ADVERTISEMENT

ಕಷ್ಟಗಳ ಕುಲುಮೆಯಲ್ಲಿ ಚಿನ್ನವಾದವರು:‘ಚಹಾಪುಡಿ ಮಾಂತು’ ಐಎಎಸ್‌ ಸಾಧಿಸಿದ್ದು ಹೇಗೆ?

ಸಂತೋಷ ಈ.ಚಿನಗುಡಿ
Published 27 ನವೆಂಬರ್ 2025, 16:22 IST
Last Updated 27 ನವೆಂಬರ್ 2025, 16:22 IST
ಮಹಾಂತೇಶ ಬೀಳಗಿ
ಮಹಾಂತೇಶ ಬೀಳಗಿ   

ಬೆಳಗಾವಿ: ಮನೆ–ಮನೆಗೆ ಅಲೆದು ಚಹಾಪುಡಿ ಮಾಡುತ್ತಿದ್ದ ಆ ಹುಡುಗ ಮುಂದೊಂದು ದಿನ ನಾಡೇ ಮೆಚ್ಚುವಂಥ ಅಧಿಕಾರಿಯಾದ..!

ಬಡತನದ ಬೇಗೆಯಲ್ಲಿ ಬೆಂದು, ಸಂಕಷ್ಟಗಳ ಸರಮಾಲೆ ಅನುಭವಿಸಿ, ಎಳವೆಯಲ್ಲೇ ಹೆತ್ತವರನ್ನು ಕಳೆದುಕೊಂಡ ಆ ಹುಡುಗ; ಕಷ್ಟಗಳನ್ನೇ ಮೆಟ್ಟಿಲು ಮಾಡಿಕೊಂಡ. ಛಲವಿದ್ದರೆ ಏನೆಲ್ಲ ಸಾಧನೆ ಮಾಡಬಹುದು ಎಂಬುದಕ್ಕೆ ಉದಾಹರಣೆಯಾದ.

ಹೌದು. ಈಚೆಗೆ ಸಂಭವಿಸಿದ ಕಾರ್‌ ಅಪಘಾತದಲ್ಲಿ ಸಾವನ್ನಪ್ಪಿದ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಕತೆ ಇದು. ಸ್ವಂತ ಪ್ರಯತ್ನ, ಪ್ರತಿಭೆ, ಕಠಿಣ ಪರಿಶ್ರಮದಿಂದಲೇ ಸಾಧನೆಯ ಉತ್ತುಂಗ ಮುಟ್ಟಿದ ಅವರ ವ್ಯಕ್ತಿತ್ವ ಧೀಮಂತಿಕೆಯಿಂದ ಕೂಡಿತ್ತು.

ADVERTISEMENT

ತಮಗಾದ ನೋವು, ಕಷ್ಟ ಇನ್ಯಾರಿಗೂ ಆಗಬಾರದು ಎಂಬ ಕಾರಣಕ್ಕೆ ಅವರು ಸರ್ಕಾರಿ ಸೇವೆ ಜತೆಗೇ ಸಮಾಜ ಸೇವೆಗೂ ನಿಂತರು. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಕೋಚಿಂಗ್‌ ಕೇಂದ್ರ ತೆರೆದಿದ್ದರು. ಹಲವು ಬಡ ಮಕ್ಕಳ ಶೈಕ್ಷಣಿಕ ಶುಲ್ಕ ಕಟ್ಟುತ್ತಿದ್ದರು. ತಮ್ಮಂತೆಯೇ ಸಾಮಾಜಿಕ ಕಳಕಳಿ ಹೊಂದಿದ ಹಲವು ಅಧಿಕಾರಿಗಳ ದೊಡ್ಡ ಪಡೆಯೇ ಅವರೊಂದಿಗೆ ಇತ್ತು. ಅವರೊಬ್ಬ ‘ಕಿಂಗ್‌’ ಆಗುವ ಜತೆಗೆ ‘ಕಿಂಗ್‌ ಮೇಕರ್‌’ ಕೂಡ ಆಗಿದ್ದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.

