
ಹಿರೇಬಾಗೇವಾಡಿ: ರೈತರಿಗೆ ನೋವಾಗದ ರೀತಿಯಲ್ಲಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಸಿ.ಎಂ ತ್ಯಾಗರಾಜ ಹೇಳಿದರು.
ಸ್ಥಳೀಯ ರೈತರು ಗ್ರಾಮದ ಎಪಿಎಂಸಿಯಿಂದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಹೋಗುವ ರಸ್ತೆ ತಡೆದು ಈಚೆಗೆ ಪ್ರತಿಭಟಿಸಿದ್ದ ಹಿನ್ನೆಲೆಯಲ್ಲಿ ಸೊಮವಾರ ಸ್ಥಳಕ್ಕೆ ತಮ್ಮ ತಂಡದೊಂದಿಗೆ ಭೇಟಿ ನೀಡಿ ರೈತರೊಡನೆ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು.
ಕುಲಸಚಿವ ಸಂತೋಷ ಕಾಮಗೌಡ ಅವರು ಮಾತನಾಡಿ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆ ಪಕ್ಕದ ಬೆಳೆಗಳ ಮೇಲೆ ಧೂಳು ಹರಡದಂತೆ ನಿಯಮಿತವಾಗಿ ರಸ್ತೆಗೆ ನೀರು ಹಾಕುವುದು, ಟಿಪ್ಪರ್ ಮತ್ತು ಇತರೆ ವಾಹನಗಳಿಗೆ ನಿಧಾನವಾಗಿ ಸಾಗಲು ಸೂಚಿಸಲಾಗುವುದು ಎಂದರು.
ರೈತರಿಗೆ ವಿಶ್ವವಿದ್ಯಾಲಯ ವ್ಯಾಪ್ತಿಯಾಚೆ ಇದ್ದ ಜಮೀನುಗಳಿಗೆ ತೆರಳಲು ಯಾವುದೇ ನಿರ್ಬಂಧ ಮಾಡದೇ ಕಂಪೌಂಡ್ ಪಕ್ಕದ ದಾರಿಯನ್ನು ಬಳಸಲು ಅನುಕೂಲ ಮಾಡಲಾಗುವುದು. ಮಳೆ ಹಾಗೂ ಕೆರೆ ನೀರು ರೈತರ ಜಮೀನಿಗೆ ನುಗ್ಗದಂತೆ ಕ್ರಮವಹಿಸುವುದು. ರಸ್ತೆ ಅಗಲೀಕರಣ ಮಾಡದೇ ಇದ್ದ ರಸ್ತೆಯನ್ನೆ ಸಿ.ಸಿ ರಸ್ತೆಯನ್ನಾಗಿ ಮಾಡಲಾಗುವುದು ಎಂದರು.
ಸರ್ವೇ ನಂ.193ರ ಗ್ರಾಮ ನಕಾಶೆಯಲ್ಲಿ ಇದ್ದಂತೆ ಅಷ್ಟೇ ಅಗಲೀಕರಣದ ರಸ್ತೆ ಮಾತ್ರ ಮಾಡಲಾಗುವುದು. ಪರಸ್ಪರ ರೈತರ ಸಮ್ಮತಿಯಿಂದ ಆ ಸರ್ವೇಯಲ್ಲಿನ ಎಲ್ಲರ ಜಮೀನಗಳನ್ನು ಅಳೆದುಕೊಡಲಾಗುವುದು. ವಿಶ್ವವಿದ್ಯಾಲಯದ ಕಟ್ಟಡ ಕಾಮಗಾರಿಗೆ ಬಳಸಲು ರೈತರಿಂದ ಬಾಡಿಗೆಗೆ ನೀರು ಪಡೆದು ಪೈಪ್ ಲೈನ್ ಹಾಕುವ ಕೆಲಸ ನಡೆದಿದ್ದು ರೈತರ ಪೈಪಲೈನ್‌ಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.
ಸಮಸ್ಯೆಗಳಿದ್ದರೆ ಸಂಪರ್ಕಕ್ಕೆ ದೂರವಾಣಿ ಸಂಖ್ಯೆ ನೀಡಿದರು. ಬಳಿಕ ಮಾತನಾಡಿ ನಿಮ್ಮೆಲ್ಲರ ಸಹಮತದೊಂದಿಗೆ ಸಮಸ್ಯೆಯಾಗದಂತೆ ಕಾಮಗಾರಿಗಳನ್ನು ಮುಂದುವರೆಸಲಾಗುವುದು ಎಂದರು.
ರೈತರಾದ ಉಮೇಶ ರೊಟ್ಟಿ, ಮಂಜುನಾಥ ಧರೆಣ್ಣವರ, ಉಳವಪ್ಪ ನಂದಿ, ವಿಲಾಸ ಜೋಶಿ, ನಿಂಗಪ್ಪ ತಳವಾರ, ತಮ್ಮಣ್ಣ ಗಾಣಿಗೇರ, ಉಮೇಶ ನಂದಿ, ಅಣ್ಣಪ್ಪ ಬಾರಿಗಿಡದ, ಚೇತನ ಪಾಶ್ಚಾಪೂರ, ಪಿಎಸ್.ಐ ಅವಿನಾಶ ವೈ, ಗ್ರಾಮ ಲೆಕ್ಕಾಧಿಕಾರಿ ಅನಿಲ ಕಮ್ಮಾರ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.