ADVERTISEMENT

ಬೆಳಗಾವಿ: ಜಿಐಟಿಯಲ್ಲಿ ‘ಉತ್ಕೃಷ್ಟತೆಯ ಕೇಂದ್ರ’ ಆರಂಭ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2021, 14:23 IST
Last Updated 29 ಅಕ್ಟೋಬರ್ 2021, 14:23 IST
ಬೆಳಗಾವಿಯ ಕೆಎಲ್‌ಎಸ್‌–ಗೋಗಟೆ ತಾಂತ್ರಿಕ ಕಾಲೇಜಿನಲ್ಲಿ ಐಸಿಟಿ ಅಕಾಡೆಮಿಯಿಂದ ಮಹಿಳಾ ಸಬಲೀಕರಣಕ್ಕಾಗಿ ಆರಂಭಿಸಿರುವ ‘ಉತ್ಕೃಷ್ಟತೆಯ ಕೇಂದ್ರ’ವನ್ನು ಹನಿವೆಲ್ ಇಂಡಿಯಾದ ಅಧ್ಯಕ್ಷ ಆಶಿಶ್ ಗಾಯಕವಾಡ ಶುಕ್ರವಾರ ಉದ್ಘಾಟಿಸಿದರು
ಬೆಳಗಾವಿಯ ಕೆಎಲ್‌ಎಸ್‌–ಗೋಗಟೆ ತಾಂತ್ರಿಕ ಕಾಲೇಜಿನಲ್ಲಿ ಐಸಿಟಿ ಅಕಾಡೆಮಿಯಿಂದ ಮಹಿಳಾ ಸಬಲೀಕರಣಕ್ಕಾಗಿ ಆರಂಭಿಸಿರುವ ‘ಉತ್ಕೃಷ್ಟತೆಯ ಕೇಂದ್ರ’ವನ್ನು ಹನಿವೆಲ್ ಇಂಡಿಯಾದ ಅಧ್ಯಕ್ಷ ಆಶಿಶ್ ಗಾಯಕವಾಡ ಶುಕ್ರವಾರ ಉದ್ಘಾಟಿಸಿದರು   

ಬೆಳಗಾವಿ: ಇಲ್ಲಿನ ಕೆಎಲ್ಎಸ್–ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಐಸಿಟಿ ಅಕಾಡೆಮಿಯಿಂದ ಆರಂಭಿಸಿರುವ ‘ಹನಿವೆಲ್ ಸೆಂಟರ್ ಆಫ್ ಎಕ್ಸಲೆನ್ಸ್‌’ (ಉತ್ಕೃಷ್ಟತೆಯ ಕೇಂದ್ರ) ಶುಕ್ರವಾರ ಉದ್ಘಾಟನೆಗೊಂಡಿದೆ.

ಹನಿವೆಲ್ ಇಂಡಿಯಾದ ಅಧ್ಯಕ್ಷ ಆಶಿಶ್ ಗಾಯಕವಾಡ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘ಹನಿವೆಲ್ ತಂತ್ರಜ್ಞಾನದ ನಾಯಕನಾಗಿ ಯುವ ಪೀಳಿಗೆಗೆ ವಿಶೇಷವಾಗಿ ‘ಸ್ಟೆಮ್‌’ ಕಾರ್ಯಕ್ರಮಗಳಲ್ಲಿ ಸರಿಯಾದ ಜ್ಞಾನದ ಶಿಕ್ಷಣ ನೀಡಲು ಬದ್ಧವಾಗಿದೆ. ಈ ತಂತ್ರಜ್ಞಾನ ಕಾರ್ಯಕ್ರಮಗಳು ಕೈಗೆಟುಕುವ ಮತ್ತು ಸಮಾಜದ ಎಲ್ಲ ವರ್ಗದವರಿಗೂ ಲಭ್ಯವಾಗಬೇಕು. ವೃತ್ತಿಜೀವನ ಮುಂದುವರಿಸಲು ಮತ್ತು ಉತ್ತಮ ಜೀವನ ಕಟ್ಟಿಕೊಳ್ಳಲು ಎಲ್ಲರೂ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಬೇಕು ಎನ್ನುವುದು ನಮ್ಮ ಬಯಕೆಯಾಗಿದೆ. ಈ ದೃಷ್ಟಿಕೋನದಿಂದ 500 ಯುವಜನರ ಕೌಶಲ ಹೆಚ್ಚಿಸುವಲ್ಲಿ ಕಾರ್ಯನಿರ್ವಹಿಸಲಾಗುವುದು’ ಎಂದರು.