ಕಷ್ಟಗಳ ಕುಲುಮೆಯಲ್ಲಿ ಕಾದು ಚಿನ್ನವಾದರು:

ಮಹಾಂತೇಶ ಅವರು ಕೇವಲ ಐದು ವರ್ಷದವರಿದ್ದಾಗ ಅವರ ತಂದೆ ಗುರುಬಸಪ್ಪ ಅಕಾಲಿಕ ನಿಧನರಾದರು. ಮಹಾಂತೇಶ ಅವರೂ ಸೇರಿ ನಾಲ್ಕು ಮಕ್ಕಳಿದ್ದರು. ಎಲ್ಲ ಮಕ್ಕಳನ್ನು ಸಾಕುವ– ಸಲಹುವ– ಕಲಿಸುವ ಹೊರೆ ತಾಯಿ ಈರಮ್ಮ ಅವರ ಮೇಲೆ ಬಿತ್ತು. ಗುರುಬಸಪ್ಪ ಅವರ ಕುಟುಂಬವೂ ಅತ್ಯಂತ ಬಡತನದಲ್ಲಿತ್ತು. ತಂದೆ– ತಾಯಿ ಇಬ್ಬರೂ ಕೂಲಿ ಮಾಡಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಮಧ್ಯದಲ್ಲೇ ತಂದೆಯ ಸಾವು ಕುಟುಂಬ ತಲ್ಲಣಿಸುವಂತೆ ಮಾಡಿತು.

ತಾಯಿ ಕೂಲಿ ಮಾಡಿ ನಾಲ್ವರೂ ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವಾಯಿತು. ಆಗ ಮಹಾಂತೇಶ ಅವರೂ ತಾಯಿಯ ಕಷ್ಟಗಳಿಗೆ ಹೆಗಲುಗೊಟ್ಟರು.

ರಾಮದುರ್ಗದ ಕಿರಾಣಿ ಅಂಗಡಿಗಳಲ್ಲಿ ತಿನಿಸುಗಳ ಚೀಟ್‌ (ಪೊಟ್ಟಣ) ಕಟ್ಟುವ ಕೆಲಸ ಮಾಡಲು ಶುರು ಮಾಡಿದರು. ರಾಮದುರ್ಗ ಬಳಿಯ ಗೊಡಚಿ ವೀರಭದ್ರೇಶ್ವರ ಜಾತ್ರೆ ಬಹಳ ದೊಡ್ಡದು. ಜಾತ್ರೆ, ಉತ್ಸವ ಸಂದರ್ಭದಲ್ಲಿ ಕಾರೀಖ್ ಮಾರಾಟ ಮಾಡಿ ಬಂದ ಹಣವನ್ನು ತಾಯಿ ಕೈಗೆ ಕೊಡುತ್ತಿದ್ದರು ಎಂಬುದನ್ನು ಅವರ ಗೆಳೆಯರು ನೆನೆಯುತ್ತಾರೆ.

ಶಾಲೆಗೆ ಹೋಗುವ ಮುನ್ನ ಹಾಗೂ ಮುಗಿದ ಮೇಲೆ ಮನೆ– ಮನೆಗೆ ಅಲೆದ ಚಹಾಪುಡಿ ಮಾರಾಟ ಮಾಡುವುದು ಅವರ ದೈನಂದಿನ ಕೆಲಸವಾಗಿತ್ತು. ಎಳೆಯ ಕೈಗಳಲ್ಲಿ ಸಾಧ್ಯವಾದ ಕೆಲಸವದು. ಅದನ್ನೇ ಅವರು ಬಹಳಷ್ಟು ವರ್ಷ ಮುಂದುವರಿಸಿದರು. ಹೀಗಾಗಿ, ರಾಮದುರ್ಗದಲ್ಲಿ ಜನ ಅವರನ್ನು ‘ಚಹಾಪುಡಿ ಮಾಂತು’ ಎಂದೇ ಕರೆಯುತ್ತಿದ್ದರು ಎಂದು ನೆನೆಯುತ್ತಾರೆ ಅವರ ಬಾಲ್ಯದ ಗೆಳೆಯರು.

