಬಂದ್ ಆಗಿದೆ. ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಾಲ್ಲೂಕಿನ ವಂಟಮೂರಿ ಘಾಟ್‌ನಲ್ಲಿ ಶುಕ್ರವಾರವೂ ನೀರು ಸಂಗ್ರಹವಾಗಿತ್ತು. ಇದರಿಂದ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.