ADVERTISEMENT

ಕೆಎಲ್‌ಎಸ್ ಜಿಐಟಿಯ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್. ಕುಲಕರ್ಣಿ ಅವರು ಹನಿವೆಲ್‌ನ ಸಿಎಸ್ಆರ್ ಉಪಕ್ರಮವಾದ ಮಹಿಳಾ ಸಬಲೀಕರಣಕ್ಕಾಗಿ ಸೆಂಟರ್ ಆಫ್ ಎಕ್ಸಲೆನ್ಸ್‌ ಸ್ಥಾಪಿಸಿದ್ದಕ್ಕಾಗಿ ಹನಿವೆಲ್ ಮತ್ತು ಐಸಿಟಿ ಅಕಾಡೆಮಿಗೆ ಕೃತಜ್ಞತೆ ಸಲ್ಲಿಸಿದರು. ಈ ಉತ್ಕೃಷ್ಟತೆಯ ಕೇಂದ್ರವು ವಿದ್ಯಾರ್ಥಿಗಳಿಗೆ ಎಡ್ಲ್ಯುಎಸ್ –ಸರ್ಟಿಫೈಡ್ ಕ್ಲೌಡ್ ಪ್ರಾಕ್ಟಿಷನರ್ ಕಲಿಯಲು ಸಹಾಯ ಮಾಡುತ್ತದೆ. ಇಂದಿನ ಅಗತ್ಯವಾಗಿರುವ ಕೌಶಲ ವೃದ್ಧಿಗೂ ಸಹಾಯ ಮಾಡುತ್ತದೆ ಎಂದು ಹೇಳಿದರು.

‘ಭವಿಷ್ಯದ ಉದ್ಯೋಗಿಗಳಿಗೆ ಭಾರತದ ಅಗತ್ಯವನ್ನು ಗುರುತಿಸಿ, ಬಿಗ್‌ಡೇಟಾ ಅನಲಿಟಿಕ್ಸ್, ವಿವಿಧ ಡಿಜಿಟಲ್ ಕೌಶಲಗಳೊಂದಿಗೆ ಸಂಸ್ಥೆಯ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ಕೇಂದ್ರ ಹೊಂದಿದೆ. ಸೆಂಟರ್ ಆಫ್ ‌ಎಕ್ಸಲೆನ್ಸ್‌ ಸುಧಾರಿತ ತಂತ್ರಜ್ಞಾನಗಳ ಕುರಿತು 100 ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತದೆ. ತಂತ್ರಜ್ಞಾನದ ಕ್ಷೇತ್ರದ ದೈತ್ಯರಿಂದ ಜಾಗತಿಕ ಪ್ರಮಾಣೀಕರಣವನ್ನು ಒದಗಿಸುತ್ತದೆ. ಪ್ರಮಾಣೀಕೃತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ’ ಎಂದು ತಿಳಿಸಲಾಯಿತು.

‘ತರಬೇತಿ ಕಾರ್ಯಕ್ರಮವು 100 ಗಂಟೆಗಳ ಕಲಿಕೆ ಮತ್ತು ವಿದ್ಯಾರ್ಥಿಗಳಿಗೆ ಹ್ಯಾಕಥಾನ್‌ ಮತ್ತು ಯುವ ಸಬಲೀಕರಣ ಶೃಂಗಸಭೆಯಲ್ಲಿ ಭಾಗವಹಿಸಲು ಅವಕಾಶಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳಲ್ಲದೆ ನಾಲ್ವರು ಅಧ್ಯಾಪಕರಿಗೆ ಸುಧಾರಿತ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡಲಾಗುವುದು’ ಎಂದು ಮಾಹಿತಿ ನೀಡಲಾಯಿತು.

ಹನಿವೆಲ್‌ ಕಂಪನಿಯ ಸಿಎಸ್ಆರ್ ಘಟಕದ ಮುಖ್ಯಸ್ಥ ಸುರೇಶ ಬಾಬು, ಜಿಐಟಿಯ ಪ್ರಾಂಶುಪಾಲ ಡಾ.ಜಯಂತ್ ಕೆ.ಕಿತ್ತೂರ, ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಹರೀಶ ಕೆಂಚಣ್ಣನವರ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.