ADVERTISEMENT

ಮರಾಠಿ, ಮರಾಠಿಗರ ವಿರುದ್ಧ ಮಾತನಾಡಿಲ್ಲ: ಸಂಜಯ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 14:30 IST
Last Updated 5 ಅಕ್ಟೋಬರ್ 2021, 14:30 IST
ಸಂಜಯ ಪಾಟೀಲ
ಸಂಜಯ ಪಾಟೀಲ   

ಬೆಳಗಾವಿ: ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಅವರು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ಮುಂದುವರಿಸಿದ್ದಾರೆ.

‘ಸಂಜಯ ಪಾಟೀಲ ಅವರು ಮರಾಠಿಗರನ್ನು ಅಪಮಾನಿಸಿದ್ದಾರೆ’ ಎಂಬ ಹೆಬ್ಬಾಳಕರ ಬೆಂಬಲಿಗರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಮರಾಠಿ ಭಾಷೆಯಲ್ಲಿ ಅವರು ಮಾಡಿರುವ ವಿಡಿಯೊ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

‘ನಾನು ಮರಾಠಿ ವಿರೋಧಿ; ಮರಾಠಿ ವಿರುದ್ಧ ಮಾತನಾಡುತ್ತೇನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಅದನ್ನು ಕೇಳಿ ನಗು ಬಂತು. ನಾನು ಮರಾಠಿ ವಿರುದ್ಧ ಮಾತನಾಡಲು ಸಾಧ್ಯವೇ? ನಾನು ಹಿಂದುತ್ವ ವಿಚಾರವಾದಿ. ಮರಾಠಿ, ಕನ್ನಡ, ಜಾತಿ ಧರ್ಮದ ಬಗ್ಗೆ ಮಾತನಾಡುವುದಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

‘ನಾನು ಗ್ರಾಮೀಣ ಕ್ಷೇತ್ರದ ಶಾಸಕನಾಗಿದ್ದಾಗ ರಾಜಹಂಸಗಡದಲ್ಲಿ ಶಿವಾಜಿ ಪ್ರತಿಮೆ ನಿರ್ಮಾಣಕ್ಕೆ ಚಾಲನೆ ಕೊಟ್ಟಿದ್ದೆ. ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಕಾಲದಲ್ಲಿ ಆನಂದಿಬಾಯಿ ಎಂಬಾಕೆ ಇದ್ದಳು. ‘ಧ’ ಅಕ್ಷರ ‘ಮ’ ಮಾಡಿ ಷಡ್ಯಂತ್ರ ಮಾಡಿದ್ದಳು. ಅಂತೆಯೇ ಇಲ್ಲೂ ಒಬ್ಬಳು ಆನಂದಿಬಾಯಿ ಇದ್ದಾಳೆ. ‘ಧ’ ಇದ್ದಿದ್ದನ್ನು ‘ಮ’ ಮಾಡಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾಳೆ’ ಎಂದು ಟೀಕಿಸಿದ್ದಾರೆ.

‘ನಾನು ಎಲ್ಲ ಭಾಷಿಕರು ಹಾಗೂ ಸಮುದಾಯದವರನ್ನೂ ಗೌರವಿಸುತ್ತೇನೆ. ಕನ್ನಡ, ಮರಾಠಿ, ಗುಜರಾತಿ, ಕೊಂಕಣಿ ಸೇರಿದಂತೆ ಎಲ್ಲ ಭಾಷೆಗಳನ್ನೂ ಗೌರವಿಸುತ್ತೇನೆ. ಮಾತೃಭಾಷೆ ಮರಾಠಿ ಬಗ್ಗೆ ನನಗೆ ಅಪಾರ ಪ್ರೇಮವಿದೆ. ಯಾರದ್ದಾದರೂ ಮನಸು ನೋಯಿಸಿದ್ದರೆ ಕ್ಷಮೆ ಯಾಚಿಸುತ್ತೇನೆ. ಮರಾಠಿಗರ ವಿರೋಧಿಗಳು ಯಾರು ಎನ್ನುವುದನ್ನು ನಿರ್ಧರಿಸಿ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.