ADVERTISEMENT

ಜಾಮರ್‌ನ ಮಿತಿ ಕಡಿಮೆಗೊಳಿಸಲು ಆಗ್ರಹ: ಹಿಂಡಲಗಾ ಗ್ರಾಮದಲ್ಲಿ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2025, 10:14 IST
Last Updated 4 ಮಾರ್ಚ್ 2025, 10:14 IST
   

ಬೆಳಗಾವಿ: ‘ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಿದ ಜಾಮರ್‌ನ ಮಿತಿ ಕಡಿಮೆಗೊಳಿಸಿ, ಸುತ್ತಲಿನ ವಾಸಸ್ಥಳದ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು’ ಎಂದು ಆಗ್ರಹಿಸಿ, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ಕಾರಾಗೃಹದ ಮುಂದಿನ ರಸ್ತೆ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.

‘ಕಾರಾಗೃಹದಲ್ಲಿ ಅಳವಡಿಸಿದ ಜಾಮರ್‌ನಿಂದಾಗಿ ನಮ್ಮ ಮೊಬೈಲ್‌ ಫೋನ್‌ಗೆ ನೆಟ್‌ವರ್ಕ್‌ ಸಿಗುತ್ತಿಲ್ಲ. ಇದರಿಂದಾಗಿ ಸಂವಹನಕ್ಕೆ ತೊಂದರೆಯಾಗಿದೆ. ಆದರೆ, ಕಾರಾಗೃಹದ ಅಧಿಕಾರಿಗಳು ನಮ್ಮ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿದರು.

‘ಬೆಳಗಾವಿಯಿಂದ ಬಾಚಿಗೆ ಹೋಗುವಾಗ ಮುಖ್ಯರಸ್ತೆಗೆ ಹೊಂದಿಕೊಂಡೇ ಕಾರಾಗೃಹವಿದೆ. ಅಲ್ಲಿ ಮೊಬೈಲ್‌ ಬಳಕೆ ತಡೆಯುವ ಸಲುವಾಗಿ ಜಾಮರ್‌ ಅಳವಡಿಸಲಾಗಿದೆ. ಆದರೆ, ಕಾರಾಗೃಹದ ಸುತ್ತಲಿನ ಜನವಸತಿಗಳ ಮೇಲೂ ಅದು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಗ್ರಾಮ ಪಂಚಾಯಿತಿ ಕಟ್ಟಡ, ಶಾಲೆ ಮತ್ತು ಬ್ಯಾಂಕ್‌ನಲ್ಲೂ ಆನ್‌ಲೈನ್‌ ಕೆಲಸಗಳಿಗೆ ತೊಡಕಾಗುತ್ತಿದೆ’ ಎಂದು ದೂರಿದರು.

ADVERTISEMENT

‘ಈ ಹಿಂದೆಯೂ ಜೈಲಿನಲ್ಲಿ ಜಾಮರ್‌ ಅಳವಡಿಸಲಾಗಿತ್ತು. ಆದರೆ, ಕಾರಾಗೃಹದ ಸುತ್ತಲೂ ವಾಸಿಸುವ ಜನರಿಗೆ ಇದರಿಂದ ಯಾವ ತೊಂದರೆ ಆಗಿರಲಿಲ್ಲ. ಈಗ ಜಾಮರ್‌ನ ಮಿತಿ ಹೆಚ್ಚಿಸಿದ್ದರಿಂದ ಸಮಸ್ಯೆಯಾಗಿದೆ. ಜೈಲಿನಲ್ಲಿ ಮೊಬೈಲ್‌ ಬಳಕೆಗೆ ಕಡಿವಾಣ ಹಾಕುವುದಾದರೆ, ಒಳಗೆ ಯಾವ ಮೊಬೈಲ್‌ ಹೋಗದಂತೆ ತಡೆಯಬೇಕು. ಅದರ ಬದಲಿಗೆ, ಊರ ಮಧ್ಯದ ಕಾರಾಗೃಹದಲ್ಲೇ ಹೆಚ್ಚಿನ ಮಿತಿಯ ಜಾಮರ್‌ ಅಳವಡಿಸಬಾರದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರಾಗೃಹದ ಅಧಿಕಾರಿಗಳು ಮತ್ತು ಪೊಲೀಸರು ಪ್ರತಿಭಟನಕಾರರ ಮನವೊಲಿಕೆಗೆ ಯತ್ನಿಸಿದರು. ಆದರೆ, ಪಟ್ಟು ಸಡಿಲಿಸದೆ ಹೋರಾಟ ಮುಂದುವರಿಸಿದರು. ‘ಶೀಘ್ರ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಅಧಿಕಾರಿಗಳು ಭರವಸೆ ನೀಡಿದ್ದರಿಂದ ಪ್ರತಿಭಟನಕಾರರು ಹೋರಾಟದಿಂದ ಹಿಂದೆ ಸರಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಹಿತ್ತಲಮನಿ, ಉಪಾಧ್ಯಕ್ಷೆ ಚೇತನಾ ಅಗಸಗೇಕರ, ಸದಸ್ಯರಾದ ಡಿ.ಬಿ.ಪಾಟೀಲ, ರಾಮಚಂದ್ರ ಕುದ್ರೇಮನಿಕರ, ರಾಮಚಂದ್ರ ಮಂಡೋಳಕರ, ಪರಶುರಾಮ ಕುಗಚಿಕರ, ಯಲ್ಲಪ್ಪ ಕಾಕತಕರ, ಮುಖಂಡ ರವಿಕುಮಾರ ಕೋಕಿತಕರ ಇತರರಿದ್ದರು.

‘ತಾಂತ್ರಿಕ ಪರಿಣತರೊಂದಿಗೆ ಚರ್ಚಿಸುತ್ತೇವೆ’

‘ಈ ಹಿಂದೆ ಜೈಲಿನಲ್ಲಿ ‘2ಜಿ’ ನೆಟ್‌ವರ್ಕ್‌ ಇತ್ತು. ಈಗ ‘4ಜಿ’ ಮತ್ತು ‘5ಜಿ’ ನೆಟ್‌ವರ್ಕ್‌ ಇರುವ ಕಾರಣ, ಜನರಿಗೆ ಜಾಮರ್‌ನಿಂದ ತೊಂದರೆ ಆಗಿರಬಹುದು. ಈ ಬಗ್ಗೆ ತಾಂತ್ರಿಕ ಪರಿಣತರೊಂದಿಗೆ ಚರ್ಚಿಸಿ, ಸಮಸ್ಯೆ ಬಗೆಹರಿಸುತ್ತೇವೆ. ಜನರಿಗೆ ಯಾವ ತೊಂದರೆಯೂ ಆಗದಂತೆ ಕ್ರಮ ವಹಿಸುತ್ತೇವೆ’ ಎಂದು ಹಿಂಡಲಗಾ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ‌ಕೃಷ್ಣಮೂರ್ತಿ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.