ADVERTISEMENT

ಬೆಳಗಾವಿ | ಸರ್ವಿಸ್‌ ರಸ್ತೆಗಳು ಹಾಳು: ಸವಾರರ ಗೋಳು...

ಹಲಗಾ ಗ್ರಾಮದಿಂದ ಕಾಕತಿವರೆಗಿನ ಸರ್ವಿಸ್‌ ರಸ್ತೆಗಳಲ್ಲಿ ಗುಂಡಿಗಳದ್ದೇ ಸಾಮ್ರಾಜ್ಯ

ಇಮಾಮ್‌ಹುಸೇನ್‌ ಗೂಡುನವರ
Published 30 ಜೂನ್ 2025, 5:00 IST
Last Updated 30 ಜೂನ್ 2025, 5:00 IST
ಬೆಳಗಾವಿಯ ಗಾಂಧಿ ನಗರದ ಸರ್ವಿಸ್‌ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದು    ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ
ಬೆಳಗಾವಿಯ ಗಾಂಧಿ ನಗರದ ಸರ್ವಿಸ್‌ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದು    ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ   

ಬೆಳಗಾವಿ: ಸತತ ಮಳೆಯಿಂದಾಗಿ ಬೆಳಗಾವಿ ನಗರ ಮತ್ತು ಅಕ್ಕಪಕ್ಕದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್‌ ರಸ್ತೆಗಳು ಹಾಳಾಗಿವೆ. ಇದರಿಂದಾಗಿ ವಾಹನಗಳ ಚಾಲಕರು ಮತ್ತು ಸವಾರರ ಗೋಳು ಹೇಳತೀರದಾಗಿದೆ. 

ತಾಲ್ಲೂಕಿನ ಹಲಗಾದಿಂದ ಅಲಾರವಾಡ ಸೇತುವೆ, ಗಾಂಧಿ ನಗರ, ಅಶೋಕ ನಗರ, ಶ್ರೀನಗರ, ಯಮನಾಪುರ ಮಾರ್ಗವಾಗಿ ಕಾಕತಿವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡೂ ಬದಿಯ ಸರ್ವಿಸ್‌ ರಸ್ತೆಗಳತ್ತ ಕಣ್ಣು ಹಾಯಿಸಿದರೆ ಸಾಕು. ಸಾಲು ಸಾಲು ಗುಂಡಿಗಳೇ ಕಣ್ಣಿಗೆ ಬೀಳುತ್ತವೆ.

ಗಾಂಧಿ ನಗರದ ರಸ್ತೆಯಲ್ಲಂತೂ ಅಪಾರ ಪ್ರಮಾಣದಲ್ಲಿ ಮಳೆನೀರು ನಿಂತು ಇದು ರಸ್ತೆಯೋ ಅಥವಾ ಹೊಂಡವೋ ಎಂಬ ಅನುಮಾನ ಮೂಡುತ್ತಿದೆ. 

ADVERTISEMENT

ಅತ್ತ ಸುವರ್ಣ ವಿಧಾನಸೌಧ ಮತ್ತು ಇತ್ತ ಕಾಕತಿ ಕಡೆಯಿಂದ ಬರುವ ವಾಹನಗಳು ಬೆಳಗಾವಿ ನಗರ ಪ್ರವೇಶಿಸಲು ಸರ್ವಿಸ್‌ ರಸ್ತೆಗಳನ್ನೇ ಅವಲಂಬಿಸಿವೆ. ಸದಾ ದಟ್ಟಣೆಯಿಂದ ಕೂಡಿದ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನ ಸಂಚರಿಸುತ್ತವೆ. 

ಬೆಳಗಾವಿಯ ಹಣ್ಣಿನ ಮಾರುಕಟ್ಟೆ ಬಳಿಯ ಸರ್ವಿಸ್‌ ರಸ್ತೆ  ಹೊಂಡದಂತಾಗಿದೆ 

ಆದರೆ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು(ಎನ್‌ಎಚ್‌ಎಐ) ಸರಿಯಾಗಿ ರಸ್ತೆ ನಿರ್ವಹಿಸದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗಿದೆ. ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳು ಸರ್ವಿಸ್‌ ರಸ್ತೆಗಿಳಿಯುತ್ತಲೇ ಸರ್ಕಸ್‌ ಮಾಡುತ್ತ ಸಂಚರಿಸುತ್ತಿವೆ. ಜತೆಗೆ, ಸಂಚಾರ ಸಮಸ್ಯೆಯೂ ತಲೆದೋರುತ್ತಿದೆ.

