ADVERTISEMENT

ಆರಗ ಜ್ಞಾನೇಂದ್ರ ಆರ್‌ಎಸ್‌ಎಸ್ ಏಜೆಂಟ್: ಡಾ.ಅಂಜಲಿ ನಿಂಬಾಳ್ಕರ್ ಟೀಕೆ

ರಾಜೀನಾಮೆ ಪಡೆದುಕೊಳ್ಳಲು ಮುಖ್ಯಮಂತ್ರಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 9:00 IST
Last Updated 9 ಏಪ್ರಿಲ್ 2022, 9:00 IST
ಡಾ.ಅಂಜಲಿ ನಿಂಬಾಳ್ಕರ್
ಡಾ.ಅಂಜಲಿ ನಿಂಬಾಳ್ಕರ್   

ಬೆಳಗಾವಿ: ‘ಜವಾಬ್ದಾರಿಯುತ ಸ್ಥಾನದಲ್ಲಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಕೋಮು ಸೌಹಾರ್ದ ಹಾಳು ಮಾಡುವುದಕ್ಕಾಗಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್‌)ದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಅವರ ನಡವಳಿಕೆ ಖಂಡನೀಯವಾದುದು’ ಎಂದು ಖಾನಾಪುರ ಕಾಂಗ್ರೆಸ್‌ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ ಹೇಳಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆ ಸಚಿವರಿಂದ ರಾಜೀನಾಮೆ ಪಡೆಯಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದಲ್ಲಿ ಕೋಮು ಸೌಹಾರ್ದ ಹಾಗೂ ಶಾಂತಿ ನೆಲೆಸಬೇಕು ಎಂದರೆ ಅಂತಹ ಸಚಿವರು ಬೇಕಿಲ್ಲ’ ಎಂದರು.

ADVERTISEMENT

‘ಬಿಜೆಪಿಯವರು ಸರ್ಕಾರ ನಡೆಸುತ್ತಿಲ್ಲ. ಕೋಮುಸೌಹಾರ್ದ ಹಾಳು ಮಾಡುವುದೆ ಅವರ ಕಾರ್ಯಸೂಚಿಯಾಗಿದೆ. ಅಭಿವೃದ್ಧಿ ಕೆಲಸ ಮಾಡದಿದ್ದರಿಂದ ಜಾತಿ–ಧರ್ಮದ ಮೇಲೆ ಜಗಳ ತಂದಿಟ್ಟು ಮತ ರಾಜಕಾರಣ ಮಾಡುವುದಕ್ಕೆ ಹೊರಟಿದ್ದಾರೆ. ಜನರ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನರ ದಾರಿ ತಪ್ಪಿಸಲು:‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಿಂದಿ ಹೇರಿಕೆ ಮಾಡುವುದಕ್ಕೆ ಹೊರಟಿರುವುದು ಕೂಡ ಖಂಡನೀಯ. ವಿವಿಧತೆಯೆ ದೇಶದ ಶಕ್ತಿ. ಆ ಶಕ್ತಿ ವಿಭಜನೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿರುವುದು ಸರಿಯಲ್ಲ. ಶೇ 60ರಿಂದ 70 ಮಂದಿ ಜನರು ಹಿಂದಿ ಭಾಷೆ ಮಾತನಾಡುವುದಿಲ್ಲ. ಬೇರೆ ಬೇರೆ ಭಾಷೆ ಬಳಸುತ್ತಾರೆ. ಎಲ್ಲ ಭಾಷೆಯವರೂ ಸೇರಿಯೇ ಭಾರತೀಯ ಸಂಸ್ಕೃತಿಯಾಗಿದೆ. ನಿಮ್ಮ ಉದ್ದೇಶದ (ಆರ್‌ಎಸ್‌ಎಸ್‌) ಹಿಂದೂ ರಾಷ್ಟ್ರ ಮಾಡುವುದಕ್ಕೆ ಯಾರೂ ಅವಕಾಶ ಕೊಡುವುದಿಲ್ಲ. ಭಾಷೆ ವಿಷಯದಲ್ಲಿ ರಾಜಕಾರಣ ಮಾಡಿ ಜನರ ದಾರಿ ತಪ್ಪಿಸಬೇಡಿ’ ಎಂದು ಕಿಡಿಕಾರಿದರು.

‘ಬಿಜೆಪಿಯವರು ಕೇವಲ ಭರವಸೆಗಳಲ್ಲೆ ಕಾಲ ಕಳೆಯುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದೆಲ್ಲ ಜನಾಕ್ರೋಶಕ್ಕೆ ಕಾರಣವಾಗಿದೆ. ಹೀಗಿರುವಾಗ, ಜನರ ದಿಕ್ಕು ತಪ್ಪಿಸುವುದಕ್ಕಾಗಿ ಬಿಜೆಪಿಯವರು ಧರ್ಮ–ಜಾತಿ ಹಾಗೂ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಎಲ್ಲ ಜಾತಿ, ಧರ್ಮದವರು ಸೇರಿಯೇ ಹಿಂದೂ ರಾಷ್ಟ್ರ ಆಗಿದೆ. ಅದನ್ನು ಯಾರೂ ನಾಶಪಡಿಸಲು ಆಗುವುದಿಲ್ಲ’ ಎಂದು ಹೇಳಿದರು.

ಪತಿ ರಜೆಯಲ್ಲಿದ್ದಾರೆ:‘ಪತಿ, ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರು ಅಧ್ಯಯನಕ್ಕಾಗಿ 2 ವರ್ಷ ರಜೆ ಪಡೆದಿದ್ದಾರೆ. ಬೆಂಗಳೂರಿನ ಕೆಎಲ್‌ಇ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಅವರು ವಿಆರ್‌ಎಸ್‌ ಪಡೆದು ರಾಜಕಾರಣ ಪ್ರವೇಶಿಸುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ಪದವಿ ಗಳಿಸಿದ ನಂತರ ಏನು ಮಾಡುತ್ತಾರೆಯೋ ನೋಡೋಣ’ ಎಂದು ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ನಗರ ಘಟಕದ ಅಧ್ಯಕ್ಷ ರಾಜು ಸೇಠ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.