ADVERTISEMENT

ಬೆಳಗಾವಿ: ಭಾರತ–ಜಪಾನ್‌ ಯೋಧರಿಂದ ಮುಂದುವರಿದ ಸಮರಾಭ್ಯಾಸ

ಉಗ್ರರ ಸೆರೆ, ಒತ್ತೆಯಾಳುಗಳ ರಕ್ಷಣೆ!

ಎಂ.ಮಹೇಶ
Published 9 ಮಾರ್ಚ್ 2022, 12:24 IST
Last Updated 9 ಮಾರ್ಚ್ 2022, 12:24 IST
ಭಾರತ–ಜ‍ಪಾನ್‌ ಯೋಧರು ಕೈಗೊಂಡು ಸಮರಾಭ್ಯಾಸದ ಅಂಗವಾಗಿ ಹಮ್ಮಿಕೊಂಡಿದ್ದ ಅಣಕು ಕಾರ್ಯಾಚರಣೆಯಲ್ಲಿ ಉಗ್ರರು ಅಡಗಿದ್ದ ಮನೆಯ ಮೇಲೆ ದಾಳಿ ನಡೆಸಿದ ಸಂದರ್ಧಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಭಾರತ–ಜ‍ಪಾನ್‌ ಯೋಧರು ಕೈಗೊಂಡು ಸಮರಾಭ್ಯಾಸದ ಅಂಗವಾಗಿ ಹಮ್ಮಿಕೊಂಡಿದ್ದ ಅಣಕು ಕಾರ್ಯಾಚರಣೆಯಲ್ಲಿ ಉಗ್ರರು ಅಡಗಿದ್ದ ಮನೆಯ ಮೇಲೆ ದಾಳಿ ನಡೆಸಿದ ಸಂದರ್ಧಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ತಾಲ್ಲೂಕಿನ ರೋಹಿಡೇಶ್ವರ ಕ್ಯಾಂಪ್‌ನ ಹೊರವಲಯದಲ್ಲಿ ಅಡಗುತಾಣದ ಮೇಲೆ ದಾಳಿ ನಡೆಸಿದ ಸೈನಿಕರು, ಐವರು ಉಗ್ರರನ್ನು ಕೊಂದು ಒತ್ತೆಯಾಳುಗಳಾಗಿದ್ದ ಇಬ್ಬರನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾದರು. ಕಾರ್ಯಾಚರಣೆ ವೇಳೆ, ಗುಂಡಿನ ದಾಳಿ ನಡೆಸಿ ಭಯೋತ್ಪಾದಕರ ಸದೆಬಡಿದರು. ಹಳ್ಳಿಯ ಜನರ ಆತಂಕ ದೂರ ಮಾಡಿದರು.

–ಇಂಥದೊಂದು ಅಣಕು ಕಾರ್ಯಾಚರಣೆಯಲ್ಲಿ ಭಾರತ–ಜಪಾನ್‌ ಯೋಧರು ಜೊತೆಯಲ್ಲಿ ಭಾಗಿಯಾದರು. ತಂತ್ರಗಾರಿಕೆಯ ಕೌಶಲ ಪ್ರದರ್ಶಿಸಿದರು. ಆಧುನಿಕ ತಂತ್ರಜ್ಞಾನ ಬಳಸಿಕೊಂಡು, ಉಗ್ರರಿಂದ ಅಮಾಯಕರನ್ನು ಕಾಪಾಡುವ ಪ್ರಾತ್ಯಕ್ಷಿಕೆ ನೀಡಿದರು. ಚುರುಕಿನ ಕಾರ್ಯಾಚರಣೆಯಿಂದ ಗಮನಸೆಳೆದರು.