‘ಈ ಹಿಂದೆ ಸುರಕ್ಷತೆ ದೃಷ್ಟಿಯಿಂದ ಹೆದ್ದಾರಿ ಬದಲಿಗೆ, ಸರ್ವಿಸ್‌ ರಸ್ತೆಯಲ್ಲಿ ಸಂಚರಿಸುತ್ತಿದ್ದೆವು. ಆದರೆ, ನಿಯಂತ್ರಣ ತಪ್ಪಿ ಹಲವು ಸವಾರರು ಬಿದ್ದು ಪೆಟ್ಟು ತಿಂದರು. ಈಗ ಸರ್ವಿಸ್‌ ರಸ್ತೆ ಗೊಡವೆಯೇ ಬೇಡವೆಂದು, ಹೆದ್ದಾರಿ ಮೇಲೆಯೇ ಸಾಗುತ್ತಿದ್ದೇವೆ’ ಎಂದು ಹಲಗಾದ ಬೈಕ್‌ ಸವಾರರು ಹೇಳುತ್ತಾರೆ.

‘ಹಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಳಾಗಿರುವ ಸರ್ವಿಸ್‌ ರಸ್ತೆ ಸುಧಾರಣೆ ಮಾಡುವಂತೆ ಎನ್‌ಎಚ್‌ಎಐ ಅಧಿಕಾರಿಗಳನ್ನು ಕೋರಿದ್ದೇವೆ’ ಎಂದು ಹಲಗಾ ಪಿಡಿಒ ವಿಜಯಲಕ್ಷ್ಮಿ ತೆಗ್ಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಳೆಯಿಂದ ಹಾಳಾಗಿರುವ ಸರ್ವಿಸ್‌ ರಸ್ತೆಯನ್ನು ಕೆಲವೆಡೆ ದುರಸ್ತಿ ಮಾಡಿದ್ದೇವೆ. ಮಳೆ ಕಡಿಮೆಯಾದ ನಂತರ ಉಳಿದ ಕಡೆ ದುರಸ್ತಿ ಕೈಗೊಳ್ಳುತ್ತೇವೆ’ ಎಂದು ಎನ್‌ಎಚ್‌ಎಐ ಅಧಿಕಾರಿಗಳು ಪ್ರತಿಕ್ರಿಯಿಸಿದರು.

ಹಲಗಾ ಬಳಿ ಹಾಳಾಗಿರುವ ಸರ್ವಿಸ್‌ ರಸ್ತೆಯಲ್ಲೇ ಬೈಕ್‌ ಸವಾರರ ಓಡಾಟ
ಶೀಘ್ರ ಎನ್‌ಎಚ್‌ಎಐ ಅಧಿಕಾರಿಗಳ ಸಭೆ ಕರೆದು ರಾಷ್ಟ್ರೀಯ ಹೆದ್ದಾರಿ ಬದಿಯ ಸರ್ವಿಸ್‌ ರಸ್ತೆಗಳನ್ನು ದುರಸ್ತಿ ಮಾಡುವಂತೆ ಸೂಚಿಸುತ್ತೇನೆ
– ಮೊಹಮ್ಮದ್‌ ರೋಷನ್‌, ಜಿಲ್ಲಾಧಿಕಾರಿ
ಸತತ ಮಳೆಯಿಂದ ಸರ್ವಿಸ್‌ ರಸ್ತೆಗಳೆಲ್ಲ ಹದಗೆಟ್ಟಿವೆ. ಮಳೆಗಾಲ ಆರಂಭಕ್ಕೂ ಮುನ್ನವೇ ಇವುಗಳನ್ನು ದುರಸ್ತಿ ಮಾಡಬೇಕಿತ್ತು
– ನುಪೂರ ದಳವಿ, ಸ್ಥಳೀಯ ಮಹಿಳೆ ಬೆಳಗಾವಿ
ಎನ್‌ಎಚ್‌ಎಐನವರು ಹೆದ್ದಾರಿ ನಿರ್ವಹಣೆ ಮಾಡಿದರೆ ಸಾಲದು. ಸರ್ವಿಸ್‌ ರಸ್ತೆಗಳ ಕಡೆಯೂ ಗಮನಹರಿಸಬೇಕು
– ಉದಯ ಪದ್ಮನ್ನವರ, ಸಾಮಾಜಿಕ ಕಾರ್ಯಕರ್ತ ಬೆಳಗಾವಿ

ರೈತರಿಗೆ ತೊಂದರೆ

ಬೆಳಗಾವಿಯ ಹಣ್ಣಿನ ಮಾರುಕಟ್ಟೆ ಪುಷ್ಪ ಹರಾಜು ಕೇಂದ್ರ ಖಾಸಗಿ ಸಗಟು ತರಕಾರಿ ಮಾರುಕಟ್ಟೆ ಸರ್ವಿಸ್‌ ರಸ್ತೆ ಬದಿಯೇ ಇರುವುದರಿಂದ ರೈತರು ಮತ್ತು ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ಆದರೆ ಹಾಳಾದ ರಸ್ತೆಯಲ್ಲಿ ತಮ್ಮ ಉತ್ಪನ್ನಗಳನ್ನು ಸಾಗಿಸಲು ಅವರಿಗೆ ಕಷ್ಟವಾಗುತ್ತಿದೆ. ಜತೆಗೆ ಹೆದ್ದಾರಿ ಬದಿಯ ಕೃಷಿಭೂಮಿಗೆ ತೆರಳಲು ನಿತ್ಯ ಸಮಸ್ಯೆಯಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.