
ಹುಕ್ಕೇರಿ: ತಾಲ್ಲೂಕಿನ 15,833 ತೋಟಪಟ್ಟಿ ಮನೆಗಳಿಗೆ ನಿರಂತರ ಜ್ಯೋತಿ ಕಲ್ಪಿಸಲು ₹ 106 ಕೋಟಿ ವೆಚ್ಚ ತಗುಲಲಿದೆ. ಈಗಾಗಲೇ ಪೈಲಟ್ ಯೋಜನೆ ಎಂದು ತಾಲ್ಲೂಕಿನ ಎಲಿಮುನ್ನೋಳಿಯ 856 ತೋಟದ ಮನೆಗಳಿಗೆ (33.86 ಕಿ.ಮೀ) ₹ 3.56 ಕೋಟಿ ವೆಚ್ಚದ ಯೋಜನೆ ಅನುಷ್ಟಾಗೊಳಿಸುತ್ತಲಿದ್ದು, ಹಂತ ಹಂತವಾಗಿ ಇಡೀ ತಾಲ್ಲೂಕಿಗೆ ಸೌಲಭ್ಯ ವಿಸ್ತರಿಸಲಾಗುವುದು ಎಂದು ಆಡಳಿತ ಮಂಡಳಿ ಪರವಾಗಿ ರೆಸಿಡೆಂಟ್ ಎಂಜನಿಯರ್ ನೇಮಿನಾಥ ಖೇಮಲಾಪುರೆ ಕರ್ನಾಟಕ ವಿದ್ಯಚ್ಛಕ್ತಿ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ರವಿಕುಮಾರ ಅವರಿಗೆ ಶುಕ್ರವಾರ ಮಾಹಿತಿ ನೀಡಿದರು.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಮುಖ್ಯ ಕಚೇರಿಯಲ್ಲಿ ಹಮ್ಮಿಕೊಂಡ ವಿಡಿಯೋ ಕಾನ್ಫ್‌ರೆನ್ಸ್ (ಸಂವಾದ) ಮೂಲಕ ಮಾತನಾಡಿದ ಅವರು 2024–25ನೇ ಸಾಲಿನ ‘ವಾರ್ಷಿಕ ಕಾರ್ಯ ನಿರ್ವಹಣಾ ಪರಿಶೀಲನೆ’ (ಆನ್ಯುವಲ್ ಪರ್ಪಾರನ್ಸ್ ರಿವಿವ್) ಅರ್ಜಿ ಕುರಿತು ಸಾರ್ವಜನಿಕ ಆಕ್ಷೇಪಣೆಗಳ ವಿಚಾರಣೆ ಸಭೆಯಲ್ಲಿ ಮಾತನಾಡಿದರು.
ವಿದ್ಯುತ್ ಬೇಡಿಕೆ ಹೆಚ್ಚಿದ ಕಾರಣ ಹೊಸದಾಗಿ 4 ಸ್ಟೇಶನ್ ಸ್ಥಾಪಿಸಲು ಅನುಮತಿ ಕೇಳಲಾಗಿತ್ತು. ನಿಡಸೋಸಿ, ಪಾಶ್ಚಾಪುರ ಮತ್ತು ಶೇಕಿನ ಹೊಸೂರ ಗ್ರಾಮಗಳಲ್ಲಿ ಸ್ಟೇಶನ್ ಸ್ಥಾಪಿಸಲು ಜಾಗೆ ದೊರಕಿದ್ದು, ಇನ್ನೇನು ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ಪ್ರಶ್ನಾವಳಿ: ಸಭೆಯಲ್ಲಿ ಹಾಜರಿದ್ದ ಶಿರಗಾಂವದ ಸುರೇಶ್ ತೇರಣಿ ಮತ್ತು ಎಲಿಮುನ್ನೋಳಿಯ ಭೀಮಗೌಡ ಗಿರಿಗೌಡನವರ ಗ್ರಾಮಸ್ಥರಿಗೆ ಮತ್ತು ತೋಟಪಟ್ಟಿ ಮನೆಯವರಿಗೆ ‘ನಿರಂತರ ಜ್ಯೋತಿ ಸೌಲಭ್ಯ’ಕಲ್ಪಿಸುವಂತೆ ಕೆಇರ್‌ಸಿ ಅಧ್ಯಕ್ಷರಿಗೆ ಮನವಿ ಮಾಡಿದರು.
