ADVERTISEMENT

ಹುಕ್ಕೇರಿ ಪುರಸಭೆ ಗದ್ದುಗೆ ಕಾಂಗ್ರೆಸ್ ತೆಕ್ಕೆಗೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2024, 15:32 IST
Last Updated 9 ಸೆಪ್ಟೆಂಬರ್ 2024, 15:32 IST
ಹುಕ್ಕೇರಿ ಪುರಸಭೆಗೆ ಅಧ್ಯಕ್ಷರಾಗಿ ಇಮ್ರಾನ್ ಮೊಮೀನ್ ಮತ್ತು  ಉಪಾಧ್ಯಕ್ಷರಾಗಿ  ಜ್ಯೋತಿ ಬಡಿಗೇರ್ ಅವಿರೋಧವಾಗಿ ಆಯ್ಕೆಯಾಗಿದ್ದು, ಕಾರ್ಯಕರ್ತರು ಸಂಭ್ರಮಿಸಿದರು
ಹುಕ್ಕೇರಿ ಪುರಸಭೆಗೆ ಅಧ್ಯಕ್ಷರಾಗಿ ಇಮ್ರಾನ್ ಮೊಮೀನ್ ಮತ್ತು  ಉಪಾಧ್ಯಕ್ಷರಾಗಿ  ಜ್ಯೋತಿ ಬಡಿಗೇರ್ ಅವಿರೋಧವಾಗಿ ಆಯ್ಕೆಯಾಗಿದ್ದು, ಕಾರ್ಯಕರ್ತರು ಸಂಭ್ರಮಿಸಿದರು   

ಹುಕ್ಕೇರಿ: ಸ್ಥಳೀಯ ಪುರಸಭೆಗೆ ಎರಡನೇ ಅವಧಿಗೆ ಸೋಮವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 9ನೇ ವಾರ್ಡ್‌ನ ಪದವಿ ಹೊಂದಿರುವ ಇಮ್ರಾನ್ ರಫಿಕ್ ಅಹ್ಮದ್ ಮೊಮೀನ್ ಅಧ್ಯಕ್ಷರಾಗಿ ಮತ್ತು 2ನೇ ವಾರ್ಡ್‌ ಜ್ಯೋತಿ ರಾಜೇಂದ್ರ ಬಡಿಗೇರ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಎರಡೂ ಸ್ಥಾನಕ್ಕೂ ಒಂದೊಂದೆ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆಯಾಗಿದೆ ಎಂದು ಚುನಾವಣಾ ಅಧಿಕಾರಿಯೂ ಆದ ತಹಶೀಲ್ದಾರ್ ಮಂಜುಳಾ ನಾಯಕ್ ಫಲಿತಾಂಶ ಘೋಷಿಸಿದರು.

ಪಟ್ಟಣದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ಪಕ್ಷ ಪುರಸಭೆಯ ಅಧಿಕಾರದ ಗದ್ದುಗೆ ಹಿಡಿದು ದಾಖಲೆ ಮಾಡಿತು.

ADVERTISEMENT

23 ಸದಸ್ಯರನ್ನು ಒಳಗೊಂಡಿರುವ ಪುರಸಭೆಯಲ್ಲಿ 12 ಕಾಂಗ್ರೆಸ್ ಪಕ್ಷದ, 8 ಬಿಜೆಪಿಯ ಮತ್ತು 3 ಪಕ್ಷೇತರ ಸದಸ್ಯರು ಇದ್ದಾರೆ. ಬಿಜೆಪಿ ಈ ಬಾರಿಯೂ ಅಧಿಕಾರದ ಗದ್ದುಗೆ ಏರಲು ಪ್ರಯತ್ನ ಪಟ್ಟರೂ ವಿಫಲವಾಯಿತು. ಫಲಿತಾಂಶ ಹೊರಬಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಧ್ವಜ ಹಾರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಮಾತನಾಡಿ, ಮೊದಲ ಅವಧಿಗೆ ನಮ್ಮ ಪಕ್ಷಕ್ಕೆ ಬಹುಮತವಿದ್ದರೂ ಗೊಂದಲದ ವಾತಾವರಣದಿಂದ ಅಧಿಕಾರ ತಪ್ಪಿತ್ತು. ಆದರೆ ಈ ಬಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಸರಿಯಾದ ಮಾರ್ಗದರ್ಶನ ನೀಡಿ ಸದಸ್ಯರೇ ಆಯ್ಕೆ ಮಾಡಲು ಅಧಿಕಾರ ನೀಡಿದ್ದರು. ಎಲ್ಲ ಕಾಂಗ್ರೆಸ್ ಸದಸ್ಯರು ಮತ್ತು ಪಕ್ಷೇತರರು ಸೇರಿ ಅವಿರೋಧ ಆಯ್ಕೆ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಬ್ಲಾಕ್ ಅಧ್ಯಕ್ಷ ವಿಜಯ್ ರವದಿ, ಮುಖಂಡರಾದ ಕಿರಣಸಿಂಗ್ ರಜಪೂತ್, ರವೀಂದ್ರ ಜಿಂಡ್ರಾಳಿ, ವೃಷಭ ಪಾಟೀಲ್, ಶಾನೂಲ್ ತಹಸೀಲ್ದಾರ್, ರಾಜು ಸಿದ್ನಾಳ್, ಮಹಾವೀರ ಮೊಹಿತೆ, ಮೌನೇಶ್ವರ ಪೋತದಾರ್ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.