
ಬೆಳಗಾವಿ: ‘ಕರ್ನಾಟಕ ವಿದ್ಯಾವರ್ಧಕ ಸಂಘವು ಕರುನಾಡಿನ ಜನರ ಸಾಕ್ಷಿಪ್ರಜ್ಞೆಯಾಗಿ ಕೆಲಸ ಮಾಡಬೇಕು’ ಎಂದು ಗಡಿ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಇಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಗಡಿನಾಡಿನಲ್ಲಿ ಕನ್ನಡ ಜಾಗೃತಿ ಮತ್ತು ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಗಡಿನಾಡು, ಭಾಷೆ, ರಾಜ್ಯದ ಸ್ಥಿತಿಗತಿ ಮತ್ತು ವಿದ್ಯಮಾನಗಳ ಬಗ್ಗೆ ನೀವು ರಾಜ್ಯ ಸರ್ಕಾರಕ್ಕೆ ವರ್ಷಕ್ಕೆ ಎರಡು ಬಾರಿ ವರದಿ ಕೊಡಬೇಕು. ಒಂದು ವರದಿ ರಾಜ್ಯೋತ್ಸವಕ್ಕೂ ಮುನ್ನವೇ ನಮ್ಮ ಕೈಸೇರಬೇಕು’ ಎಂದರು.
‘ಕರ್ನಾಟಕ ಏಕೀಕರಣ ಚಳವಳಿ ಸೇರಿ ವಿವಿಧ ಹೋರಾಟಗಳಲ್ಲಿ ಕಿತ್ತೂರು ಕರ್ನಾಟಕದವರೇ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅದರಲ್ಲೂ ಕರ್ನಾಟಕ ವಿದ್ಯಾವರ್ಧಕ ಸಂಘ ಮುಂಚೂಣಿಯಲ್ಲಿತ್ತು. ಎಲ್ಲ ಹೋರಾಟಗಾರರ ತ್ಯಾಗದ ಫಲವಾಗಿ ಕರ್ನಾಟಕ ರಾಜ್ಯ ಸ್ಥಾಪನೆಯಾಯಿತು’ ಎಂದು ಸ್ಮರಿಸಿದರು.
‘ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಕೇರಳದಲ್ಲಿ ನೆಲೆಸಿರುವ ಕನ್ನಡ ಭಾಷಿಕರು, ಆಯಾ ನಾಡಿನ ಉತ್ಸವಗಳ ಬಗ್ಗೆ ಅಪಸ್ವರ ತೆಗೆಯದೆ, ಖುಷಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ವಾಸಿಸುವ ಎಲ್ಲ ಭಾಷಿಕರಲ್ಲೂ ಇಂಥ ಮನೋಭಾವ ಬರಬೇಕು’ ಎಂದು ಕರೆ ನೀಡಿದರು.
‘ಈಗ ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದವೇ ಇಲ್ಲ. ರಾಜಕೀಯ ಸ್ವಾರ್ಥಕ್ಕಾಗಿ ಈ ಪ್ರಕರಣ ಬಳಸಿಕೊಂಡು, ವಿವಾದ ಸೃಷ್ಟಿಸುವವರಿಗೆ ಸದ್ಬುದ್ಧಿ ಬರಲಿ’ ಎಂದರು.
ಸಂಸದ ಜಗದೀಶ ಶೆಟ್ಟರ್, ‘ಬೆಳಗಾವಿಯಲ್ಲಿ ಉಭಯ ಭಾಷಿಕರು ಅನ್ಯೋನ್ಯವಾಗಿದ್ದಾರೆ. ಆದರೆ, ರಾಜಕೀಯ ಸ್ವಾರ್ಥಕ್ಕಾಗಿ ಕೆಲವರು ಪರಸ್ಪರರ ಮಧ್ಯೆ ದ್ವೇಷದ ಭಾವ ಬಿತ್ತುತ್ತಿದ್ದಾರೆ. ಇದರಿಂದ ನಗರದ ಅಭಿವೃದ್ಧಿಗೆ ಪೆಟ್ಟು ಬೀಳುತ್ತಿದೆ. ಈ ವಾತಾವರಣ ಬದಲಿಸಿ, ಪರಸ್ಪರರಲ್ಲಿ ಸಾಮರಸ್ಯದ ಭಾವ ಮೂಡಿಸುವ ಕೆಲಸವನ್ನು ಸಂಘ–ಸಂಸ್ಥೆಗಳು ಮಾಡಬೇಕಿದೆ’ ಎಂದು ತಿಳಿಸಿದರು.
‘ಮಹಾರಾಷ್ಟ್ರದ ನಾಗ್ಪುರ ಮಾದರಿಯಲ್ಲಿ ಬೆಳಗಾವಿಯಲ್ಲೂ ಪ್ರತಿವರ್ಷ 30 ದಿನ ಅಧಿವೇಶನ ನಡೆಯಬೇಕು. ಸುವರ್ಣ ವಿಧಾನಸೌಧ ಇನ್ನಷ್ಟು ಕ್ರಿಯಾಶೀಲವಾಗಬೇಕು’ ಎಂದರು.