ಇದಕ್ಕೆ ಸಂಘದ ಆರ್.ಇ.ಅವರನ್ನು ವಿಚಾರಿಸಿದಾಗ, 5 ಕೆವಿ ಯಿಂದ 25 ಕೆವಿ ವಿಶೇಷ ರಚನಾತ್ಮಕ ಪರಿವರ್ತಕ ಬಗ್ಗೆ ವಿಚಾರಣೆ ನಡೆಸಿದ್ದು, ಮನೆಗಳ ಸಂಖ್ಯೆ ಆಧರಿಸಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಲಾಭ: ಆರ್ಥಿಕ ವರ್ಷ 2025ರ ಪ್ರಸ್ತಾಪಿಸಿದ ವಾರ್ಷಿಕ ಆದಾಯ (ವಿದ್ಯುತ್ ಮಾರಾಟದಿಂದ) ₹297.04 ಕೋಟಿಗಿಂತ ವಾರ್ಷಿಕ ಕಾರ್ಯ ನಿರ್ವಹಣಾ ಪರಿಶೀಲನೆ ಮಾಡಿದಾಗ ₹ 326.65 ಕೋಟಿ ಆದಾಯ ಬಂದಿದೆ. ವಾರ್ಷಿಕ ಒಟ್ಟು ವೆಚ್ಚ ₹ 293.12 ಕೋಟಿ (ವಿದ್ಯುತ್ ಖರೀದಿ ₹ 272.96 ಕೋಟಿ, ದುರಸ್ತಿ ಮತ್ತು ನಿರ್ವಹಣೆ ವೆಚ್ಚ ₹ 24.14 ಕೋಟಿ, ಸವಕಳಿ ವೆಚ್ಚ ₹ 3.10 ಕೋಟಿ, ಬಡ್ಡಿ ಮತ್ತು ಹಣಕಾಸು ವೆಚ್ಚ ₹ 7.40 ಕೋಟಿ ಮತ್ತು ಇತರೆ ಸೇರಿ) ವೆಚ್ಚವಾಗಿದ್ದು, ಆದಾಯದಲ್ಲಿ ವೆಚ್ಚ ಕಳೆದಾಗ ₹ 33.53 ಕೋಟಿ ಲಾಭ ಹೊಂದಿದೆ. ಆದರೆ ಹಿಂದಿನ ಬಾಕಿ ಸೇರಿದಂತೆ ಕ್ರೋಡಿಕೃತ ವೆಚ್ಚ ಹೆಚ್ಚಿರುವದರಿಂದ ಸಂಘ ಹಾನಿಯಲ್ಲಿದೆ ಎಂದು ಅಧ್ಯಕ್ಷರಿಗೆ ತಿಳಿಸಲಾಯಿತು. ಇದೆ ಸಂದರ್ಭದಲ್ಲಿ ಸಂಘದ ಪ್ರಗತಿ ಕುರಿತು ಸಂಕ್ಷಿಪ್ತ ನೋಟ ವಿವರಿಸಲಾಯಿತು.
ಕೆ.ಇ.ಆರ್.ಸಿ.ಚೇರಮನ್ ಪಿ.ರವಿಕುಮಾರ, ಸದಸ್ಯರಾದ ಎಚ್.ಕೆ.ಜಗದೀಶ್ ಮತ್ತು ಜಾವೇದ್ ಅಖ್ತಾರ್ ವಿಡಿಯೊ ಕಾನ್ಪರನ್ಸ್ ದಲ್ಲಿ ಭಾಗವಹಿಸಿದ್ದರು.
ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಉಪಾಧ್ಯಕ್ಷ ಅಜೀತ ಮುನ್ನೋಳಿ, ನಿರ್ದೇಶಕರಾದ ಕಲಗೌಡ ಪಾಟೀಲ, ಪ್ರಥ್ವಿ ಕತ್ತಿ, ವಿನಯಗೌಡ ಪಾಟೀಲ, ಕೆಂಪಣ್ಣ ವಾಸೇದಾರ (ದೇಸಾಯಿ), ಶಿವನಗೌಡ ಮದವಾಲ, ಸತ್ಯಪ್ಪ ನಾಯಿಕ ಸೇರಿದಂತೆ ಇತರೆ ನಿರ್ದೇಶಕರು, ಎಸ್ಒ ಪ್ರೇಮ ಪಾಟೀಲ, ಸಹಕಾರಿ ಧುರೀಣರು, ವಿವಿಧ ಗ್ರಾಮಗಳ ಗ್ರಾಹಕರು, ಸಿಬ್ಬಂದಿ ಇದ್ದರು.
ಸೆಕ್ಷನ್ ಆಫಿಸರ್ ಉದಯ ಮಗದುಮ್ಮ ಸ್ವಾಗತಿಸಿದರು. ಲೇಖಪಾಲಕ ಎಸ್.ಎನ್.ಹಿರೇಮಠ ಮತ್ತು ಮಂಜುನಾಥ ಕುದನೂರೆ ನಿರೂಪಿಸಿದರು. ಐಟಿ ಮುಖ್ಯಸ್ಥ ಬಸವರಾಜ ವಾಜಂತ್ರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.