ADVERTISEMENT

‘ಬಿಜೆಪಿ ಜನಸೇವಕ ಸಮಾವೇಶದ ವಿರುದ್ಧ ನ್ಯಾಯಾಲಯಕ್ಕೆ ಹೋಗುವೆ’

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 12:10 IST
Last Updated 16 ಜನವರಿ 2021, 12:10 IST
ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಜೆಪಿಯಿಂದ ಆಯೋಜಿಸಿರುವ ‘ಜನಸೇವಕ ಸಮಾವೇಶ ಸಮಾರೋಪ’ ರದ್ದುಪಡಿಸುವಂತೆ  ಆಗ್ರಹಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು
ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಜೆಪಿಯಿಂದ ಆಯೋಜಿಸಿರುವ ‘ಜನಸೇವಕ ಸಮಾವೇಶ ಸಮಾರೋಪ’ ರದ್ದುಪಡಿಸುವಂತೆ  ಆಗ್ರಹಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು   

ಬೆಳಗಾವಿ: ಕೋವಿಡ್–19 ನಡುವೆಯೂ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಜೆಪಿಯಿಂದ ಆಯೋಜಿಸಿರುವ ‘ಜನಸೇವಕ ಸಮಾವೇಶ ಸಮಾರೋಪ’ ರದ್ದುಪಡಿಸಬೇಕು ಎಂದು ಆಗ್ರಹಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಮತ್ತು ಜೆಡಿಎಸ್ ಮುಖಂಡ ಭೀಮಪ್ಪ ಗಡಾದ ತಮ್ಮ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

‘ಸಮಾವೇಶ ರದ್ದುಪಡಿಸಬೇಕು ಅಥವಾ ಕೋವಿಡ್ ಮಾರ್ಗಸೂಚಿ ಹಿಂಪಡೆಯಬೇಕು ಎಂದು ಆಗ್ರಹಿಸಿ ಈಚೆಗೆ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆ. ಆದರೆ, ಈವರೆಗೂ ಸರ್ಕಾರದಿಂದ ಯಾವುದೇ ಕ್ರಮ ಆಗಿಲ್ಲ. ಸಮಾವೇಶಕ್ಕೆ ಅನುಮತಿ ನೀಡಲಾಗಿದೆಯೇ ಎಂದು ಕೇಳಿದರೆ, ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರು ಸರಿಯಾದ ಉತ್ತರ ಕೊಡುತ್ತಿಲ್ಲ. ಅನುಮತಿ ಇಲ್ಲದೆ ಬಿಜೆಪಿಯವರು ಸಮಾವೇಶ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಕೋವಿಡ್-19 ಮಾರ್ಗಸೂಚಿ ಪ್ರಕಾರ ವ್ಯಕ್ತಿಯಿಂದ ವ್ಯಕ್ತಿಗೆ ಐದು ಅಡಿ ಅಂತರ ಕಾಯ್ದುಕೊಳ್ಳಬೇಕು. ಆದರೆ ಬಿಜೆಪಿಯವರು 2ರಿಂದ 3 ಲಕ್ಷ ಜನರನ್ನು ಸೇರಿಸುವುದಾಗಿ ಹೇಳಿದ್ದಾರೆ. ಇದರಿಂದ ಸಾಮಾಜಿಕ ಅಂತರ ಕಾಪಾಡಲು ಸಾಧ್ಯವಿಲ್ಲ. ಸಾಮಾನ್ಯ ಜನರು ಮಾಸ್ಕ್ ಹಾಕದಿದ್ದರೆ ದಂಡ ವಿಧಿಸುತ್ತಾರೆ. ಆದರೆ, ಯಾವುದೇ ಸಚಿವರು ಮಾಸ್ಕ್ ಧರಿಸುತ್ತಿಲ್ಲ. ಅವರಿಗೊಂದು ಕಾನೂನು; ಜನಸಾಮಾನ್ಯರಿಗೊಂದಾ?’ ಎಂದು ಕೇಳಿದರು.

ADVERTISEMENT

‘ಕಾನೂನು ಪಾಲಿಸಬೇಕಾದವರೆ ಉಲ್ಲಂಘನೆ ಮಾಡುತ್ತಿದ್ದಾರೆ. ಸಮಾವೇಶದ ವೇದಿಕೆಯಲ್ಲಿ ಕೂರುವವರು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಮೊಕದ್ದಮೆ ದಾಖಲಿಸಲುತ್ತೇನೆ. ಸಮಾವೇಶದ ವಿಡಿಯೊ ಸಂಗ್ರಹಿಸಿ ಸಾಕ್ಷಿಯೊಂದಿಗೆ ನ್ಯಾಯಾಲಯಕ್ಕೆ ನೀಡುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.