ADVERTISEMENT

ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಚಿಕ್ಕೋಡಿ ತಾಲೂಕಿನಲ್ಲಿ 4 ಸೇತುವೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 15:17 IST
Last Updated 17 ಜೂನ್ 2025, 15:17 IST
ಚಿಕ್ಕೋಡಿ ತಾಲ್ಲೂಕಿನ ಮಲಿಕವಾಡ–ದತ್ತವಾಡ ಸೇತುವೆ ಸೋಮವಾರ ರಾತ್ರಿಯಿಂದ ಜಲಾವೃತವಾಗಿದ್ಡು, ಕರ್ನಾಟಕ–ಮಹಾರಾಷ್ಟ್ರ ನಡುವೆ ವಾಹನ ಸಂಚಾರ ಸ್ಥಗಿತಗೊಂಡಿದೆ
ಪ್ರಜಾವಾಣಿ ಚಿತ್ರ: ಚಂದ್ರಶೇಖರ ಎಸ್. ಚಿನಕೇಕರ
ಚಿಕ್ಕೋಡಿ ತಾಲ್ಲೂಕಿನ ಮಲಿಕವಾಡ–ದತ್ತವಾಡ ಸೇತುವೆ ಸೋಮವಾರ ರಾತ್ರಿಯಿಂದ ಜಲಾವೃತವಾಗಿದ್ಡು, ಕರ್ನಾಟಕ–ಮಹಾರಾಷ್ಟ್ರ ನಡುವೆ ವಾಹನ ಸಂಚಾರ ಸ್ಥಗಿತಗೊಂಡಿದೆ ಪ್ರಜಾವಾಣಿ ಚಿತ್ರ: ಚಂದ್ರಶೇಖರ ಎಸ್. ಚಿನಕೇಕರ   

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಮಹಾರಾಷ್ಟ್ರದ ಘಟ್ಟ ಪ್ರದೇಶ ಮತ್ತು ಚಿಕ್ಕೋಡಿ ಉಪ ವಿಭಾಗದಲ್ಲಿ ಬೀಳುತ್ತಿರುವ ಮಳೆಯಿಂದ ಕೃಷ್ಣಾ ಹಾಗೂ ದೂಧಗಂಗಾ ನದಿಗಳಲ್ಲಿ ನೀರಿನ ಹರಿವು ಏರಿಕೆ ಆಗಿದೆ. 

ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ– ಯಡೂರ, ಮಲಿಕವಾಡ– ದತ್ತವಾಡ, ನಿಪ್ಪಾಣಿ ತಾಲ್ಲೂಕಿನ ಬಾರವಾಡ– ಕುನ್ನೂರ, ಕಾರದಗಾ– ಭೋಜ ಸೇತುವೆಗಳು ಜಲಾವೃತಗೊಂಡಿವೆ. ಈ ಮಾರ್ಗದಲ್ಲಿ ಕರ್ನಾಟಕ– ಮಹಾರಾಷ್ಟ್ರ ನಡುವೆ ವಾಹನಗಳ ಸಂಚಾರ ಸ್ಥಗಿತಗೊಂಡಿದೆ.

ಮಹಾರಾಷ್ಟ್ರದ ಕೊಯ್ನಾ ಜಲಾನಯನ ‍ಪ್ರದೇಶದಲ್ಲಿ 13.7 ಸೆಂ.ಮೀ ದಾಖಲಾಗಿದ್ದು, ಉಳಿದಂತೆ ಆ ಭಾಗದ ವಾರಣಾ, ಕಾಳಮ್ಮವಾಡಿ, ಮಹಾಬಳೇಶ್ವರ, ಸಾಂಗ್ಲಿ, ಕೊಲ್ಹಾಪುರ ವ್ಯಾಪ್ತಿಯಲ್ಲೂ ಮಂಗಳವಾರ ಧಾರಾಕಾರವಾಗಿ ಮಳೆಯಾಗಿದೆ 

