ADVERTISEMENT

ಗ್ಯಾರಂಟಿ ಯೋಜನೆ: ಜನರ ಮನಸ್ಸು ಗೆದ್ದ ಸರ್ಕಾರ

ವಿಧಾನ ಪರಿಷತ್ ಮುಖ್ಯ ಸಚೇತಕ ಸಲಿಂ ಅಹ್ಮದ್

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 5:01 IST
Last Updated 26 ಅಕ್ಟೋಬರ್ 2025, 5:01 IST
ಹುಕ್ಕೇರಿಯಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಪಾಲ್ಗೊಂಡು ಪಕ್ಷ ಬಲವರ್ಧನೆ ಕುರಿತು ಚರ್ಚಿಸಿದರು
ಹುಕ್ಕೇರಿಯಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಪಾಲ್ಗೊಂಡು ಪಕ್ಷ ಬಲವರ್ಧನೆ ಕುರಿತು ಚರ್ಚಿಸಿದರು   

ಹುಕ್ಕೇರಿ: ‘ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನ ಮಾಡುವ ಮೂಲಕ ಜನರ ಮನಸ್ಸು ಗೆದ್ದಿದೆ. ನಮ್ಮ ಕಾರ್ಯಕರ್ತರು ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಿ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸಬೇಕು’ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲಿಂ ಅಹ್ಮದ್ ಹೇಳಿದರು.

ಶನಿವಾರ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು.

‘ಜಿಲ್ಲಾ ಮಟ್ಟದಲ್ಲಿ ಅಧ್ಯಕ್ಷರ ಆಯ್ಕೆ ಕುರಿತು ಮತ್ತು ಪಕ್ಷದ ಸಂಘಟನೆ ಮತ್ತು ಬಲವರ್ಧನೆ ಕುರಿತು ಒತ್ತು ನೀಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ 2 ವರ್ಷದಲ್ಲಿ ₹1 ಲಕ್ಷ ಕೋಟಿ ಮೀರಿ ವೆಚ್ಚ ಮಾಡಿದೆ. ಮುಂಬರುವ ಎಲ್ಲ ಚುನಾವಣೆಗಳಲ್ಲಿ ನಮ್ಮ ಪಕ್ಷವೇ ಅಧಿಕಾರದ ಗದ್ದುಗೆ ಹಿಡಿಯಲಿದೆ. ಪಕ್ಷದ ಬಲವರ್ಧನೆಗೆ ಕಾರ್ಯಕರ್ತರು ಮತ್ತು ಮುಖಂಡರು ಶ್ರಮಿಸುವಂತೆ ವಿನಂತಿಸಿದರು.

ADVERTISEMENT

ಕೇಂದ್ರದ ತಾರತಮ್ಯ: ‘ನೈಸರ್ಗಿಕ ವಿಕೋಪ ಮತ್ತು ಅತೀವೃಷ್ಟಿಗೆ ಸಂಬಂಧಿಸಿದಂತೆ ಬಿಡುಗಡೆ ಮಾಡುವ ಅನುದಾನದಲ್ಲಿ ಕೇಂದ್ರ ಸರ್ಕಾರ ತರತಮ್ಯ ಧೋರಣೆ ಹೊಂದಿದೆ. ಬೇರೆ ರಾಜ್ಯಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ರಾಜ್ಯಕ್ಕೆ ಅನ್ಯಾಯ ಎಸಗಿದೆ’ ಎಂದು ಕಿಡಿ ಕಾರಿದರು.

ನೈತಿಕ ಹಕ್ಕಿಲ್ಲ: ‘ಕೇಂದ್ರದಲ್ಲಿ ರಾಜ್ಯದಿಂದ 5 ಸಚಿವರು (ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಸೇರಿ) ಕ್ಯಾಬಿನೆಟ್‌ನಲ್ಲಿ ಇದ್ದಾರೆ. ಆದರೆ ಎಲ್ಲರೂ ನಿಷ್ಪ್ರಯೋಜಕರು. ಪ್ರಧಾನಿ ಮೋದಿ ಎದುರಿಗೆ ಇವರು ನಿಂತು ರಾಜ್ಯಕ್ಕೆ ಹೆಚ್ಚಿನ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಬಿಜೆಪಿಯವರಿಗೆ ನಮ್ಮ ಸರ್ಕಾರ ಟೀಕಿಸುವ ಯಾವ ನೈತಿಕ ಹಕ್ಕೂ ಇಲ್ಲ’ ಎಂದರು.

‘ಪ್ರಧಾನಿ ಮೋದಿ ಅವರಿಗೆ ‘ಸುಳ್ಳು ಹೇಳುವುದರಲ್ಲಿ ‘ಆಸ್ಕರ್ ಅವಾರ್ಡ್’ ಕೊಡಬೇಕು’ ಎಂದು ಲೇವಡಿ ಮಾಡಿದ ಅವರು, ‘ಇವರ ಹಸಿ ಸುಳ್ಳಿನಿಂದ ಜನರು ಬೇಸತ್ತಿದ್ದು, 2029ರಲ್ಲಿ ಕೇಂದ್ರದಲ್ಲಿ ಇಂಡಿ ಮೈತ್ರಿಕೂಟ ಅಧಿಕಾರಕ್ಕೆ ಬರಲಿದ್ದು, ರಾಹುಲ್ ಗಾಂಧಿ ಪ್ರಧಾನಿಯಾಗುವರು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪುರಸಭೆ ಅಧ್ಯಕ್ಷ ಇಮ್ರಾನ್ ಮೊಮೀನ್, ಗ್ಯಾರಂಟಿ ಅನುಷ್ಟಾನ ಕಮಿಟಿ ಅಧ್ಯಕ್ಷ ಶಾನೂಲ್ ತಹಸೀಲ್ದಾರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಾದಿಕ್ ಮಕಾನದಾರ್, ಬ್ಲಾಕ್ ಮಾಜಿ ಅಧ್ಯಕ್ಷ ರವಿ ಕರಾಳೆ, ಸಂಕೇಶ್ವರದ ಮುಕ್ತಾರ ನದಾಫ್, ಮೀರಾಸಾಬ ಚೌಧರಿ, ಸಲಿಂ ಕಳಾವಂತ, ಕಬೀರ್ ಮಲಿಕ್, ಭೀಮಾನಂದ ಮುದಕನ್ನವರ ಇದ್ದರು.

ಹುಕ್ಕೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲು ಶನಿವಾರ ಆಗಮಿಸಿದ್ದ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರನ್ನು ಪುರಸಭೆ ಅಧ್ಯಕ್ಷ ಇಮ್ರಾನ ಮೊಮೀನ್ ಗ್ಯಾರಂಟಿ ಅನುಷ್ಟಾನ ಕಮಿಟಿ ಅಧ್ಯಕ್ಷ ಶಾನೂಲ್ ತಹಸೀಲ್ದಾರ್ ಮತ್ತು ಕಾರ್ಯಕರ್ತರು ಬರಮಾಡಿಕೊಂಡರು.