ADVERTISEMENT

ಅಸಹಾಯಕ ಕುಟುಂಬಕ್ಕೆ ‘ಹೆಲ್ಪ್‌ ಫಾರ್ ನೀಡಿ’ ನೆರವು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 16:05 IST
Last Updated 19 ಅಕ್ಟೋಬರ್ 2020, 16:05 IST

ಬೆಳಗಾವಿ: ಅನಾರೋಗ್ಯದಿಂದ ನಿಧನರಾದ ತಾಯಿಯ ಅಂತ್ಯಕ್ರಿಯೆ ನೆರವೇರಿಸಲು ಆರ್ಥಿಕ ಚೈತನ್ಯವಿಲ್ಲದೆ ಅಸಹಾಯಕರಾಗಿದ್ದ ಮಕ್ಕಳಿಗೆ ಇಲ್ಲಿನ ‘ಹೆಲ್ಪ್ ಫಾರ್‌ ನೀಡಿ’ ತಂಡದವರು ನೆರವಾಗಿದ್ದಾರೆ.

ಇಲ್ಲಿನ ಗಣೇಶಪುರದಲ್ಲಿ ಬಾಡಿಗೆ ಮನೆಯಲ್ಲಿ ಇಬ್ಬರು ಪುತ್ರರು ಹಾಗೂ ಪುತ್ರಿಯೊಂದಿಗೆ ಇದ್ದ ಮಹಿಳೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರನ್ನು ಈ ತಂಡದವರೆ ಸೆ. 28ರಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಆ ಮಹಿಳೆ ಅ.16ರಂದು ಮೃತ‍ಪಟ್ಟಿದ್ದರು. ಆದರೆ, ಅಂತ್ಯಸಂಸ್ಕಾರಕ್ಕೆ ಹಣವಿಲ್ಲದೆ ಮಕ್ಕಳು ಪರದಾಡಿದ್ದರು. ಹೀಗಾಗಿ, ಶವವು ಶವಾಗಾರದಲ್ಲೆ ಇತ್ತು. ಮೂರು ದಿನಗಳ ನಂತರ ಅಂತ್ಯಕ್ರಿಯೆ ನೆರವೇರಿದೆ.

‘ಶವಾಗಾರದ ಸಿಬ್ಬಂದಿ ಮೂಲಕ ವಿಷಯ ತಿಳಿಯಿತು. ಹೀಗಾಗಿ, ನಾವು ಬಂದು ಶವವನ್ನು ಸ್ಮಶಾನಕ್ಕೆ ಸಾಗಿಸಿ ಅಂತ್ಯಕ್ರಿಯೆ ನೆರವೇರಿಸಿದೆವು. ಮಹಿಳೆ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕೋವಿಡ್ ಲಾಕ್‌ಡೌನ್‌ನಿಂದ ಆರು ತಿಂಗಳಿಂದ ಕೆಲಸವಿಲ್ಲದೆ ಹಾಗೂ ಗಳಿಕೆ ಇಲ್ಲದೆ ಬಹಳ ಸಂಕಷ್ಟಕ್ಕೆ ಒಳಗಾಗಿದ್ದರು. ನಾವೇ ಅವರಿಗೆ ಊಟದ ವ್ಯವಸ್ಥೆ ಮಾಡಿದ್ದೆವು. ಮನೆ ಬಾಡಿಗೆಯನ್ನೂ ಕಟ್ಟಲಾಗದ ಸ್ಥಿತಿಯಲ್ಲಿ ಅವರಿದ್ದರು. ಈಗ ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ತಂಡದ ಸುರೇಂದ್ರ ಅನಗೋಳಕರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.