ಬೆಳಗಾವಿ: ತಾಲ್ಲೂಕಿನ ಹೊಸ ವಂಟಮೂರಿಯಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯನ್ನು ಶನಿವಾರ ಭೇಟಿ ಮಾಡಿದ ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ಬಿಜೆಪಿ ಸತ್ಯಶೋಧನಾ ತಂಡದ ಸದಸ್ಯರು ರಾಜ್ಯ ಪೊಲೀಸರ ಕ್ರಮದ ಬಗ್ಗೆ ಭಿನ್ನ ನಿಲುವು ವ್ಯಕ್ತಪಡಿಸಿದರು.
‘ಈ ಘಟನೆ ವಿಚಾರವಾಗಿ ಪೊಲೀಸರ ತನಿಖೆ ಸರಿಯಾಗಿ ಸಾಗುತ್ತಿದೆ’ ಎಂದು ಮಹಿಳಾ ಆಯೋಗದ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ‘ಘಟನೆ ತಡೆಯುವಲ್ಲಿ ಪೊಲೀಸರು ಸಂಪೂರ್ಣ ವಿಫಲವಾಗಿದ್ದಾರೆ. ಅವರ ನಿರ್ಲಕ್ಷ್ಯವೇ ಇದಕ್ಕೆ ಕಾರಣ’ ಎಂದು ಬಿಜೆಪಿ ಸತ್ಯಶೋಧನಾ ತಂಡದ ಸದಸ್ಯರು ಆರೋಪಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಹಾಗೂ ಬಿಜೆಪಿ ಸತ್ಯಶೋಧನಾ ತಂಡದವರು ಶನಿವಾರ (ಡಿ.16) ಪ್ರತ್ಯೇಕವಾಗಿ ಪ್ರಕರಣವನ್ನು ಪರಿಶೀಲಿಸಿದರು. ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯನ್ನು ಭೇಟಿಯಾಗಿ ಮಾಹಿತಿ ದಾಖಲಿಸಿಕೊಂಡರು. ಅಲ್ಲಿಂದ ಹೊಸ ವಂಟಮೂರಿ ಗ್ರಾಮಕ್ಕೆ ತೆರಳಿ ಸ್ಥಳ ಪರಿಶೀಲಿಸಿದರು.
ಸಂತ್ರಸ್ತೆ ಭೇಟಿಯಾಗಿ ಧೈರ್ಯ ಹೇಳಿಬಂದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಡೆಲಿನಾ ಕೊಂಗಡುಪ್ ಅವರು, ‘ಅಮಾನವೀಯವಾದ ಈ ಘಟನೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈಗ ಪೊಲೀಸರ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದು, ಮಹಿಳೆ ರಕ್ಷಿಸುವ ಕೆಲಸ ಆಗಬೇಕಿದೆ. ಜನರು ಕೂಡ ತಮ್ಮ ಮನಸ್ಥಿತಿ ಬದಲಿಸಿಕೊಳ್ಳಬೇಕಿದೆ’ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ರಾಜ್ಯ ಸರ್ಕಾರದ ಮೇಲೆ ಕಿಡಿ
ಬಿಜೆಪಿ ಸತ್ಯಶೋಧನಾ ತಂಡದಲ್ಲಿದ್ದ ಸಂಸದರಾದ ಅಪರಜಿತಾ ಸಾರಂಗಿ, ಸುನೀತಾ ದುಗ್ಗಲ್, ಲಾಕೆಟ್ ಚಟರ್ಜಿ, ರಂಜಿತಾ ಕೋಲಿ ಹಾಗೂ ಪಕ್ಷದ ರಾಷ್ಟ್ರೀಯ ಘಟಕದ ಕಾರ್ಯದರ್ಶಿ ಆಶಾ ಲಾಕ್ರ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡುತ್ತ, ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.
‘ಕರ್ನಾಟಕ ಹೈಕೋರ್ಟ್ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಆದರೆ, ಪೊಲೀಸರು ಇದಕ್ಕೆ ಸರಿಯಾಗಿ ಸ್ಪಂದಿಸಿಲ್ಲ. ಘಟನಾ ಸ್ಥಳದಿಂದ ಪೊಲೀಸ್ ಠಾಣೆ ಸಮೀಪದಲ್ಲಿದ್ದರೂ ಎರಡು ತಾಸಿನ ನಂತರ ಹೋಗಿದ್ದಾರೆ. ವಿಧಾನಮಂಡಲ ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿಯಲ್ಲಿದ್ದರೂ ಸಂತ್ರಸ್ತೆ ಭೇಟಿಯಾಗಿಲ್ಲ. ಈ ಘಟನೆ ಸರ್ಕಾರದ ಮಾನಸಿಕ ಸ್ಥಿತಿ ಮತ್ತು ವೈಫಲ್ಯವನ್ನು ಎತ್ತಿ ತೋರಿಸುತ್ತದೆ’ ಎಂದು ಆರೋಪಿಸಿದರು.
‘ಅಂದು ರಾತ್ರಿ 1 ಗಂಟೆಗೆ ಈ ಘಟನೆ ನಡೆದಿದೆ. ಅದೇ ಸಮಯಕ್ಕೆ ಮಾಹಿತಿ ಪಡೆದಿದ್ದೇವೆ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ. ಆದರೆ, ಘಟನಾ ಸ್ಥಳಕ್ಕೆ ತಡವಾಗಿ ಹೋಗಿರುವುದು ಏಕೆ? 15 ಜನರು ಮನೆಗೆ ನುಗ್ಗಿ ಮಹಿಳೆ ಮೇಲೆ ದಾಳಿ ನಡೆಸಿದರೂ ಸರ್ಕಾರ ಏಕೆ ಸುಮ್ಮನಿದೆ’ ಎಂದು ಪ್ರಶ್ನಿಸಿದರು.
