ADVERTISEMENT

ಮಹಾರಾಷ್ಟ್ರ ಚುನಾವಣೆ ಪ್ರಚಾರ | ಹೆಲಿಕಾಪ್ಟರ್‌ಗಾಗಿ ಮೂರೂಕಾಲು ತಾಸು ಕಾದ ಸಿಎಂ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 9:49 IST
Last Updated 17 ಅಕ್ಟೋಬರ್ 2019, 9:49 IST
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ   

ಬೆಳಗಾವಿ: ನೆರೆಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಪ್ರಚಾರಕ್ಕೆಂದು ಆ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ತಕ್ಕೆ ತೆರಳಲೆಂದು ಇಲ್ಲಿನ ಸರ್ಕಾರಿ ಪ್ರವಾಸಿಮಂದಿರದಲ್ಲಿ ತಂಗಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬುಧವಾರ ಬೆಳಿಗ್ಗೆ ಹೆಲಿಕಾಪ್ಟರ್‌ಗಾಗಿ ಮೂರೂಕಾಲು ತಾಸು ತಂಗಿದರು.

ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ಬಂದಿರಲಿಲ್ಲ. ಹೀಗಾಗಿ ಅವರು ಪ್ರವಾಸಿಮಂದಿರದಲ್ಲೇ ಉಳಿಯಬೇಕಾಯಿತು. ಬೆಂಗಳೂರಿಗೆ ಮರಳುವುದೋ, ಮಹಾರಾಷ್ಟ್ರಕ್ಕೆ ಹೋಗುವುದೋ ಎಂಬ ಗೊಂದಲಕ್ಕೂ ಅವರು ಸಿಲುಕಿದ್ದರು.

ಸಾಂಬ್ರಾ ವಿಮಾನನಿಲ್ದಾಣಕ್ಕೆ ಹೊರಡಲು ಹೊರ ಬಂದ ಅವರು, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಕರೆ ಮಾಡಿದರು. ಹೆಲಿಕಾಪ್ಟರ್ ವ್ಯವಸ್ಥೆ ಸರಿಯಾಗಿ ಮಾಡಿಲ್ಲದಿರುವುದಕ್ಕೆ ತರಾಟೆಗೆ ತೆಗೆದುಕೊಂಡರು. ‘ನನಗೆ ಹುಷಾರಿಲ್ಲ. ಹೆಲಿಕಾಪ್ಟರ್ ಕೂಡ ಸಮಸ್ಯೆಯಾಗಿದೆ. ಬಹಳಷ್ಟು ತಡವಾಗಿದೆ. ಎಲ್ಲ ಪ್ರವಾಸ ರದ್ದು ಮಾಡು, ಬೆಂಗಳೂರಿಗೆ ವಾಪಸಾಗುತ್ತೇನೆ’ ಎಂದೂ ಹೇಳಿದರಿ. ಆದರೂ ಪ್ರಚಾರಕ್ಕೆ ಬರುವಂತೆ ಸವದಿ ಪಟ್ಟು ಹಿಡಿದರು. ಆಗ ‘ನೀನು ಹೇಳಿದಂತೆ’ ಎಂದು ಸುಮ್ಮನಾದರು.

ADVERTISEMENT

ಮಧ್ಯಾಹ್ನ 12.30ಕ್ಕೆ ಹೆಲಿಕಾಪ್ಟರ್ ವ್ಯವಸ್ಥೆಯಾಗಿದೆ ಎಂದು ಸವದಿ ಹಾಗೂ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಹೇಳಿದ ಬಳಿಕ ಪ್ರವಾಸಿಮಂದಿರದ ಒಳಕ್ಕೆ ಹೋದರು. ಬೆಳಿಗ್ಗೆಯಿಂದಲೂ ತಮ್ಮೊಂದಿಗೇ ಇದ್ದ ಶಾಸಕ ಉಮೇಶ ಕತ್ತಿ ಸೇರಿದಂತೆ ಮುಖಂಡರೊಂದಿಗೆ ಮಾತುಕತೆಯಲ್ಲಿ ತೊಡಗಿದ್ದರು.

11.40ರ ವೇಳೆಗೆ ಮುಖ್ಯಮಂತ್ರಿ ವಿಮಾನನಿಲ್ದಾಣದತ್ತ ತೆರಳಿದರು. ಬಳಿಕವಷ್ಟೇ ಪೊಲೀಸರು ಹಾಗೂ ಅಧಿಕಾರಿಗಳು ನಿಟ್ಟುಸಿರು ಬಿಟ್ಟರು. ಪೂರ್ವ ನಿಗದಿಯಂತೆ 8.30ರ ವೇಳೆಗೆ ಅವರು ಇಲ್ಲಿಂದ ನಿರ್ಗಮಿಸಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.