ಕೆಎಎಸ್‌ನಲ್ಲಿ 4ನೇ ರ್‍ಯಾಂಕ್‌:

ಪ್ರಾಥಮಿಕ ಶಾಲೆ, ಪ್ರೌಢಶಿಕ್ಷಣ, ಪದವಿಪೂರ್ವ ಶಿಕ್ಷಣವನ್ನೂ ಅವರು ‘ಪಾರ್ಟ್‌ಟೈಮ್‌ ಕೆಲಸ’ ಮಾಡುತ್ತಲೇ ಮುಗಿಸಿದರು. ರಾಮದುರ್ಗದ ಸಿ.ಎಸ್. ಬೆಂಬಳಗಿ ಕಲಾ ಕಾಲೇಜಿನಲ್ಲಿ ಪದವಿ ಓದುವಾಗ ಸಮಾಜಶಸ್ತ್ರ ವಿಷಯದಲ್ಲಿ ಚಿನ್ನದ ಪದಕ ಪಡೆದರು. ಧಾರವಾಡದಲ್ಲಿ ಎಂ.ಎ ಇಂಗ್ಲಿಷ್‌ನಲ್ಲೂ ಚಿನ್ನದ ಪದಕ ಸಮೇತ ತೇರ್ಗಡೆಯಾದರು.

ಪದವಿ ಬಳಿಕ ಧಾರವಾಡದ ಕೋಚಿಂಗ್‌ ಕ್ಲಾಸ್‌ಗಳಲ್ಲಿ ಶಿಕ್ಷಕರಾಗಿ ಕೆಲಸ ಶುರು ಮಾಡಿದರು. ಅಲ್ಲಿಂದಲೇ ಅವರು ತಮ್ಮ ಕೆಎಎಸ್‌ ಪರೀಕ್ಷೆಗೆ ತಯಾರಿ ಮಾಡಿಕೊಂಡರು. 2006ನೇ ಬ್ಯಾಚ್‌ನಲ್ಲಿ ಅವರು ರಾಜ್ಯದ ನಾಲ್ಕನೇ ರ್‍ಯಾಂಕ್‌ ಪಡೆಯುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದರು.

ಮಹಾಂತೇಶ ಅವರ ಸಾಧನೆಯ ಹಾದಿ ಅಲ್ಲಿಂದ ರಾಜ್ಯವ್ಯಾಪಿಯಾಗಿ ಪಸರಿಸಿತು. ದಕ್ಷತೆ ಹಾಗೂ ಪ್ರಾಮಾಣಿಕತೆಯ ಅಧಿಕಾರ ನಿರ್ವಹಣೆಯ ಕಾರಣ 2012ರಲ್ಲಿ ಅವರು ಐಎಎಸ್‌ ಆಗಿ ಬಡ್ತಿ ಪಡೆದರು.

ಎಲ್ಲೆಲ್ಲಿ, ಯಾವ್ಯಾವ ಹುದ್ದೆ:

ಮಹಾಂತೇಶ ಬೀಳಗಿ ಅವರು ಧಾರವಾಡ ಎ.ಸಿ ಆಗಿ, ಕೆಐಎಡಿಬಿಯಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿ, ದಾವಣಗೆರೆಯಲ್ಲಿ ಎಸಿ, ಹಾವೇರಿ ಜಿಲ್ಲಾ ಪಂ‌ಚಾಯಿತಿ ಉಪ ಕಾರ್ಯದರ್ಶಿ, ಬೀದರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದಾವಣಗೆರೆ ಜಿಲ್ಲಾಧಿಕಾರಿ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗಳನ್ನು ಅವರು ಸಮರ್ಥವಾಗಿ ನಿರ್ವಹಿಸಿದ್ದಾರೆ. ಈಗ ಅವರನ್ನು ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಬೆಂಗಳೂರಿನಲ್ಲಿ ನಿಯೋಜನೆ ಮಾಡಲಾಗಿತ್ತು.

ಮಹಾಂತೇಶ ಅವರ ತಂದೆ ನಿಧನರಾದ ಬಳಿಕ ತಾಯಿ ವಿಧವಾ ವೇತನಕ್ಕೆ ಅರ್ಜಿ ಹಾಕಿ ಪರದಾಡಿದರು. ಆಗ ಸಿಗುತ್ತಿದ್ದ ಕೇವಲ ₹25 ವಿಧವಾ ವೇತನ ಪಡೆಯಲು ಅವರು ₹100 ಲಂಚ ಕೊಟ್ಟಿದ್ದರು. ಆ ಘಟನೆ ಮಹಾಂತೇಶ ಅವರ ಎಳೆಯ ಮನಸ್ಸಿನ ಮೇಲೆ ಗಾಢ ಪ್ರಭಾವ ಬೀರಿತ್ತು. ಖುದ್ದು ಮಹಾಂತೇಶ ಅವರೇ ತಮ್ಮ ಭಾಷಣದಲ್ಲಿ ವಿಡಿಯೊ ಚಿತ್ರೀಕರಣದಲ್ಲಿ ಇದನ್ನು ಹೇಳಿಕೊಂಡಿದ್ದಾರೆ.

