ADVERTISEMENT

ಪ್ರತಿ ತಾಲ್ಲೂಕಿನಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶ: ಘೋಷಣೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 12:30 IST
Last Updated 29 ಅಕ್ಟೋಬರ್ 2025, 12:30 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಬೆಳಗಾವಿ: ‘ಕನೇರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆ ಪ್ರವೇಶಿಸುವುದನ್ನು ನಿಷೇಧಿಸಿ ಸರ್ಕಾರ ಹೊರಡಿಸಿದ ಆದೇಶ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ, ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶ ಮಾಡುತ್ತೇವೆ. ವಿಜಯಪುರ ಜಿಲ್ಲೆಯ ಬಬಲೇಶ್ವರದಿಂದ ಇದಕ್ಕೆ ಚಾಲನೆ ಕೊಡುತ್ತೇವೆ’ ಎಂದು ಹಿಂದೂ ಸಂಘಟನೆಗಳ ಮುಖಂಡರು ಮತ್ತು ಜನಪ್ರತಿನಿಧಿಗಳು ಘೋಷಿಸಿದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಅಭಯ ಪಾಟೀಲ, ಶಶಿಕಲಾ ಜೊಲ್ಲೆ, ಸಿ.ಸಿ.ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಪ್ರತಾಪ ಸಿಂಹ, ಹಿಂದೂ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ, ವಕೀಲ ಎಂ.ಬಿ.ಝಿರಲಿ ನೇತೃತ್ವದಲ್ಲಿ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಂಡರು.

ನಂತರ ಸುದ್ದಿಗಾರರೊಂದಿಗೆ ಎಂ.ಬಿ.ಝಿರಲಿ ಮಾತನಾಡಿ, ‘ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗೆ ಪ್ರವೇಶ ನಿಷೇಧಿಸಿರುವ ಆದೇಶವನ್ನು ಕಠಿಣ ಪದಗಳಲ್ಲಿ ಖಂಡಿಸಿದ್ದೇವೆ. ನಮ್ಮ ಮನವಿ ಮೇರೆಗೆ ಶ್ರೀಗಳು ಸಹ ಸಭೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಗಳನ್ನೂ ಖಂಡಿಸಿದ್ದೇವೆ. ವಿಜಯಪುರ ಜಿಲ್ಲೆಯ ಬಬಲೇಶ್ವರದಿಂದ ಆರಂಭಿಸಿ, ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸಮಾವೇಶ ನಡೆಯಲಿವೆ’ ಎಂದರು.

ADVERTISEMENT

‘ರಾಜ್ಯದ್ಯಂತ ಎಲ್ಲ ತಾಲ್ಲೂಕುಗಳಲ್ಲಿ ಆಂದೋಲನ ಆರಂಭಿಸಲಾಗುವುದು. ಜನರಿಂದ 5,000ಕ್ಕೂ ಹೆಚ್ಚು ಸಹಿ ಸಂಗ್ರಹಿಸಲಾಗುವುದು. ಮಠಾಧೀಶರ ವಿರುದ್ಧ ಹೊರಡಿಸಲಾದ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ 500 ಜನರ ನಿಯೋಗವು ಆಯಾ ತಹಶೀಲ್ದಾರ್‌ಗಳಿಗೆ ಮನವಿ ಸಲ್ಲಿಸಲಿದೆ’ ಎಂದು ತಿಳಿಸಿದರು.

‘ಸಮರ್ಥ ರಾಮದಾಸರು ಛತ್ರಪತಿ ಶಿವಾಜಿ ಮಹಾರಾಜರಿಗೆ ಗುರುಗಳಾಗಿದ್ದರು. ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಆಧುನಿಕ ಹಿಂದೂ ಸಮಾಜಕ್ಕೆ ಗುರುಗಳಾಗಿದ್ದಾರೆ. ಹಿಂದೂ ತತ್ವ, ಸಂಸ್ಕೃತಿ ಅನುಸರಿಸುವ ದೇಶಭಕ್ತರಾಗಿದ್ದಾರೆ’ ಎಂದು ಅವರು ಹೇಳಿದರು.

‘ಶ್ರೀಗಳು ಹಿಂದೂ ಸಂಸ್ಕೃತಿ ಎತ್ತಿ ಹಿಡಿದಿದ್ದಾರೆ. ರೈತರಿಗಾಗಿ ಅನೇಕ ಕಾರ್ಯಕ್ರಮ ನಡೆಸುತ್ತಿದ್ದಾರೆ. ಗೋವುಗಳನ್ನು ರಕ್ಷಿಸುತ್ತಿದ್ದಾರೆ. ಸಾವಯವ ಕೃಷಿ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ ಬೆನ್ನೆಲುಬಾಗಿ ನಿಲ್ಲುವ ಜೊತೆಗೆ ಮಾದರಿಯಾಗಿದ್ದಾರೆ. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗೆ ಅವರ ಪ್ರವೇಶವನ್ನು ನಿಷೇಧಿಸಿ ರಾಜ್ಯ ಸರ್ಕಾರ ತಪ್ಪು ಹೆಜ್ಜೆ ಇಟ್ಟಿದೆ’ ಎಂದು ಹೇಳಿದರು.

ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ವಿಭಜಿಸುವ ಪ್ರಯತ್ನ ಮಾಡುತ್ತಿದೆ. ಬೇರೆ ಬೇರೆ ಸ್ಥಳಗಳಿಗೆ ಶ್ರೀಗಳ ಸಂಚಾರ ಸ್ವಾತಂತ್ರ್ಯ ಮೊಟಕುಗೊಳಿಸಿದೆ. ಎಲ್ಲ ತಾಲ್ಲೂಕುಗಳಲ್ಲಿ ಹಿಂದೂ ಬಸವಾದಿ ಶರಣರ ಹಿಂದೂಗಳ ಸಮಾವೇಶ ಆಯೋಜಿಸುತ್ತೇವೆ’ ಎಂದರು.

‘ಅನೇಕ ಶ್ರೀಗಳು ಹಿಂದೂ ದೇವತೆಗಳು ಮತ್ತು ಸಂಸ್ಕೃತಿಯನ್ನು ನಿಂದಿಸಿದ್ದಾರೆ. ಆದರೆ, ಅವರು ಖಾವಿ ತೊಟ್ಟಿದ್ದರಿಂದ ನಾವು ಶಾಂತತೆ ಕಾಯ್ದುಕೊಂಡಿದ್ದೆವು. ಈಗ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಾಳ್ಮೆ ಕಳೆದುಕೊಂಡು ವೀರಶೈವ ಲಿಂಗಾಯತ ಸಮುದಾಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.