ADVERTISEMENT

ಖಾನಾಪುರ | ಮೂಲಸೌಕರ್ಯ ವಂಚಿತ ಅಶೋಕ ನಗರ

ಪ್ರಸನ್ನ ಕುಲಕರ್ಣಿ
Published 6 ಫೆಬ್ರುವರಿ 2024, 4:56 IST
Last Updated 6 ಫೆಬ್ರುವರಿ 2024, 4:56 IST
   

ಖಾನಾಪುರ: ತಾಲ್ಲೂಕಿನ ನೇರಸಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಶೋಕ ನಗರ ಕನಿಷ್ಠ ಮೂಲಸೌಕರ್ಯದಿಂದ ವಂಚಿತವಾಗಿದ್ದು, ಗ್ರಾಮಸ್ಥರು ಹೆಜ್ಜೆ ಹೆಜ್ಜೆಗೂ ತೊಂದರೆ ಅನುಭವಿಸುವಂತಾಗಿದೆ.

ಹಿಡಕಲ್ ಜಲಾಶಯ ನಿರ್ಮಾಣದ ವೇಳೆ, ಮುಳುಗಡೆ ಪ್ರದೇಶಗಳ(ಹುಕ್ಕೇರಿ ತಾಲ್ಲೂಕಿನ ದೊಡಶಾನಟ್ಟಿ ಮತ್ತು ಮಾನಗಾಂವ) ಜನರನ್ನು ಅಶೋಕ ನಗರಕ್ಕೆ ಸ್ಥಳಾಂತರಿಸಲಾಗಿದೆ.

ಅಕ್ಕ–ಪಕ್ಕದ ಊರಿನವರೆಲ್ಲರೂ ಮರಾಠಿ ಭಾಷಿಕರು. ಆದರೆ, ಅಶೋಕ ನಗರದಲ್ಲಿ ವಾಸಿಸುವವರೆಲ್ಲ ಕನ್ನಡ ಭಾಷಿಕರೇ ಆಗಿದ್ದಾರೆ.

ADVERTISEMENT

ದಟ್ಟ ಕಾನನದಿಂದ ಸುತ್ತುವರಿದ ಈ ಗ್ರಾಮ ಸುಮಾರು 2 ಸಾವಿರ ಜನಸಂಖ್ಯೆ ಹೊಂದಿದೆ. ಪ್ರತಿವರ್ಷ ಮಳೆಗಾಲದಲ್ಲಿ ಧಾರಾಕಾರ ಮಳೆ ಸುರಿಯುತ್ತದೆ. ಇಲ್ಲಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಅಂಗನವಾಡಿ ಕೇಂದ್ರಗಳಿವೆ. ಪ್ರಾಥಮಿಕ ಶಾಲೆಯಲ್ಲಿ 220 ಮಕ್ಕಳು ಓದುತ್ತಿದ್ದಾರೆ. ಆದರೆ, ಮುಂದಿನ ಶಿಕ್ಷಣಕ್ಕಾಗಿ ಮಕ್ಕಳು 12 ಕಿ.ಮೀ ಕ್ರಮಿಸಿ ಖಾನಾಪುರಕ್ಕೆ ಹೋಗಬೇಕಿದೆ. ತಮ್ಮೂರಲ್ಲಿ ಪ್ರೌಢಶಾಲೆ ಇಲ್ಲದ್ದರಿಂದ ಹೆಣ್ಣು ಮಕ್ಕಳು 7ನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ. ಇಲ್ಲಿ ಪ್ರೌಢಶಾಲೆ ನಿರ್ಮಿಸಬೇಕೆಂಬ ಬೇಡಿಕೆ ನನೆಗುದಿಗೆ ಬಿದ್ದಿದೆ.

ಅಶೋಕ ನಗರದಲ್ಲಿ ಹೆಚ್ಚಿನವರು ಕೃಷಿ ಅವಲಂಬಿಸಿದ್ದಾರೆ. ನರೇಗಾ ಯೋಜನೆ ಬಿಟ್ಟರೆ, ಸ್ಥಳೀಯವಾಗಿ ಉದ್ಯೋಗವಕಾಶಗಳಿಲ್ಲ. ದಿನಕ್ಕೆ ಎರಡು ಬಸ್‌ ಬರುವುದನ್ನು ಬಾರಿ ಬಿಟ್ಟರೆ, ಸಮರ್ಪಕವಾಗಿ ಬಸ್ ಸೌಕರ್ಯವೂ ಇಲ್ಲ. ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮೂರು ವರ್ಷಗಳ ಹಿಂದೆ ಡಾಂಬರೀಕರಣಗೊಂಡಿದ್ದರೂ, ನಿರ್ವಹಣೆ ಕೊರತೆಯಿಂದ ಹಾಳಾಗಿದೆ.

‘ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ ನಿರಾತಂಕವಾಗಿ ನಡೆಯುತ್ತಿದೆ. ಕುಡುಕರ ಹಾವಳಿಯಿಂದ ಮಹಿಳೆಯರು ಆತಂಕದಿಂದ ಓಡಾಡುವಂತಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂಬ ಒತ್ತಾಯ ಸಾರ್ವಜನಿಕರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.