ADVERTISEMENT

ಬೆಳಗಾವಿ | ಅಕ್ರಮ ಗಣಿಗಾರಿಕೆ: ಕಲ್ಲೆಸೆದು ತಡೆದ ಮಹಿಳಾ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 20:41 IST
Last Updated 31 ಜನವರಿ 2026, 20:41 IST
ಅಕ್ರಮ ಗಣಿಗಾರಿಕೆ ಸ್ಥಳದಲ್ಲಿ ಹಿರಿಯ ಭೂ ವಿಜ್ಞಾನಿ ಬಿಂದನ್‌ ಪಾಟೀಲ ಅವರು, ಅಕ್ರಮಕ್ಕೆ ಬಳಸಿದ ಜೆಸಿಬಿ ಮೇಲೆ ಕಲ್ಲೆಸೆದರು
ಅಕ್ರಮ ಗಣಿಗಾರಿಕೆ ಸ್ಥಳದಲ್ಲಿ ಹಿರಿಯ ಭೂ ವಿಜ್ಞಾನಿ ಬಿಂದನ್‌ ಪಾಟೀಲ ಅವರು, ಅಕ್ರಮಕ್ಕೆ ಬಳಸಿದ ಜೆಸಿಬಿ ಮೇಲೆ ಕಲ್ಲೆಸೆದರು   

ಬೆಳಗಾವಿ: ತಾಲ್ಲೂಕಿನ ಇನಾಂ ಬಡಸ್‌ ಗ್ರಾಮದ ಸರಹದ್ದಿನಲ್ಲಿ ಅಕ್ರಮ ಗಣಿಗಾರಿಕೆ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಬಿಂದನ್‌ ಪಾಟೀಲ ಅವರು, ಅಕ್ರಮಕ್ಕೆ ಬಳಸಿದ ಜೆಸಿಬಿ ಮೇಲೆ ಕಲ್ಲೆಸೆದಿದ್ದಾರೆ.

ಇದರ ವಿಡಿಯೊ ತುಣುಕುಗಳು ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಅವರ ದಿಟ್ಟ ನಡೆಗೆ ಪ್ರಶಂಸೆ ವ್ಯಕ್ತವಾಗಿದೆ.

ಗ್ರಾಮದ ಹೊರವಲಯದಲ್ಲಿ ಅಕ್ರಮವಾಗಿ ಲ್ಯಾಟರೈಟ್‌ (ಸಿಮೆಂಟ್ ಉತ್ಪಾದನೆಗೆ ಬಳಸುವ ಪುಡಿಗಲ್ಲು) ತೆಗೆಯುತ್ತಿದ್ದರು. ಸ್ಥಳಕ್ಕೆ ಬಂದ ಬಿಂದನ್‌, ಗಣಿಗಾರಿಕೆ ನಿಲ್ಲಿಸಲು ತಾಕೀತು ಮಾಡಿದರು. ಆಗ ಸ್ಥಳದಲ್ಲಿದ್ದವರು ಅವರ ವಿರುದ್ಧ ಏರುಧ್ವನಿಯಲ್ಲಿ ಮಾತಾಡಲು ಶುರು ಮಾಡಿದರು. ರಾಜಕೀಯ ವ್ಯಕ್ತಿಗಳ ಹೆಸರು ಬಳಸಿಕೊಂಡು ಗಣಿಗಾರಿಕೆ ಮುಂದುವರಿಸಿದರು.

ADVERTISEMENT

ಸಿಟ್ಟಿಗೆದ್ದ ಬಿಂದನ್ ಅವರು ಅಂಗೈ ಗಾತ್ರದ ಕಲ್ಲುಗಳನ್ನು ಜೆಸಿಬಿಗೆ ಎಸೆದರು. ಅದರ ಗಾಜು ಪುಡಿಪುಡಿಯಾದವು. ಗಣಿಗಾರಿಕೆ ನಡೆಸಿದ ಆರೋಪಿಗಳೇ ಅಧಿಕಾರಿಯ ತೇಜೋವಧೆಗೆ ಇದರ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಆದರೆ, ಈ ವಿಡಿಯೊ ಸಾಕಷ್ಟು ಸಂಚಲನ ಮೂಡಿಸಿದ್ದು, ಜನರಿಂದ ಪ್ರಶಂಸೆಗಳ ಸುರಿಮಳೆ ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬಿಂದನ್‌, ‘ಇದು ತಿಂಗಳ ಹಿಂದೆ ನಡೆದ ಘಟನೆ. ಸಾಕಷ್ಟು ಎಚ್ಚರಿಕೆ ನೀಡಿದರೂ ಅವರು ಸ್ಥಳದಿಂದ ಕದಲಲಿಲ್ಲ. ಹೀಗಾಗಿ, ಶಿಸ್ತುಕ್ರಮ ವಹಿಸಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.