ADVERTISEMENT

ಯಡಿಯೂರಪ್ಪ ಕಡೆಗಣಿಸಿದರೆ ಬಿಜೆಪಿ ದಿವಾಳಿಯಾಗುತ್ತೆ: ಪದ್ಮನಾಭ ಪ್ರಸನ್ನಕುಮಾರ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 9:18 IST
Last Updated 5 ಅಕ್ಟೋಬರ್ 2019, 9:18 IST
ಪದ್ಮನಾಭ ಪ್ರಸನ್ನಕುಮಾರ
ಪದ್ಮನಾಭ ಪ್ರಸನ್ನಕುಮಾರ   

ಬೆಳಗಾವಿ: ‘ಕೇಂದ್ರ ಸರ್ಕಾರವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕಡೆಗಣಿಸುತ್ತಿದೆ. ಇದೇ ಧೋರಣೆ ಮುಂದುವರಿದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಪಕ್ಷವು ದಿವಾಳಿಯಾಗುತ್ತದೆ’ ಎಂದು ಕೆಜೆಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ ಹೇಳಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೆರೆಯಿಂದಾಗಿ ಲಕ್ಷಾಂತರ ಮಂದಿ ಸಂತ್ರಸ್ತರಾಗಿದ್ದಾರೆ. ಅವರನ್ನು ಸರ್ಕಾರಗಳು ನಿರ್ಲಕ್ಷಿಸಬಾರದು’ ಎಂದು ತಿಳಿಸಿದರು.

‘ಧಾರಾಕಾರ ಮಳೆ ಮತ್ತು ಪ್ರವಾಹದಿಂದ ಬೆಳೆಗಳು ಸಂಪೂರ್ಣ ಹಾಳಾಗಿವೆ. ಜನರು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಆದರೂ ಕೇಂದ್ರ ಸರ್ಕಾರ ₹ 1,200 ಕೋಟಿ ಪರಿಹಾರ ಕೊಟ್ಟಿರುವುದು ಮೂಗಿಗೆ ತುಪ್ಪ ಸವರಿದಂತಾಗಿದೆ. ಈ ಹಣ ಸಾಲುವುದಿಲ್ಲ’ ಎಂದು ಭಾವುಕರಾದರು.

‘ಸರ್ಕಾರದಲ್ಲಿ ಹಣ ಖಾಲಿಯಾಗಿದೆ ಎಂದು ಮುಖ್ಯಮಂತ್ರಿಯೇ ಹೇಳಿರುವುದು ದುರ್ದೈವದ ಸಂಗತಿ’ ಎಂದು ಪ್ರತಿಕ್ರಿಯಿಸಿದರು.

‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರ ಶ್ರಮವೇ ಕಾರಣ. ಅವರನ್ನು ಕೇಂದ್ರ ಸರ್ಕಾರವಾಗಲೀ, ಹೈಕಮಾಂಡ್ ಆಗಲಿ ಕಡೆಗಣಿಸಬಾರದು. ಅವರ ಪುತ್ರ ಬಿ.ವೈ. ವಿಜಯೇಂದ್ರ ನಮ್ಮ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದಾರೆ‌. ಯಡಿಯೂರಪ್ಪ ಬಂದರೂ ಸ್ವಾಗತಿಸುತ್ತೇನೆ’ ಎಂದರು.

ಮುಖಂಡ ಮದನ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.