‘ಈ ಘಟನೆಗೆ ಸಂಬಂಧಿಸಿ ಮುಖ್ಯಮಂತ್ರಿ ಎಕ್ಸ್ ಪೋಸ್ಟ್‌ಗಷ್ಟೇ ಸೀಮಿತವಾಗುತ್ತಾರಾ’ ಎಂದು ಪ್ರಶ್ನಿಸಿದ ಸದಸ್ಯೆಯರು, ‘ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಬೆಳಗಾವಿಯ ಘಟನೆ ವಿಚಾರವಾಗಿ ತುಟಿ ಬಿಚ್ಚಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಸಚಿವ ಡಾ.ಜಿ.ಪರಮೇಶ್ವರ ಅವರು ರಾಜ್ಯದ ಮಹಿಳೆಯರ ಕ್ಷಮೆ ಕೇಳಬೇಕು. ಹೊಸ ವಂಟಮೂರಿಯಲ್ಲಿ ಇನ್ನೂ ಬಿಗುವಿನ ವಾತಾವರಣವಿದ್ದು, ಜನರ ಭಯ ಹೋಗಲಾಡಿಸಬೇಕು. ಸಂತ್ರಸ್ತೆಗೆ ಘೋಷಿಸಿದ ₹5 ಲಕ್ಷ ಪರಿಹಾರದ ಮೊತ್ತವನ್ನು ತಕ್ಷಣ ನೀಡಬೇಕು’ ಎಂದೂ ಆಗ್ರಹಿಸಿದರು.
ಮತ್ತೆ ಮೂವರ ಬಂಧನ
ಹೊಸ ವಂಟಮೂರಿಯಲ್ಲಿ ಮಹಿಳೆ ಬೆತ್ತಲೆಗೊಳಿಸಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಕತಿ ಠಾಣೆ ಪೊಲೀಸರು ಶನಿವಾರ ಮತ್ತೆ ಮೂವರು ಆರೋಪಿಗಳನ್ನು ಶನಿವಾರ ಬಂಧಿಸಿದ್ದಾರೆ. ಬಂಧಿತರ ಸಂಖ್ಯೆ 11ಕ್ಕೆ ಏರಿದೆ. ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ನಡೆದಿದೆ. ಈ ಹಿಂದೆ ಬಂಧಿತರಾದ ಯುವತಿಯ ತಂದೆ ತಾಯಿ ಅಜ್ಜಿ ಸಂಬಂಧಿಕರನ್ನು ಡಿ.21ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೊಸ ವಂಟಮೂರಿಯ ಪ್ರೇಮಿಗಳು ಮನೆ ಬಿಟ್ಟು ಹೋದ ಕಾರಣಕ್ಕೆ ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ ಆರೋಪ ಇವರ ಮೇಲಿದೆ.
ತಡವರಿಸಿದ ತಂಡ
‘ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದಾಗ ಏಕೆ ಸತ್ಯಶೋಧನಾ ಸಮಿತಿ ರಚಿಸಲಿಲ್ಲ’ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ಬಿಜೆಪಿ ಸತ್ಯಶೋಧನಾ ತಂಡದವರು ತಡವರಿಸಿದರು. ‘ಆ ಘಟನೆಯ ಬಗ್ಗೆ ಪ್ರಧಾನಿ ಅವರೇ ಗಮನ ಹರಿಸಿದ್ದಾರೆ. ನಾವು ಬಂದಿದ್ದು ಹೊಸ ವಂಟಮೂರಿ ಘಟನೆ ಕುರಿತು ಪರಿಶೀಲಿಸಲು. ಈ ಘಟನೆಯ ಬಗ್ಗೆ ಮಾತ್ರ ಮಾತನಾಡುತ್ತೇವೆ’ ಎಂದರು. ‘ಪ್ರಧಾನಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ಬೆಳಗಾವಿಗೆ ಬಂದಿದ್ದೇವೆ. ಎಲ್ಲ ಆಯಾಮಗಳಿಂದ ಪ್ರಕರಣದ ಕುರಿತು ಮಾಹಿತಿ ಪಡೆದುಕೊಂಡು ಪಕ್ಷಕ್ಕೆ ವರದಿ ಸಲ್ಲಿಸುತ್ತೇವೆ. ಲೋಕಸಭೆಯಲ್ಲೂ ಈ ಘಟನೆಯ ಬಗ್ಗೆ ಪ್ರಸ್ತಾಪ ಮಾಡುತ್ತೇವೆ’ ಎಂದರು.
2 ಎಕರೆ ಜಮೀನು ಮಂಜೂರು
‘ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ಸರ್ಕಾರ 2.03 ಎಕರೆ ಜಮೀನು ಮಂಜೂರು ಮಾಡಿ ಆದೇಶಿಸಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ.ನಾಗೇಂದ್ರ ಅವರು ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ತಕ್ಷಣವೇ ಜಮೀನು ಮಂಜೂರಾತಿಗೆ ನಿರ್ದೇಶನ ನೀಡಿದ್ದರು. ನೊಂದ ಮಹಿಳೆಗೆ ಆರ್ಥಿಕ ಸ್ಥಿರತೆ ಒದಗಿಸುವ ದೃಷ್ಟಿಯಿಂದ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಭೂ ಒಡೆತನ ಯೋಜನೆಯಡಿ ಜಮೀನು ಮಂಜೂರು ಮಾಡಲಾಗಿದೆ. ಜಮೀನು ಮಂಜೂರಾತಿ ಜತೆಗೆ ಸರ್ಕಾರವು ₹5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.