ಹುಕ್ಕೇರಿ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಧೋರಣೆ ಮತ್ತು ಅಗತ್ಯ ಪದಾರ್ಥಗಳ ಬೆಲೆ ಏರಿಕೆ ಖಂಡಿಸಿ ಸೋಮವಾರ ತಾಲ್ಲೂಕಿನ ಯಮಕನಮರಡಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಯಮಕನಮರಡಿ ಬಸ್ ನಿಲ್ದಾಣದ ಬಳಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ರಾಜ್ಯಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ಮಾಡಿದರು. ಯಮಕನಮರಡಿ ಬಸ್ ನಿಲ್ದಾಣದಿಂದ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಉಪತಹಶೀಲ್ದಾರ್ ಕಚೇರಿ ಸಿಬ್ಬಂದಿ ಡಿ.ಬಿ ಮಠಪತಿ ಅವರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಹುಂದ್ರಿ ಮಾತನಾಡಿ, ‘ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜನಸಾಮಾನ್ಯರನ್ನು ಅಗತ್ಯ ಪದಾರ್ಥಗಳ ಬೆಲೆ ಹೆಚ್ಚಿಸಿ ಶೋಷಣೆ ಮಾಡುತ್ತಿದೆ. ಜನಸಾಮಾನ್ಯರ ಬೆನ್ನೆಲುಬು ಮುರಿಯುವ ಕೆಲಸ ಮಾಡುತ್ತಿದ್ದು, ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲಗೊಂಡಿದೆ’ ಎಂದು ಕಿಡಿ ಕಾರಿದರು.
ಈ ಸಂದರ್ಭದಲ್ಲಿ ಯಮಕನಮರಡಿ ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ಶ್ರೀಶೈಲ್ ಯಮಕನಮರಡಿ, ದಕ್ಷಿಣ ಮಂಡಲ ಅಧ್ಯಕ್ಷ ಅಪ್ಪಯ್ಯ ಜಾಜರ್ರಿ, ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕದ ಉಪಾಧ್ಯಕ್ಷ ಮಹಾವೀರ ನಾಶಿಪುಡಿ, ಮುಖಂಡರಾದ ರವಿ ಹಂಜಿ, ಈರಣ್ಣ ಗುರವ, ಬಸವರಾಜ ಪೂಜೇರಿ, ಬಾಳಯ್ಯ ತವಗಮಠ, ಯಲ್ಲಪ್ಪ ಗಡಕರಿ, ರಾಜು ಮಠಪತಿ, ಮುರುಗೇಶ ಹಿರೇಮಠ, ಈರಪ್ಪ ಪಾಟೀಲ್, ಶೆಟ್ಟು ಪೂಜೇರಿ, ಬಸವಣ್ಣಿ ಬಳೆಗಾರ, ಪರಶುರಾಮ ಪಾಟೀಲ್, ಚಂದ್ರಕಾಂತ ಕಾಪಸಿ ಸೇರಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.