ಶಾಸಕ ಆಸಿಫ್ ಸೇಠ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಆಶಯ ಭಾಷಣ ಮಾಡಿದರು.
ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಧಾರವಾಡದ ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಸರಜೂ ಕಾಟ್ಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ಚೆನ್ನೂರ, ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷ ಸತೀಶ ತುರಮರಿ, ಉಪಾಧ್ಯಕ್ಷ ಸಂಜೀವ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸಹ ಕಾರ್ಯದರ್ಶಿ ಶಂಕರ ಕುಂಬಿ, ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಹಿಮ್ಮಡಿ, ರವಿ ಕೋಟಾರಗಸ್ತಿ ಇದ್ದರು.
ನಂತರ ವಿವಿಧ ಗೋಷ್ಠಿ ನಡೆದವು.
ಮಾತೃಭಾಷೆ ಮರೆತರೆ ನಾಡಿಗೆ ಸೌಖ್ಯವಿಲ್ಲ: ಸಿದ್ಧರಾಮ ಸ್ವಾಮೀಜಿ
ಸಾನ್ನಿಧ್ಯ ವಹಿಸಿದ್ದ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ‘ತಾಯಿ ಮರೆತರೆ ಕುಟುಂಬಕ್ಕೆ ಸುಖವಿಲ್ಲ. ಮಾತೃಭಾಷೆ ಮರೆತರೆ ನಾಡಿಗೆ ಸೌಖ್ಯವಿಲ್ಲ. ಗಡಿಯಲ್ಲಿ ಕನ್ನಡ ಗಟ್ಟಿಗೊಳಿಸಬೇಕಿರುವುದು ಸರ್ಕಾರದ ಕರ್ತವ್ಯ. ಹೆಚ್ಚೆಚ್ಚು ಬಳಸುವ ಮೂಲಕ ಕನ್ನಡವನ್ನು ಬಲಿಷ್ಠವಾಗಿಸುವ ಕೆಲಸವನ್ನು ಜನರೂ ಮಾಡಬೇಕು’ ಎಂದರು. ‘ರಾಜ್ಯದಲ್ಲಿ ಇಂದು ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಬೇಡಿಕೆಯಷ್ಟು ಶಿಕ್ಷಕರೇ ಇಲ್ಲ. ಅನುದಾನಿತ ಶಾಲೆಗಳು ಅನುದಾನರಹಿತ ಶಾಲೆಗಳಾಗಿ ಪರಿವರ್ತನೆಯಾಗಿವೆ. ಹಾಗಾಗಿ ಮಕ್ಕಳು ಇಂಗ್ಲಿಷ್ ಮಾಧ್ಯಮ ಶಾಲೆಗಳತ್ತ ವಾಲುತ್ತಿದ್ದಾರೆ. ಸರ್ಕಾರ ತಕ್ಷಣವೇ ಶಿಕ್ಷಕರ ಕೊರತೆ ನೀಗಿಸಿ ಸರ್ಕಾರಿ ಕನ್ನಡ ಶಾಲೆಗಳನ್ನು ಸಶಕ್ತಗೊಳಿಸಬೇಕು’ ಎಂದು ಕರೆಕೊಟ್ಟರು.
10 ಕನ್ನಡ ಶಾಲೆ ಶೀಘ್ರ ಆರಂಭ: ಪಾಟೀಲ
‘ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಶೋಕ ಚಂದರಗಿ ನೇತೃತ್ವದಲ್ಲಿ ಬೆಳಗಾವಿಯ 32 ಕನ್ನಡ ಹೋರಾಟಗಾರರೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಿ ಬೆಳಗಾವಿ ಜಿಲ್ಲೆಯಲ್ಲಿ ಬೇಡಿಕೆ ಇರುವ ಗ್ರಾಮಗಳಲ್ಲಿ 10 ಸರ್ಕಾರಿ ಕನ್ನಡ ಶಾಲೆ ಆರಂಭಿಸಲು ನಿರ್ಣಯ ಕೈಗೊಂಡಿದ್ದೇವೆ. ಮಹಾರಾಷ್ಟ್ರದಲ್ಲಿ ಕನ್ನಡ ಮಾಧ್ಯಮದಲ್ಲಿ ಅಂಗನವಾಡಿ ಕೇಂದ್ರ ಆರಂಭಿಸುವ ವಿಚಾರವಾಗಿಯೂ ರಾಜ್ಯ ಸರ್ಕಾರ ಕ್ರಮ ವಹಿಸಲಿದೆ’ ಎಂದು ಎಚ್.ಕೆ.ಪಾಟೀಲ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.