ADVERTISEMENT

ಅಂಬೇಡ್ಕರ್‌ ಭೇಟಿಗೆ 100 ವರ್ಷ: ಸರ್ಕಾರದಿಂದಲೂ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 16:31 IST
Last Updated 14 ಏಪ್ರಿಲ್ 2025, 16:31 IST
ಲಕ್ಷ್ಮಿ ಹೆಬ್ಬಾಳಕರ
ಲಕ್ಷ್ಮಿ ಹೆಬ್ಬಾಳಕರ   

ಬೆಳಗಾವಿ: ‘ಡಾ.ಬಿ.ಆರ್. ಅಂಬೇಡ್ಕರ್‌ ಅವರು ನಿಪ್ಪಾಣಿಗೆ ಭೇಟಿ ನೀಡಿ 100 ವರ್ಷಗಳು ತುಂಬಿದ್ದು, ಈ ಸ್ಮರಣಾರ್ಥ ಸರ್ಕಾರದಿಂದಲೂ ಕಾರ್ಯಕ್ರಮ ಮಾಡಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

‘ನಿಪ್ಪಾಣಿಗೆ ಅಂಬೇಡ್ಕರ್‌ ಭೇಟಿ ನೀಡಿದ ಘಳಿಗೆಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬಿಜೆಪಿಯವರು ಸಮಾವೇಶ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದಿಂದಲೂ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸುತ್ತೀರಾ’ ಎಂಬ ಪ್ರಶ್ನೆಗೆ, ನಗರದಲ್ಲಿ ಸೋಮವಾರ ಪ್ರತಿಕ್ರಿಯೆ ನೀಡಿದ ಅವರು, ‘ಕಾಂಗ್ರೆಸ್ ಪಕ್ಷ ಸಂವಿಧಾನವನ್ನೇ ಶ್ರದ್ಧಾ, ಭಕ್ತಿಯಿಂದ ನಂಬಿದೆ. ನಾವೆಲ್ಲರೂ ಅದನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆ. ನಿಪ್ಪಾಣಿಯಲ್ಲಿ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸುವ ಸಂಬಂಧ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಸರ್ಕಾರದಿಂದ ನಾವೂ ಕಾರ್ಯಕ್ರಮ ಮಾಡುತ್ತೇವೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದೆ’ ಎಂಬ ಬಿಜೆಪಿಯವರ ಆರೋಪಕ್ಕೆ ಉತ್ತರಿಸಿದ ಹೆಬ್ಬಾಳಕರ, ‘ಹುಬ್ಬಳ್ಳಿ ಘಟನೆಯನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ನಾನು ಬೇರೆ ರಾಜ್ಯದ ಹೋಲಿಕೆ ಮಾಡಲು ಹೋಗುವುದಿಲ್ಲ. ಆದರೆ, ನಮ್ಮಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿಲ್ಲ. ನಮ್ಮ ಬಗ್ಗೆ ಆರೋಪಿಸುತ್ತಿರುವ ಬಿಜೆಪಿಯವರು ಮಣಿಪುರದ ಕಡೆ ಒಮ್ಮೆ ನೋಡಲಿ. ಅಲ್ಲಿಗೆ ಪ್ರಧಾನಿ ಒಮ್ಮೆಯೂ ಭೇಟಿ ಕೊಟ್ಟಿಲ್ಲ. ಇಡೀ ದೇಶದಲ್ಲಿ ಏನೇನು ಆಗುತ್ತಿದೆ ಎಂಬುದನ್ನು ಅವರು ನೋಡುತ್ತಿದ್ದೀರಾ’ ಎಂದು ಪ್ರಶ್ನಿಸಿದರು.

ADVERTISEMENT

‘ಬಿಜೆಪಿಯವರು ನಮ್ಮ ವಿರುದ್ಧ ಎರಡಲ್ಲ; ನಾಲ್ಕನೇ ಸುತ್ತಿನ ಜನಾಕ್ರೋಶ ಯಾತ್ರೆ ಮಾಡಿದರೂ ಜನರಿಗೆ ಅವರ ಮೇಲಿನ ಆಕ್ರೋಶ ಕಡಿಮೆಯಾಗುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.