ಹುಕ್ಕೇರಿ: ತಾಲ್ಲೂಕಿನಲ್ಲಿನ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಗಳ ಆಡಳಿತವು ನಮ್ಮ ಜನರ ದ್ರೋಹದಿಂದ ಬೇರೆಯವರ ಕೈವಶವಾಗಿದೆ. ಮುಂಬರುವ ಚುನಾವಣೆಯಲ್ಲಿ ಇವರನ್ನು ಸೋಲಿಸಿ, ತಾಲ್ಲೂಕಿನ ಜನರು ಸೂಚಿಸುವ ಸದಸ್ಯರನ್ನು ಆಯ್ಕೆ ಮಾಡಲು ಕಂಕಣಬದ್ಧರಾಗಬೇಕು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ್ ಕತ್ತಿ ಹೇಳಿದರು.
ಇಲ್ಲಿನ ವಿಶ್ವರಾಜ ಭವನದಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಸಂಕೇಶ್ವರದ ಹಿರಾ ಸಕ್ಕರೆ ಕಾರ್ಖಾನೆಯ ಹಾನಿ ತುಂಬಲು ಸಹಕಾರಿ ವಲಯದಿಂದ ಸಾಧ್ಯವಿಲ್ಲ. ಲೀಸ್ ಕೊಟ್ಟರೆ ಮಾತ್ರ ಸಾಧ್ಯವೆಂದು ನಿರ್ದೇಶಕರಿಗೆ ತಿಳಿಸಲಾಗಿತ್ತು. ಕೊನೆಯ ಗಳಿಗೆಯಲ್ಲಿ ಕೈಕೊಟ್ಟು ಬೇರೆಯವರ ಜತೆ ಕೈಜೋಡಿಸಿ ವಿಶ್ವಾಸದ್ರೋಹ ಬಗೆದರು ಎಂದು ಕಿಡಿಕಾರಿದರು.
ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಹುಂದ್ರಿ, ಹಿರಿಯ ವಕೀಲ ರಾಮಚಂದ್ರ ಜೋಶಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ನಿಖಿಲ್ ಕತ್ತಿ ಮಾತನಾಡಿ, ತಮ್ಮ 2 ವರ್ಷದ ಅವಧಿಯಲ್ಲಿ ₹990 ಕೋಟಿ ಅನುದಾನ ಕ್ಷೇತ್ರಕ್ಕೆ ತಂದಿದ್ದು, ಅಭಿವೃದ್ಧಿ ಮೂಲಕ ದಿ.ಉಮೇಶ್ ಕತ್ತಿ ಅವರ ಕನಸು ನನಸು ಮಾಡುತ್ತಿರುವುದಾಗಿ ತಿಳಿಸಿದರು.
ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ₹50 ಕೋಟಿ ಸಾಲ ಸಿಗದೇ ಹೋದಲ್ಲಿ ಮುಂಬರುವ ಋತುವಿನಲ್ಲಿ ಕಬ್ಬು ನುರಿಸಲು ಸಾಧ್ಯವಿಲ್ಲ ಎಂದ ಶಾಸಕರು, ಇತ್ತೀಚಿನ ಬೆಳವಣಿಗೆ ನೋಡಿದರೆ, ಯಾರನ್ನು ನಂಬಬೇಕು, ಯಾರನ್ನು ಬಿಡಬೇಕು ಎಂಬುದು ತಿಳಿಯದಾಗಿದೆ ಎಂದರು.
ಕೆಲವರು ನಮ್ಮ ನಮ್ಮಲ್ಲಿ ಬಿರುಕು ತಂದು ಮನೆ ಒಡೆಯುವ ಪ್ರಯತ್ನ ಮಾಡಿದರು. ಆದರೆ, ಕತ್ತಿ ಕುಟುಂಬ ಅಷ್ಟೊಂದು ದಡ್ಡವಲ್ಲ. ಅದು ಸದಾ ಒಗ್ಗಟ್ಟಾಗಿ ಜನರ ಸೇವೆಗೆ ಬದ್ಧವಾಗಿದೆ ಎಂದರು.
ಬೇಮುಲ್ ನಿರ್ದೇಶಕ ರಾಯಪ್ಪ ಡೂಗ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದುರದುಂಡಿ ಪಾಟೀಲ, ನಿರ್ದೇಶಕ ಶೀತಲ ಬ್ಯಾಳಿ, ಗುರು ಕುಲಕರ್ಣಿ, ಪುರಸಭೆ ಸದಸ್ಯ ಮಹಾವೀರ ನಿಲಜಗಿ, ಹಿರಿಯ ಸಹಕಾರಿ ಬಸವರಾಜ ಮಟಗಾರ, ಮುಖಂಡರಾದ ಪ್ರಥ್ವಿ ಕತ್ತಿ, ಪವನ್ ಕತ್ತಿ, ಪಿ.ಎಸ್.ಮುತಾಲಿಕ, ಗಜಾನನ ಕ್ವಳ್ಳಿ, ಈರಣ್ಣ ಹೂಗಾರ್, ಸುರೇಶ ಬೆಲ್ಲದ, ಶಿವನಗೌಡ ಪಾಟೀಲ, ಸುನೀಲ ನೇರ್ಲಿ, ಎ.ಕೆ.ಪಾಟೀಲ, ಮೀರಾಸಾಬ ಮುಲ್ತಾನಿ, ಅಶೋಕ ಪಾಟೀಲ ಸೇರಿದಂತೆ ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಗ್ರಾಮಗಳ ನೂರಾರು ಕಾರ್ಯಕರ್ತರು ಇದ್ದರು.
ಚಿಕ್ಕೋಡಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸತ್ಯಪ್ಪ ನಾಯಿಕ ಸ್ವಾಗತಿಸಿದರು. ಹಿರಿಯ ವಕೀಲ ಪ್ರಕಾಶ ಮುತಾಲಿಕ ಪ್ರಾಸ್ತಾವಿಸಿದರು. ಸಾತಪ್ಪ ಕರ್ಕಿನಾಯಿಕ ನಿರೂಪಿಸಿದರು. ಜಯಸಿಂಗ್ ಸನದಿ ವಂದಿಸಿದರು.
‘ನಾವು ನಾಲ್ಕು ಜನ ಇದ್ದೇವೆ. ನಮ್ಮ ಕ್ಷೇತ್ರಗಳಿಗೆ ಹೊರಗಿನವರು ಬರದಂತೆ ನಾಲ್ಕು ದಿಕ್ಕಿನಲ್ಲಿ (ಸೈನಿಕನಂತೆ) ನಿಂತು ಕಾಯುತ್ತೇವೆ’
-ರಮೇಶ್ ಕತ್ತಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.