ADVERTISEMENT

ಕೊಲ್ಹಾಪುರ ಜಿಲ್ಲೆ ರಾಜಾಪೂರ ಬ್ಯಾರೇಜಿನಿಂದ ಕೃಷ್ಣಾ ನದಿಗೆ 44,125 ಕ್ಯೂಸೆಕ್‌ ಹೊರ ಹರಿವು ಇದೆ. ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಗ್ರಾಮದ ಬಳಿ ದೂಧಗಂಗಾ ನದಿಗೆ 15,840 ಕ್ಯೂಸೆಕ್‌ ಒಳ ಹರಿವು ಇದೆ. ಕಲ್ಲೋಳ– ಯಡೂರ ಕಿರು ಸೇತುವೆ ಬಳಿ 59,965 ಕ್ಯೂಸೆಕ್‌ ಹರಿವು ಇದೆ.

ಭಟ್ಕಳ ಸಮುದ್ರ ತೀರಕ್ಕೆ ಬಂದ ಬಾರ್ಜ್

ಭಟ್ಕಳ (ಉತ್ತರ ಕನ್ನಡ ಜಿಲ್ಲೆ): ಮಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ಸುಮಾರು 70 ಮೀಟರ್‌ ಉದ್ದದ ಬಾರ್ಜ್‌ ಸೋಮವಾರ ರಾತ್ರಿ ಭಟ್ಕಳದ ಜಾಲಿ ಕಡಲತೀರಕ್ಕೆ ಬಂದು ಸಿಲುಕಿದೆ.

ಇದು ಕೇರಳದ ಕೊಚ್ಚಿನ್ ಶಿಪ್‌ ಯಾರ್ಡ್‌ಗೆ ಸೇರಿದ ಬಾರ್ಜ್. ಟಗ್‌ ಬೋಟ್‌ ನೆರವಿನಿಂದ ರೋಪ್‌ ಕಟ್ಟಿಕೊಂಡು ಈ ಬಾರ್ಜ್‌ನ್ನು ಮುಂಬೈಗೆ ಒಯ್ಯಲಾಗುತಿತ್ತು. ಮಧ್ಯರಾತ್ರಿ ಸಮುದ್ರದಲ್ಲಿ ಭಾರಿ ಗಾಳಿ ಬೀಸಿದ್ದರಿಂದ ಅಲೆಗೆ ಸಿಲುಕಿ ಕಟ್ಟಿದ ಹಗ್ಗ ತುಂಡಾಗಿ ಬಾರ್ಜ್ ಸಮುದ್ರ ತೀರಕ್ಕೆ ಬಂದು ಅಪ್ಪಳಿಸಿದೆ.  

ಕಾರ್ಯಾಚರಣೆ ಕಷ್ಟ:

ಮಂಗಳವಾರ ಸಮುದ್ರ ತೀರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕಂಪನಿಯ ಸಿಬ್ಬಂದಿ ‘ಸಾವಿರಾರು ಟನ್‌ ಭಾರದ ಬಾರ್ಜ್ ಸಮುದ್ರದ ಉಸುಕಿನಲ್ಲಿ ಹುದುಗಿದೆ. ತೆರವು ಕಾರ್ಯ ಅಸಾಧ್ಯ. ಏರಿಳಿತ ತಗ್ಗಿದ ಬಳಿಕ ತೆರವು ಮಾಡಬಹುದು’ ಎಂದು ಕರಾವಳಿ ಕಾವಲು ಪಡೆಯ ಸಿಪಿಐ ಕುಸುಮಧರ ಅವರಿಗೆ ತಿಳಿಸಿದ್ದಾರೆ.

ಭಟ್ಕಳ ಜಾಲಿ ಸಮುದ್ರ ತೀರಕ್ಕೆ ಬಂದು ಸಿಲುಕಿದ ಬಾರ್ಜ್
ಭಟ್ಕಳ ಜಾಲಿ ಸಮುದ್ರ ತೀರಕ್ಕೆ ಬಂದು ಸಿಲುಕಿದ ಬಾರ್ಜ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.