ADVERTISEMENT

ಬೆಳಗಾವಿ: ಮಳೆ ನಿಂತರೂ ನಿಲ್ಲದ ಅವಾಂತರ 

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 9:10 IST
Last Updated 9 ಆಗಸ್ಟ್ 2022, 9:10 IST
ಬೆಳಗಾವಿ: ಮಳೆ ನಿಂತರೂ ನಿಲ್ಲದ ಅವಾಂತರ 
ಬೆಳಗಾವಿ: ಮಳೆ ನಿಂತರೂ ನಿಲ್ಲದ ಅವಾಂತರ    

ಬೆಳಗಾವಿ: ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆಯಿಂದ ಮಳೆ ತುಸು ಬಿಡುವು ನೀಡಿದೆ. ನಗರದಲ್ಲಿ ತುಂತುರು ಮಳೆ ನಿರಂತರವಾಗಿದೆ.

ಸೋಮವಾರ ಸುರಿದ ಮಳೆಯ ಕಾರಣ ಇಲ್ಲಿನ ಪಾಟೀಲ ಗಲ್ಲಿಯಲ್ಲಿ ಒಳಚರಂಡಿ ತುಂಬಿಕೊಂಡು, ಮಳೆಯ ನೀರು ಅಕ್ಕಪಕ್ಕದ ಮನೆಗಳಿಗೆ ನುಗ್ಗಿತು. ಮಂಗಳವಾರ ಕೂಡ ಈ ಅವಾಂತರ ಮುಂದುವರಿಯಿತು. ಮನೆಯೊಳಗೆ ನುಗ್ಗಿದ ನೀರನ್ನು ಹೊರಹಾಕಲು ಜನ ಪರದಾಡುವುದು ಸಾಮಾನ್ಯವಾಗಿತ್ತು. ಪಾಟೀಲ ಗಲ್ಲಿಯಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ನೀರು ಹೊಕ್ಕಿದೆ.

ಅಧಿಕಾರಿಗಳು ಸರಿಯಾಗಿ ಚರಂಡಿ ನಿರ್ವಹಣೆ ಮಾಡದಿರುವುದೇ ನಮ್ಮ ಸಂಕಷ್ಟಕ್ಕೆ ಕಾರಣ. ಕೂಡಲೇ ಚರಂಡಿ ದುರಸ್ತಿ ಮಾಡಿಸಬೇಕು ಎಂದು ಇಲ್ಲಿನ ನಿವಾಸಿ ಚಿರಾಗ್ ಪೊರ್‍ವಾಲ್ ಹಾಗೂ ಕುಟುಂಬದವರು ಆಗ್ರಹಿಸಿದರು.

ADVERTISEMENT

ಸೇತುವೆ ಸಂಚಾರ ಬಂದ್

ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ಮಂಗಳವಾರ ಕೂಡ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಇದರಿಂದ ಚಿಕ್ಕೋಡಿ, ನಿಪ್ಪಾಣಿ, ಮೂಡಲಗಿ, ಗೋಕಾಕ ತಾಲ್ಲೂಕಿನ ಆರು ಕಿರು ಸೇತುವೆಗಳು ಮುಳುಗಿದ್ದು, ಸಂಚಾರ ಬಂದ್ ಆಗಿದೆ.

ಗೋಕಾಕ ಹೊರವಲಯದ ಶಿಂಗಳಾಪುರ ಸೇತುವೆ ಮತ್ತೊಮ್ಮೆ ಜಲಾವೃತಗೊಂಡಿದ್ದು, ಮಂಗಳವಾರ ಕೂಡ ಸಂಚಾರ ಬಂದ್ ಆಗಿದೆ. ಮುಂಜಾಗ್ರತಾ ಕ್ರಮವಾಗಿ ಎರಡೂ ಕಡೆಗಳಲ್ಲಿ ಪೊಲೀಸರು ಕಾವಲು ನಿಂತಿದ್ದಾರೆ.

ಮೂಡಲಗಿ ತಾಲ್ಲೂಕಿನ ಸುಣಧೋಳಿ ಹಾಗೂ ಅವರಾದಿ ಸೇತುವೆಗಳು ಕೂಡ ಮುಳುಗಡೆಯಾಗಿವೆ.

ದೇವಸ್ಥಾನ, ದರ್ಗಾಗೆ ನುಗ್ಗಿದ ನೀರು

ನಿಪ್ಪಾಣಿ ತಾಲ್ಲೂಕಿನ ಕಾರದಗಾ ಗ್ರಾಮದ ಬಂಗಾಲಿ ಬಾಬಾ ಮಂದಿರದ ಸುತ್ತ ದೂಧಗಂಗಾ ನದಿ ನೀರು ಆವರಿಸಿದೆ.

ಇನ್ನೊಂದೆಡೆ, ನಿಪ್ಪಾಣಿ ತಾಲ್ಲೂಕಿನ ಹುನ್ನರಗಿ ಗ್ರಾಮದ, ವೇದಗಂಗಾ ನದಿ ತೀರದಲ್ಲಿರುವ ಲಕ್ಷ್ಮೀ- ನಾರಾಯಣ ಮಂದಿರದಲ್ಲಿ ಸೋಮವಾರವೇ ನದಿ ನೀರು ನುಗ್ಗಿದೆ. ಮಂಗಳವಾರ ಕೂಡ ದೇವಸ್ಥಾನ ಪ್ರವೇಶ ಸಾಧ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.