ಅವರು ಜಿಲ್ಲಾಧಿಕಾರಿಯಾದ ತಕ್ಷಣ ‘ಪಿಂಚಣಿ ಅದಾಲತ್‌’ ಕಾರ್ಯಕ್ರಮವನ್ನು ಪರಿಣಾಮಕಾರಿ ಆಗಿ ಅನುಷ್ಠಾನ ಮಾಡಿದರು. ಅಧಿಕಾರಿಗಳು, ಸಿಬ್ಬಂದಿ ಖುದ್ದಾಗಿ ವಿಧವೆಯರು ಹಾಗೂ ವೃದ್ಧರ ಮನೆಗೇ ಹೋಗಿ ಪಿಂಚಣಿ ಆದೇಶ ಪತ್ರ ನೀಡುವ ಪ್ರಕ್ರಿಯೆ ಜಾರಿಗೆ ತಂದ ಕೀರ್ತಿ ಮಹಾಂತೇಶ ಅವರಿಗೆ ಸಲ್ಲುತ್ತದೆ.

ಅಪಾರ ಅಭಿಮಾನಿಗಳ ಗಳಿಕೆ:

ಧಾರವಾಡದಲ್ಲಿ ಸ್ಫೋಕನ್‌ ಇಂಗ್ಲಿಷ್‌ ತರಗತಿಗಳನ್ನು ಆರಂಭಿಸಿದ್ದು ಅವರ ಮಹತ್ವದ ನಿರ್ಧಾರವಾಗಿತ್ತು. ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳಿಂದ ಗ್ರಾಮೀಣ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬರುತ್ತಾರೆ. ಅವರನ್ನು ಕಾಡುವುದು ಇಂಗ್ಲಿಷ್‌ ಭಾಷಾಜ್ಞಾನದ ಕೊರತೆ. ಅದೇ ಕಾರಣಕ್ಕೆ ಹಲವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, ವೃತ್ತಿ ಸಂದರ್ಶನಗಲ್ಲಿ ಫೇಲಾಗುತ್ತಿದ್ದಾರೆ ಎಂಬುದು ಮಹಾಂತೇಶ ಅರಿತಿದ್ದರು. ಇಂಥ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಲು ಸ್ಪೋಕನ್‌ ಇಂಗ್ಲಿಷ್‌ ತರಬೇತಿ ಕೇಂದ್ರ ಆರಂಭಿಸಿದರು.

ಅವರ ಬಳಿ ಕಲಿತ ಹಲವರು ಸರ್ಕಾರದ ವಿವಿಧ ಹುದ್ದೆಗಳಲ್ಲಿದ್ದಾರೆ. ಅಂಥವರಲ್ಲಿ ರವಿ ಡಿ. ಚನ್ನಣ್ಣವರ ಕೂಡ ಒಬ್ಬರು. ಸರಳ ವ್ಯಕ್ತಿತ್ವ ರೂಢಿಸಿಕೊಂಡಿದ್ದ ಮಹಾಂತೇಶ, ವಾಕ್‌ಚತುರ ಆಗಿದ್ದರು. ಅವರ ಭಾಷಣ ಶೈಲಿಗೆ ಹಲವು ಅಭಿಮಾನಿಗಳನ್ನು ಮಾಡಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅವರ ಭಾಷಣಗಳು ಈಗಲೇ ವೈರಲ್‌ ಆಗುತ್ತಿವೆ.


ದುರ್ಘಟನೆ:

ಕಲಬುರಗಿ ಜಿಲ್ಲೆಯ ಜೇವರ್ಗಿ ಬಳಿ ಮಂಗಳವಾರ (ನ.25) ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಹಾಂತೇಶ ಬೀಳಗಿ (51), ಸಹೋದರ ಸಂಬಂಧಿಗಳಾದ ಶಂಕರ ಬೀಳಗಿ (55), ವೀರಣ್ಣ ಬೀಳಗಿ (53), ಈರಣ್ಣ ಸಿರಸಂಗಿ ಅವರು ಮೃತಪಟ್ಟರು.

ಮಹಾಂತೇಶ ಬೀಳಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.