ಇಲ್ಲಿನ ಮರಾಠಾ ಲಘು ಪದಾತಿ ದಳ ಕೇಂದ್ರ (ಎಂಎಲ್‌ಐಆರ್‌ಸಿ)ದಿಂದ ಹಮ್ಮಿಕೊಂಡಿದ್ದ ಭಾರತ–ಜಪಾನ್‌ ಯೋಧರ ಜಂಟಿ ಸಮರಾಭ್ಯಾಸ ‘ಧರ್ಮ ಗಾರ್ಡಿಯನ್‌’ ಕಾರ್ಯಕ್ರಮದ ಭಾಗವಾಗಿ ಅಭ್ಯಾಸ ಕಾರ್ಯಾಚರಣೆ ನಡೆಯಿತು. ತಾಲ್ಲೂಕಿನ ರೋಹಿಡೇಶ್ವರ ಕ್ಯಾಂಪ್‌ನಲ್ಲಿರುವ ಅಭ್ಯಾಸ ಸ್ಥಳದಲ್ಲಿ ಸೈನಿಕರು ತಮ್ಮ ಸಮರ ಕಲೆಯನ್ನು ಪ್ರದರ್ಶಿಸಿದರು.

ADVERTISEMENT

ಪಕ್ಷಿ ರೀತಿಯ ಡ್ರೋಣ್:

ಮನೆಯೊಂದರಲ್ಲಿ ಇಬ್ಬರನ್ನು ಒತ್ತೆಯಾಗಿಟ್ಟುಕೊಂಡಿದ್ದ ಐವರ ಮೇಲೆ ಯೋಜಿತ ಸರ್ಜಿಕಲ್‌ ಸ್ಟ್ರೈಕ್‌ ಮಾದರಿಯ ದಾಳಿ ನಡೆಸಿದರು. ಅತ್ಯಾಧುನಿಕ ಡ್ರೋಣ್ ಅನ್ನು ಕಾರ್ಯಾಚರಗಣೆಗೆ ಬಳಸಲಾಯಿತು. ಅದು ನೀಡಿದ ಅತ್ಯುತ್ತಮ ಉತ್ತಮ ಗುಣಮಟ್ಟದ ವಿಡಿಯೊ ಮೂಲಕ ಉಗ್ರರ ಚಟುವಟಿಕೆಗಳನ್ನು ಸೈನಿಕರು ಗಮನಿಸಿದರು. ಅದರಂತೆ ಕಾರ್ಯಕ್ರಮ ರೂಪಿಸಿದರು.

ಪಕ್ಷಿ ಹೋಲುವ ನ್ಯಾನೊ ಡ್ರೋಣ್ ಬಳಸಿ ಸೂಕ್ಷ್ಮ ಸಂಗತಿಗಳನ್ನು ಖಚಿತ‍‍‍‍ಪಡಿಸಿಕೊಂಡರು. ರೈಡ್ ಪಾರ್ಟಿ ಕಮಾಂಡರ್ ಆಗಿದ್ದವರು, ಆ ಪ್ರದೇಶದಲ್ಲಿನ ಸುರಕ್ಷಿತೆ ಬಗ್ಗೆ ಖಚಿತಪಡಿಸಿಕೊಂಡು ಉಗ್ರರಿದ್ದ ಮನೆಯ ಮೇಲೆ ದಾಳಿ ಆರಂಭಿಸಿದರು.

ನಾಯಕರ ಸೂಚನೆಯಂತೆ, ತಂಡ ತಂಡವಾಗಿ ಬಂದ ಶಸ್ತ್ರಸಜ್ಜಿತ ಯೋಧರು ಎಲ್ಲ ಕಡೆಯಿಂದಲೂ ಮನೆಯನ್ನು ಸುತ್ತುವರಿದರು. ಮನೆಯ ಮೊದಲ ಮಹಡಿ ಏರಲು ನಡೆಸಿದ ಸಾಹಸ ರೋಮಾಂಚನಗೊಳಿಸಿತು.

