ADVERTISEMENT

ರಾಜಕೀಯವಾಗಿ ಮಹತ್ವವಿಲ್ಲದಿದ್ದರೂ ಬಂದಿರುವೆ: ಜೋಶಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 14:19 IST
Last Updated 2 ಅಕ್ಟೋಬರ್ 2021, 14:19 IST
   

ಬೆಳಗಾವಿ: ‘ಅಂಗವಿಕಲರು, ಹಿರಿಯ ನಾಗರಿಕರಿಗೆ ಸಂಬಂಧಿಸಿದವು ರಾಜಕೀಯವಾಗಿ ಬಹಳ ಮಹತ್ವದ ಕಾರ್ಯಕ್ರಮವೇನಲ್ಲ. ಬಹಳ ಜನರು ಸೇರುವುದಿಲ್ಲ ಎನ್ನುವುದೂ ಗೊತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ನಾಗರಿಕರಿಗೆ ತೋರುತ್ತಿರುವ ಗೌರವದಿಂದಾಗಿ ಬಂದಿದ್ದೇನೆ’.

– ಹೀಗೆಂದು ಹೇಳಿದವರು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ.

ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ ಸಹಯೋಗದಲ್ಲಿ ನಗರದ ವಿದ್ಯಾಧಿರಾಜ ಸಭಾಭವನದಲ್ಲಿ ಶನಿವಾರ ನಡೆದ ‘ವಯೋಶ್ರೀ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಆಗ್ರಹಪೂರ್ವಕ ಕೋರಿಕೆ ಮೇರೆಗೆ ಬಂದಿದ್ದೇನೆ’ ಎಂದರು.

‘ಹಿಂದೆ, ಕ್ರೀಡಾಪಟುಗಳ ಬಗ್ಗೆ ಜನರು ಹಾಗೂ ಸರ್ಕಾರದವರು ನಿರ್ಲಕ್ಷ್ಯ ವಹಿಸುತ್ತಿದ್ದರು. ಆಡಿದರೆ ಹೊಟ್ಟೆ ತುಂಬುತ್ತದೆಯೇ ಎಂದು ಮಕ್ಕಳಿಗೆ ಇಷ್ಟವಿಲ್ಲದಿದ್ದರೂ ಓದಿಸುತ್ತಿದ್ದರು. ನಮ್ಮ ಸರ್ಕಾರ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಒಲಿಂಪಿಕ್ಸ್ ಜೊತೆಗೆ ಪ್ಯಾರಾ ಒಲಿಂಪಿಕ್ಸ್ ಪಟುಗಳಿಗೂ ಉಚಿತವಾಗಿ ತರಬೇತಿ ಕೊಡಿಸುತ್ತಿದೆ. ಹಿಂದೆ ಒಲಿಂಪಿಕ್ಸ್‌ ಕೂಟಕ್ಕೆ ಕ್ರೀಡಾಪಟುಗಳೊಂದಿಗೆ ರಾಜಕಾರಣಿಗಳು ಹಾಗೂ ಹೆಚ್ಚು ಅಧಿಕಾರಿಗಳು ಹೋಗುತ್ತಿದ್ದರು. ಆದರೆ, ನಾವು ಅದಕ್ಕೆ ಅವಕಾಶ ಕೊಟ್ಟಿಲ್ಲ. ಕ್ರೀಡಾಪಟುಗಳೊಂದಿಗೆ ಕೋಚ್‌ಗಳನ್ನು ಕಳುಹಿಸುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಎಲ್ಲದಕ್ಕೂ ಮಹತ್ವ ಕೊಟ್ಟು ಸರ್ಕಾರ ನಡೆಸುತ್ತಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.