ADVERTISEMENT

ಎಲ್‌ಐಸಿ ಖಾಸಗೀಕರಣಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 13:23 IST
Last Updated 18 ಮಾರ್ಚ್ 2021, 13:23 IST
ಎಲ್‌ಐಸಿ ಖಾಸಗೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ವಿಮಾ ನೌಕರರ ಒಕ್ಕೂಟ ಬೆಳಗಾವಿ ವಿಭಾಗದ ಸದಸ್ಯರು ಬಸವೇಶ್ವರ ವೃತ್ತದ ಎಲ್‌ಐಸಿ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು
ಎಲ್‌ಐಸಿ ಖಾಸಗೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ವಿಮಾ ನೌಕರರ ಒಕ್ಕೂಟ ಬೆಳಗಾವಿ ವಿಭಾಗದ ಸದಸ್ಯರು ಬಸವೇಶ್ವರ ವೃತ್ತದ ಎಲ್‌ಐಸಿ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು   

ಬೆಳಗಾವಿ: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಖಾಸಗೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ವಿಮಾ ನೌಕರರ ಒಕ್ಕೂಟ ಬೆಳಗಾವಿ ವಿಭಾಗದ ಸದಸ್ಯರು ಇಲ್ಲಿನ ಬಸವೇಶ್ವರ ವೃತ್ತದಲ್ಲಿರುವ ಎಲ್‌ಐಸಿ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

‘ಎಲ್‌ಐಸಿ ಲಾಭದಲ್ಲಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಷೇರುಗಳನ್ನು ಮಾರಾಟ ಮಾಡಲು ಹೊರಟಿರುವುದು ದುರಾದೃಷ್ಟಕರ. ಖಾಸಗೀಕರಣ ‍ಪ್ರಸ್ತಾಪವನ್ನು ಕೂಡಲೇ ಕೈಬಿಡಬೇಕು’ ಎಂದು ಒತ್ತಾಯಿಸಿದರು.

‘ಎಲ್‌ಐಸಿ ಷೇರುಗಳ ಮಾರಾಟದ ಮೂಲಕ ಜನರ ಉಳಿತಾಯ ಹಾಗೂ ಹಲವರ ಆರ್ಥಿಕ ಭದ್ರತೆಯನ್ನೇ ಕೇಂದ್ರ ಸರ್ಕಾರ ಕಸಿದುಕೊಳ್ಳಲು ಹೊರಟಿದೆ. ದೇಶದ ಆರ್ಥಿಕತೆಯ ಆಧಾರಸ್ತಂಭವಾಗಿರುವ ಎಲ್‌ಐಸಿಯಲ್ಲಿ ವಿದೇಶಿ ಹೂಡಿಕೆಯನ್ನು ಶೇ 49ರಿಂದ ಶೇ 74ಕ್ಕೆ ಹೆಚ್ಚಿಸಲಾಗಿದೆ. ನಿಗಮದಲ್ಲಿನ ಷೇರುಗಳ ಮಾರಾಟದಿಂದ ಇಲ್ಲಿನ ಜನರ ಹೂಡಿಕೆಯ ಹಣವನ್ನೇ ವಿದೇಶಗಳಿಗೆ ನೀಡಿದಂತಾಗಲಿದೆ’ ಎಂದು ದೂರಿದರು.

ADVERTISEMENT

‘ವಿಮಾ ವಲಯದ ಖಾಸಗೀಕರಣ ವಿರೋಧಿಸಿ ದೇಶದಾದ್ಯಂತ ವಿಮಾ ನೌಕರರು, ಅಧಿಕಾರಿಗಳು ಮುಷ್ಕರ ನಡೆಸುತ್ತಿದ್ದಾರೆ. ಅದನ್ನು ನಾವೂ ಬೆಂಬಲಿಸಿದ್ದೇವೆ. ಎಲ್‍ಐಸಿ ನಂಬಿಕೆಗೆ ಅರ್ಹವಾಗಿದೆ. ಖಾಸಗೀಕರಣ ವಿಚಾರದಲ್ಲಿ ಮುಂದುವರಿಯಬಾರದು. ಸಾರ್ವಜನಿಕ ವಲಯದಲ್ಲಿರುವ ಸಾಮಾನ್ಯ ವಿಮಾ ಕಂಪನಿಯ ಖಾಸಗೀಕರಣ ರಾಷ್ಟ್ರದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಖಾಸಗೀಕರಣದ ಬದಲು ವಿಮಾ ಕಂಪನಿಗಳಿಗೆ ಇನ್ನಷ್ಟು ಬಲ ತುಂಬಬೇಕು’ ಎಂದು ಒತ್ತಾಯಿಸಿದರು.

ವಿಭಾಗದ ಅಧ್ಯಕ್ಷ ಚಂದ್ರಶೇಖರ ಬೋಳಗುಂಡಿ, ಪ್ರಧಾನ ಕಾರ್ಯದರ್ಶಿ ಎಸ್.ಕೆ. ಕುಲಕರ್ಣಿ, ಎಲ್‌ಐಸಿ ಪ.ಜಾತಿ., ಪ.ಪಂ. ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್‌.ವೈ. ಯಂಕಣ್ಣವರ, ಎಲ್‌ಐಸಿ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಕುಲಕರ್ಣಿ, ಎಲ್‌ಐಸಿ ಪಿಂಚಣಿದಾರರ ಪ್ರತಿನಿಧಿ ಪಿ.ಎ. ಜೋಸೆಫ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.