
ಮುಗಳಖೋಡ: ಪಟ್ಟಣದಲ್ಲಿ ಈಗ ಎಲ್ಲಿ ನೋಡಿದರೂ ಬ್ಯಾರನ್, ಪೋಸ್ಟರ್, ಬಂಟಿಂಗ್ಸ್‌ಗಳದ್ದೇ ಹಾವಳಿ. ಪ್ರಮುಖ ರಸ್ತೆ, ವೃತ್ತಗಳಲ್ಲಿ ಈಗಲೂ ಹಳೆ ಬ್ಯಾನರ್‌ಗಳು ರಾರಾಜಿಸುತ್ತಿವೆ. ಕಾರ್ಯಕ್ರಮ ಮುಗಿದು ತಿಂಗಳಾದರೂ ಕೆಲವರು ಹಾಗೇ ಬಿಟ್ಟಿದ್ದಾರೆ. ಮತ್ತೆ ಕೆಲವರು ಪರವಾನಗಿ ಇಲ್ಲದೆಯೇ ಬ್ಯಾನರ್‌ಗಳನ್ನು ಕಟ್ಟಿದ್ದಾರೆ.
ಈ ಸಂಗತಿ ಜನ– ವಾಹನ ಸಂಚಾರಕ್ಕೆ ಅಡಚಣೆ ಮಾಡುತ್ತಿದೆ ಎಂಬುದು ಒಂದೆಡೆಯಾದರೆ, ಪಟ್ಟಣದ ಅಂದವನ್ನೂ ಹಾಳು ಮಾಡುತ್ತಿರುವುದು ಇನ್ನೊಂದೆಡೆ. ಸಾರ್ವಜನಿಕ ರಸ್ತೆಗಳನ್ನು ವೈಯಕ್ತಿಕ ಪ್ರಚಾರಕ್ಕೆ ಬಳಸಿಕೊಳ್ಳುವುದಕ್ಕೆ ಕಡಿವಾಣವೇ ಇಲ್ಲವಾಗಿದೆ.
ಪಟ್ಟಣದಲ್ಲಿ ನಡೆಯುವ ಯಾವುದೇ ಹಬ್ಬ, ಹರಿದಿನಗಳ, ಕಾರ್ಯಕ್ರಮಗಳ, ದೇವರ ಜಾತ್ರೆ ಮಹೋತ್ಸವಗಳ, ರಾಜಕೀಯ ನಾಯಕರ ಭೇಟಿ, ಪ್ರಭಾವಿ ವ್ಯಕ್ತಿಗಳ ಜನ್ಮದಿನದ ಶುಭಾಶಯ ಹೀಗೆ ತಹರೇವಾರು ಬ್ಯಾನರ್‌ಗಳು ಈಗಲೂ ರಾರಾಜಿಸುತ್ತಿವೆ. ಇವುಗಳಿಗೆ ಹೇಳುವವರು– ಕೇಳುವವರು ದಿಕ್ಕೇ ಇಲ್ಲ.
ವಿವಿಧ ರೀತಿಯ ಸ್ವಾಗತ ಕಮಾನುಗಳನ್ನು ಶುಭಾಶಯಗಳನ್ನು ಕೋರುವ ಫ್ಲೆಕ್ಸ್‌ಗಳನ್ನು ಕಟ್ಟುಲು ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಜನಸಾಮಾನ್ಯರು ದಿನನಿತ್ಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.
ರಸ್ತೆ ವಿಭಜಕಗಳು, ವಿದ್ಯುತ್ ಕಂಬಗಳು, ವೃತ್ತಗಳು ಹಾಗೂ ಅಂಡಿಗಳು ಮುಂಗಟ್ಟುಗಳು ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಅಕ್ರಮವಾಗಿ ಅಳವಡಿಸಿರುವ ಬ್ಯಾನರ್‌ಗಳಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ ಹಾಗೂ ಮಳೆಯ ಸಂದರ್ಭದಲ್ಲಿ ಈ ಬ್ಯಾನರ್‌ಗಳು ಜೀವ ಅಪಾಯಕ್ಕೆ ಕಾರಣವಾಗುವಂತಹ ಸ್ಥಿತಿಯನ್ನು ನಿರ್ಮಿಸುತ್ತಿವೆ.
ಶಾಲಾ ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ಹೆಚ್ಚು ಸಂಕಷ್ಟ ಅನುಭವಿಸುತ್ತಿದ್ದಾರೆ. ಗಾಳಿ– ಮಳೆ ಬಂದಾಗ ಈ ಬ್ಯಾನರ್‌ಗಳು ಕುಸಿದು ಬೀಳುವ ಭೀತಿ ಇದ್ದರೂ, ಅದನ್ನು ಸರಿಪಡಿಸಲು ಯಾರು ಮುಂದಾಗುವುದಿಲ್ಲ.