ಗುಂಡಿನ ದಾಳಿ, ಗ್ರನೈಡ್ ಸ್ಫೋಟ:

ಮೊದಲಿಗೆ ಮಹಡಿ ಏರಿದ ಮೂವರು, ಬಾಗಿಲಿಗೆ ಗ್ರನೈಡ್ ಹಾಕಿ ಅದನ್ನು ಸ್ಫೋಟಿಸಿ ಕೂಡಲೇ ಉಗ್ರರ ಮೇಲೆ ದಾಳಿ ನಡೆಸಿದರು. ಈ ವೇಳೆ ಪರಸ್ಪರ ಗುಂಡಿನ ದಾಳಿ ನಡೆಯಿತು. ಒಬ್ಬ ಯೋಧ ಗಾಯಗೊಂಡರು (ಅಣಕು). ಉಳಿದವರು, ಒತ್ತೆಯಲ್ಲಿದ್ದವರನ್ನು ಸುರಕ್ಷಿತವಾಗಿ ಮನೆಯಿಂದ ಹೊರ ಕರೆತಂದರು. ಚಿಕ್ಕ ‘ಟಿಒಟಿಎ ರೊಬೊಟ್’ ಬಳಸಿ, ಅಲ್ಲಿನ ಚಿತ್ರಗಳನ್ನು ಸೆರೆಹಿಡಿದು, ಉಗ್ರರು ಸಾವಿಗೀಡಾಗಿರುವುದನ್ನು ಖಚಿತಪಡಿಸಿಕೊಂಡರು.

ಸುತ್ತಲಿದ್ದ ಮನೆಗಳಲ್ಲಿ ಉಗ್ರರಿರಬಹುದೇ, ಏನಾದರೂ ಅನುಮಾನಾಸ್ಪದ ವಸ್ತು ಇರಬಹುದೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಕಾರ್ಯಾಚರಣೆ ನಡೆಸಿದರು. ಸೇನಾ ಶ್ವಾನವನ್ನೂ ಬಳಸಿದರು. ಅನುಮಾನಾಸ್ಪದ ವ್ಯಕ್ತಿ‌ಗಳು ಇಲ್ಲದಿರುವುದನ್ನು ಖಚಿತಪಡಿಸಿಕೊಂಡರು. ಆ್ಯಂಟಿ ಡ್ರೋಣ್ ಗನ್ ಮೂಲಕ ಸ್ಫೋಟಕ ಪತ್ತೆ ಹಚ್ಚಿ ಅದನ್ನು ನಾಶಪಡಿಸಿದರು. ಮನೆಯ ಸಮೀಪದಲ್ಲಿ ಅವಿತಿಟ್ಟಿದ್ದ ಗನ್ ಅನ್ನುಡ್ರೋಣ್ ಸಹಾಯದಿಂದ ಪತ್ತೆ ಹಚ್ಚಿ ವಶಕ್ಕೆ ಪಡೆದರು. ಮಾನವಹಿತ ವಾಹನಗಳನ್ನು ಬಳಸಿಕೊಂಡಿದ್ದು ವಿಶೇಷವಾಗಿತ್ತು. ಅವರಿಗೆ ತಾಂತ್ರಿಕ ತಂಡ ನೆರವಾಯಿತು.

ಯೋಧರ ಕಾರ್ಯಶೈಲಿಗೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಶಸ್ತ್ರಾಸ್ತ್ರಗಳ ಪ್ರದರ್ಶನ ನಡೆಯಿತು. ಇದರೊಂದಿಗೆ, ಈ ಆವೃತ್ತಿಯ ಜಂಟಿ ಸಮರಾಭ್ಯಾಸ ಅಂತ್ಯಗೊಂಡಿತು. 115 ಬ್ರಿಗ್ರೇಡ್‌ನ ಕಮಾಂಡರ್ ಎನ್.ಎಸ್. ಸೋಹಲ್, ಜಪಾನ್‌ ಸೇನೆಯ ಅಧಿಕಾರಿಗಳು ಇದ್ದರು.

