ಹುಕ್ಕೇರಿ: ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಆರ್ಭಟಿಸಿದ ಮಳೆಯಿಂದ ತಾಲ್ಲೂಕಿನಲ್ಲಿ ಹರಿಯುವ ಹಿರಣ್ಯಕೇಶಿ ನದಿಯ ಒಳಹರಿವು ಹೆಚ್ಚಾಗಿ ಬಡಕುಂದ್ರಿ ಲಕ್ಷ್ಮೀದೇವಿ (ಹೊಳೆಮ್ಮ) ಮಂದಿರ ಮತ್ತು ಸಂಕೇಶ್ವರದ ಶಂಕರಾಚಾರ್ಯ ಮಠ ಶುಕ್ರವಾರ ಜಲಾವೃತಗೊಂಡಿವೆ.
ಇವೆರಡೂ ಗುಡಿಗಳು 2019ರಲ್ಲೊಮ್ಮೆ ಜಲಾವೃತಗೊಂ
ಡಿದ್ದವು. ತಾಲ್ಲೂಕಿನಲ್ಲಿ ಹರಿಯುವ ಹಿರಣ್ಯಕೇಶಿ ನದಿಗೆ ಅಲ್ಲಲ್ಲಿ ನಿರ್ಮಿಸಿದ ಕಿರು ಸೇತುವೆಗಳು (ಬ್ರಿಜ್ ಕಂ ಬಾಂಧಾರ) ಸಂಪೂರ್ಣ ಜಲಾವೃತಗೊಂಡಿದ್ದು, ಸಾರ್ವಜನಿಕರು ಸುತ್ತಿ– ಬಳಸಿ ತಮ್ಮ ಗ್ರಾಮ ಸೇರಬೇಕಾಗಿದೆ. ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಘಟಪ್ರಭಾ ಒಳಹರಿವು: ತಾಲ್ಲೂಕಿನಲ್ಲಿ ಹರಿಯುವ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಹಿಡಕಲ್ ಜಲಾಶಯಕ್ಕೆ ಒಂದೇ ದಿನದಲ್ಲಿ 8 ಅಡಿ ನೀರು ಬಂದಿದೆ. ಗರಿಷ್ಠ 2,175 ಅಡಿ ಪೈಕಿ, ಶುಕ್ರವಾರ 2158.33 ಅಡಿ ನೀರು ಸಂಗ್ರಹವಾಗಿದೆ. ನದಿಗೆ ಒಳಹರಿವು 53,952 ಕ್ಯುಸೆಕ್ ಇದ್ದು, ಶುಕ್ರವಾರ ಕ್ರಸ್ಟ್ ಗೇಟ್ ಮೂಲಕ 10,000 ಕ್ಯುಸೆಕ್ ನೀರು ನದಿಗೆ ಬಿಡಲಾಗಿದೆ. ಶುಕ್ರವಾರ ಜಲಾಶಯವು ಶೇ.75.33ರಷ್ಟು ಭರ್ತಿಯಾಗಿದೆ.
ಹೆಚ್ಚಿನ ನೀರು ಸಾಧ್ಯತೆ: ಒಳಹರಿವು ಪ್ರಮಾಣ ಹೆಚ್ಚಾದರೆ ಘಟಪ್ರಭಾ ನದಿಗೆ ಇನ್ನೂ ಹೆಚ್ಚಿನ ನೀರು ಬಿಡಲಾಗುತ್ತದೆ, ಆದ್ದರಿಂ ನದಿಯ ಅಕ್ಕಪಕ್ಕದ ವಾಸಿಗಳು ಸುರಕ್ಷಿತ ಜಾಗಕ್ಕೆ ಹೋಗುವಂತೆ ನೀರಾವರಿ ಇಲಾಖೆ ಎಇಇ, ಹಿಡಕಲ್ ಡ್ಯಾಂ ಅಧಿಕಾರಿಗಳು ತಿಳಿಸಿದ್ದಾರೆ.
ಭೇಟಿ: ಏತನ್ಮದ್ಧೆ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಅವರು ಹಿರಣ್ಯಕೇಶಿ ತಟದ ತಾಲ್ಲೂಕಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ತಾಲ್ಲೂಕು ನೋಡಲ್ ಅಧಿಕಾರಿ ಅಶೋಕ ಗುರಾಣಿ, ಗ್ರೇಡ್ 2 ತಹಶೀಲ್ದಾರ್ ಕಿರಣ ಬೆಳವಿ, ಹುಕ್ಕೇರಿ ಪುರಸಭೆ ಅಧ್ಯಕ್ಷ ಅಣ್ಣಾಗೌಡ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.