ADVERTISEMENT

ಕಲ್ಲೋಳಿ ಅಭಿವೃದ್ಧಿಗೆ ಯೋಜನೆ ಬಳಸಿಕೊಳ್ಳಲು ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೆದ್ದವರೆಲ್ಲರೂ ಬಿಜೆಪಿಯವರೆ: ಬಾಲಚಂದ್ರ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 16:00 IST
Last Updated 7 ಜನವರಿ 2022, 16:00 IST
ಕಲ್ಲೋಳಿ ಪಟ್ಟಣ ಪಂಚಾಯ್ತಿಯ ನೂತನ ಸದಸ್ಯರು ಕೆ.ಎಂ.ಎಫ್. ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಗೋಕಾಕದಲ್ಲಿ ಶುಕ್ರವಾರ ಸತ್ಕರಿಸಿದರು
ಕಲ್ಲೋಳಿ ಪಟ್ಟಣ ಪಂಚಾಯ್ತಿಯ ನೂತನ ಸದಸ್ಯರು ಕೆ.ಎಂ.ಎಫ್. ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಗೋಕಾಕದಲ್ಲಿ ಶುಕ್ರವಾರ ಸತ್ಕರಿಸಿದರು   

ಗೋಕಾಕ: ‘ಕಲ್ಲೋಳಿ ಪಟ್ಟಣದ ಸರ್ವಾಂಗೀಣ ವಿಕಾಸಕ್ಕೆ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಭಿವೃದ್ಧಿ ಕಾರ್ಯಗಳಲ್ಲಿ ಪಕ್ಷಪಾತ ಮಾಡಬಾರದು’ ಎಂದು ಕೆಎಂಎಫ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ.ಪಂ. ನೂತನ ಸದಸ್ಯರಿಗೆ ಸಲಹೆ ನೀಡಿದರು.

ತಮ್ಮನ್ನು ಶುಕ್ರವಾರ ಭೇಟಿಯಾದ ಸದಸ್ಯರನ್ನು ಅಭಿನಂದಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಜನರ ಪ್ರೀತಿ–ವಿಶ್ವಾಸ ಗಳಿಸಿಕೊಂಡು, ಮೂಲಭೂತ ಸೌಕರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸ್ಪಂದಿಸಬೇಕು. ಈ ಮೂಲಕ ಮತದಾರರ ಋಣ ತೀರಿಸಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಡಿ. 27ರಂದು ನಡೆದ ಚುನಾವಣೆಯಲ್ಲಿ ನಮ್ಮವರೇ ಆದ ಎರಡು ಗುಂಪುಗಳಾಗಿ ಸ್ಪರ್ಧಿಸಿದ್ದವು. ಕೆಲವರು ಬಿಜೆಪಿಯಿಂದ ಸ್ಪರ್ಧಿಸಿದ್ದರೆ, ಟಿಕೆಟ್ ದೊರೆಯದವರು ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಗೆಲುವು ಸಾಧಿಸಿದವರೆಲ್ಲರೂ ಬಿಜೆಪಿಯವರೆ’ ಎಂದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಡಬೇಕು. ಸೋಲು-ಗೆಲುವನ್ನು ಕ್ರೀಡಾ ಮನೋಭಾವದಿಂದ ಸಮನಾಗಿ ಸ್ವೀಕರಿಸಬೇಕು. ಈ ಚುನಾವಣೆಯಲ್ಲಿ ಸೋತವರು ಏನೇನೋ ಆರೋಪಗಳನ್ನು ಮಾಡುತ್ತಿದ್ದಾರೆ. ನಮಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಇದೆ. ಜನರ ವಿಶ್ವಾಸವನ್ನು ಗಳಿಸಿಕೊಂಡು ಅಭಿವೃದ್ಧಿಯತ್ತ ಗಮನ ನೀಡಬೇಕು’ ಎಂದು ತಿಳಿಸಿದರು.

‘ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ನಗರೋತ್ಥಾನ ಯೋಜನೆಯಡಿ ಅನುದಾನ ಹೆಚ್ಚಿಸಿದೆ. ಇದರಿಂದ ಪಟ್ಟಣ ಪಂಚಾಯ್ತಿಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ಪೂರಕವಾಗಲಿದೆ’ ಎಂದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ,ಮುಖಂಡರಾದ ಬಸಗೌಡ ಪಾಟೀಲ, ಬಸವಂತ ದಾಸನವರ, ಸುಭಾಸ ಕುರಬೇಟ, ಮಹಾಂತೇಶ ಕಪ್ಪಲಗುದ್ದಿ, ವಸಂತ ತಹಶೀಲ್ದಾರ, ಮಲ್ಲಪ್ಪ ಹೆಬ್ಬಾಳ, ಮಲ್ಲಪ್ಪ ಕಡಾಡಿ, ಬಸವರಾಜ ಯಾದಗೂಡ, ರಾಮು ಗಾಣಿಗೇರ, ರಾಮಪ್ಪ ಹಡಗಿನಾಳ, ಮುತ್ತೆಪ್ಪ ಭಜಂತ್ರಿ, ಮಾಳಪ್ಪ ಸನದಿ, ಕಮಲವ್ವ ಕಳ್ಳಿಗುದ್ದಿ, ಯಲ್ಲಪ್ಪ ದಾಸನವರ, ಮೋಹನ ಗಾಡಿವಡ್ಡರ, ಶಿವಾನಂದ ಹೆಬ್ಬಾಳ, ಭೀಮಶಿ ಗೊರೋಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.