ಪುರಸಭೆಯ ನಿಯಮಾವಳಿಯ ಪ್ರಕಾರ ಸಾರ್ವಜನಿಕ ರಸ್ತೆಗಳು, ಡಿವೈಡರ್‌ಗಳು ಹಾಗೂ ಸರ್ಕಾರಿ ಆಸ್ತಿಗಳ ಮೇಲೆ ಬ್ಯಾನರ್, ಫ್ಲೆಕ್ಸ್ ಅಥವಾ ಜಾಹೀರಾತುಗಳನ್ನು ಅಳವಡಿಸಲು ಪೂರ್ವಾನುಮತಿ ಕಡ್ಡಾಯ. ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ. ಆದರೆ ವಾಸ್ತವದಲ್ಲಿ ಈ ನಿಯಮಗಳು ಕೇವಲ ಕಾಗದಕ್ಕಷ್ಟೇ ಸೀಮಿತವಾಗಿವೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಅನಧಿಕೃತ ಹಾಗೂ ಪೂರ್ವಾನುಮತಿ ಪಡೆಯದೇ, ಅದಕ್ಕೆ ತಕ್ಕ ಶುಲ್ಕ ಬರಿಸಿದೇ ಇರುವುದರಿಂದ ಪುರಸಭೆಗೆ ಬರುವ ಆದಾಯಕ್ಕೂ ಬರೆ ಎಳೆದಂತಾಗಿದೆ.
ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಈ ಅವ್ಯವಸ್ಥೆ ಸರಿಪಡಿಸಬೇಕು. ಅನತ್ಯ ಫಲಕಗಳನ್ನು ತೆರವು ಮಾಡಬೇಕು. ಪಟ್ಟಣದ ಸೌಂದರ್ಯಕ್ಕೆ ಆದ್ಯತೆ ನೀಡಬೇಕು. ಅನುಮತಿ ಇಲ್ಲದೇ ಬ್ಯಾನರ್ ಹಾಕಿದವರಿಗೆ ದಂಡ ವಿಧಿಸಬೇಕು ಎಂದೂ ಪಟ್ಟಣದ ಜನ ಆಗ್ರಹಿಸಿದ್ದಾರೆ.
ರಸ್ತೆ ವಿಭಜಕ ಹಾಗೂ ವಿದ್ಯುತ್ ಕಂಬಗಳಿಗೆ ಬ್ಯಾನರುಗಳನ್ನು ಕಟ್ಟುವುದರಿಂದ ತೊಂದರೆಯಾಗುತ್ತಿದೆ. ಕಟ್ಟಿದವರ ಮೇಲೆ ಕಾನುನು ಕ್ರಮ ಜರುಗಿಸಬೇಕು.– ಮೋಹನ ಲಮಾಣಿ, ಉಪಾಧ್ಯಕ್ಷ ಕೆಆರ್‌ಎಸ್ ಪಕ್ಷ ರಾಯಬಾಗ ತಾಲ್ಲೂಕು
ಪಟ್ಟಣದಲ್ಲಿ ಜಾಹೀರಾತು ಅಳವಡಿಕೆಗೆ ಪ್ರತಿ ಚದರ್ ಅಡಿಗೆ ₹5 ದರವಿದೆ. ಮಠದಿಂದ ಅವಳಡಿಸಲಾದ ಬ್ಯಾನರುಗಳಿಗೆ ಅನುಮತಿ ಪಡೆದಿಲ್ಲ ಶುಲ್ಕ ನೀಡಿಲ್ಲ.– ಉದಯಕುಮಾರ ಘಟಕಾಂಬಳೆ, ಮುಖ್ಯಾಧಿಕಾರಿ ಪುರಸಭೆ ಮುಗಳಖೋಡ
ಜಾಹೀರಾತು ಮತ್ತು ಬ್ಯಾನರುಗಳ ಅನುಮತಿ ನೀಡಿ ಶುಲ್ಕ ಪಡೆಯುವುದು ಮುಖ್ಯಾಧಿಕಾರಿ ಜವಾಬ್ದಾರಿ. ಅವರ ಗಮನಕ್ಕೇ ತರದೇ ಅಳವಡಿಸಿದವರ ಮೇಲೆ ಕ್ರಮ ಜರುಗಿಸಬೇಕು.– ಶಾಂತವ್ವ ಗೋಪಾಲ, ಗೋಕಾಕ ಅಧ್ಯಕ್ಷೆ ಪುರಸಭೆ ಮುಗಳಖೋಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.