ಅತ್ಯುತ್ತಮ ಕಾರ್ಯಾಚರಣೆ: ಮೆಚ್ಚುಗೆ

ಕಾರ್ಯಾಚರಣೆ ವೀಕ್ಷಿಸಿದ ಜಪಾನ್‌ ಸೇನೆಯ ತಂಡದ ಕಮಾಂಡರ್ ಕರ್ನಲ್‌ ಎಂಡೋ, ‘ನಮ್ಮ ಯೋಧರು ಇದೇ‌ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದಾರೆ. ಭಾರತೀಯ ಸೇನೆಯ ತಂಡದೊಂದಿಗೆ ಬೆರೆತು ಕೆಲಸ ಮಾಡಿದ್ದಾರೆ. ಭಾಷೆಯ ಅಡ್ಡಿಯ ನಡುವೆಯೂ ಸೈನಿಕರು ಚೆನ್ನಾಗಿ ಕಾರ್ಯಾಚರಣೆ ನಡೆಸಿದ್ದಾರೆ’ ಎಂದು ಹೇಳಿದರು.

‘ಎಲ್ಲರೂ ಚೆನ್ನಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಯೋಜನೆ, ಅಭ್ಯಾಸ ಎಲ್ಲವೂ ಉತ್ತಮವಾಗಿತ್ತು. ಅನುಷ್ಠಾನವೂ ಚೆನ್ನಾಗಿತ್ತು. ಯುವ ಸೈನಿಕರು ಅತ್ಯಾಧುನಿಕ ತಂತ್ರಜ್ಞಾನವನ್ನು ಅತ್ಯಂತ ವೃತ್ತಿಪರ ರೀತಿಯಲ್ಲಿ ಬಳಸಿದ್ದಾರೆ. ಪರಸ್ಪರ ಅರ್ಥ ಮಾಡಿಕೊಂಡು ಆತ್ಮವಿಶ್ವಾಸದಿಂದ ಶ್ರಮಿಸಿದ್ದಾರೆ. ಅವರೀಗ ಎಲ್ಲಿ ಬೇಕಾದರೂ ಜಂಟಿ ಕಾರ್ಯಾಚರಣೆ ನಡೆಸಲು ಸಿದ್ಧವಾಗಿದ್ದಾರೆ’ ಎಂದು 36 ರ‍್ಯಾಪಿಡ್‌ ಜನರಲ್‌ ಆಫೀಸರ್‌ ಕಮಾಂಡಿಂಗ್ (ಜಿಒಸಿ) ಮೇಜರ್‌ ಜನರಲ್ ಭವನಿಶ್‌ಕುಮಾರ್ ಪ್ರೋತ್ಸಾಹಿಸಿದರು.

‘ಉಭಯ ದೇಶಗಳ ಯೋಧರು ಪರಸ್ಪರ ಅಪಾರ ಕಲಿತಿದ್ದೀವಿ. ಸೇನೆಯ ಶಕ್ತಿಯನ್ನು ಪ್ರದರ್ಶಿಸಿದ್ದೇವೆ. ಈ ಸಮರಾಭ್ಯಾಸವು ಆತ್ಮವಿಶ್ವಾಸ ವೃದ್ಧಿಸಿದೆ’ ಎಂದು ಮೇಜರ್ ರಾಜ್‌ಪಾಲ್‌ಸಿಂಗ್ ರಾಠೋಡ್ ಮತ್ತು ಹವಾಲ್ದಾರ್ ಅಭಿಜಿತ್ ಪಾಟೀಲ್ ಪ್ರತಿಕ್ರಿಯಿಸಿದರು.

ಸಹಕಾರಿಯಾಗಿದೆ

ಜಪಾನ್‌ ಯೋಧರೊಂದಿಗೆ ಜಂಟಿ ಸಮರಾಭ್ಯಾಸದ ಅನುಭವ ಚೆನ್ನಾಗಿತ್ತು. ವೃತ್ತಿಪರ ಹಾಗೂ ವೈಯಕ್ತಿಕ ‌ಕೌಶಲ ವೃದ್ಧಿಗೆ ಸಹಕಾರಿಯಾಗಿದೆ. ಹೊಸ ತಂತ್ರಜ್ಞಾನ ಬಳಕೆಯ ಪರಿಚಯವಾಯಿತು.

–ನಾಯಕ್ ಸುಭೇದಾರ್ ರಾಮ್ ಚವ್ಹಾಣ್, ಭಾರತೀಯ ಸೇನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.