ADVERTISEMENT

‘ನರ್ಸ್‌ಗಳ ಶ್ರಮವಿಲ್ಲದೇ ಆಸ್ಪತ್ರೆಗಳು ಬೆಳೆಯಲಾಗದು’: ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2018, 12:11 IST
Last Updated 23 ನವೆಂಬರ್ 2018, 12:11 IST
ಬೆಳಗಾವಿಯ ಕೆಎಲ್‌ಇ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ನರ್ಸಿಂಗ್‌ ಸಮ್ಮೇಳನವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್‌ ಉದ್ಘಾಟಿಸಿದರು
ಬೆಳಗಾವಿಯ ಕೆಎಲ್‌ಇ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ನರ್ಸಿಂಗ್‌ ಸಮ್ಮೇಳನವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್‌ ಉದ್ಘಾಟಿಸಿದರು   

ಬೆಳಗಾವಿ: ‘ಶುಶ್ರೂಷಕರ ಶ್ರಮವಿಲ್ಲದೇ ಯಾವುದೇ ಆಸ್ಪತ್ರೆಗಳು ಬೆಳೆಯುವುದಕ್ಕೆ ಸಾಧ್ಯವಿಲ್ಲ; ಹೆಸರು ಮಾಡುವುದಕ್ಕೂ ಆಗುವುದಿಲ್ಲ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು.

ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯ ನರ್ಸಿಂಗ್‌ ವಿಜ್ಞಾನಗಳ ಸಂಸ್ಥೆಯಿಂದ ಜೆಎನ್‌ಎಂಸಿ ಸಭಾಂಗಣದಲ್ಲಿ ‘ನಮ್ಮ ನರ್ಸಿಂಗ್‌ ಅಭ್ಯಾಸ ಸಾಕ್ಷಿ ಆಧಾರಿತವಾಗಿದೆಯೇ?– ಆರೋಗ್ಯಸೇವೆ ಹಾಗೂ ನರ್ಸಿಂಗ್ ಶಿಕ್ಷಣದಲ್ಲಿ ಅಗತ್ಯವಾದ ಕೌಶಲಗಳ ಪರಾಮರ್ಶೆ’ ಎನ್ನುವ ವಿಷಯ ಕುರಿತು ಶುಕ್ರವಾರದಿಂದ 2 ದಿನಗಳವರೆಗೆ ಆಯೋಜಿಸಿರುವ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನರ್ಸಿಂಗ್‌ ಕ್ಷೇತ್ರ ದೇಶದ ಪ್ರಮುಖ ಔದ್ಯೋಗಿಕ ಕ್ಷೇತ್ರವಾಗಿದೆ. ದೇಶದಲ್ಲಿ 428 ವೈದ್ಯಕೀಯ ಕಾಲೇಜುಗಳಿವೆ. ವೈದ್ಯಕೀಯ ಶಿಕ್ಷಣದಲ್ಲಿ ಕರ್ನಾಟಕ ರಾಜ್ಯ ಹಾಗೂ ಭಾರತ ದೇಶವು ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿವೆ. ಆರೋಗ್ಯ ಪ್ರವಾಸೋದ್ಯಮದಲ್ಲಿ ರಾಜ್ಯವು ಅದ್ಭುತ ತಾಣವಾಗಿ ಹೊರಹೊಮ್ಮಿದೆ. ಜನರಿಗೆ ಅರೋಗ್ಯ ಸೇವೆ ಒದಗಿಸಲು ಹಾಗೂ ಉದ್ಯೋಗಗಳನ್ನು ಸೃಷ್ಟಿಸುವುದಕ್ಕೆ ಆರೋಗ್ಯ ಕ್ಷೇತ್ರವು ಬಹಳಷ್ಟು ಅವಕಾಶಗಳನ್ನು ಕಲ್ಪಿಸುತ್ತಿದೆ. ಶುಶ್ರೂಷೆ ಕ್ಷೇತ್ರದಲ್ಲಿ ಕರ್ನಾಟಕವು ನಾಯಕನಾಗಿ ಹೊರಹೊಮ್ಮಿದೆ’ ಎಂದು ತಿಳಿಸಿದರು.

ADVERTISEMENT

ಸಲಹೆಗಳ ಪ‍್ರಕಾರ: ‘ನಾವುಕೂಡ ನರ್ಸಿಂಗ್‌ ಕಾಲೇಜು ನಡೆಸುತ್ತಿದ್ದೇವೆ. ಅಲ್ಲಿ ಕಂಡುಬರುವ ಸಮಸ್ಯೆಗಳ ಅರಿವು ಕೂಡ ಇದೆ. ಹೀಗಾಗಿ, ನಾನು ವೈದ್ಯಕೀಯ ಶಿಕ್ಷಣ ಸಚಿವನಾಗುತ್ತಿದ್ದಂತೆಯೇ, ಇಲಾಖೆಯ ಸುಧಾರಣೆಗಾಗಿ ವೈದ್ಯಕೀಯ ಕಾಲೇಜುಗಳು ಹಾಗೂ ಸಂಸ್ಥೆಗಳಿಂದ ಸಲಹೆಗಳನ್ನು ಆಹ್ವಾನಿಸಿದ್ದೆ. ಸಾವಿರಕ್ಕೂ ಹೆಚ್ಚಿನ ಸಲಹೆಗಳು ಬಂದಿವೆ. ಅವುಗಳಲ್ಲಿ ‍ಪ್ರಮುಖವಾದವುಗಳನ್ನು ಅಳವಡಿಸಿಕೊಂಡು, ಕೆಲವು ಸುಧಾರಣಾ ಕ್ರಮಗಳನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು’ ಎಂದು ವಿವರಿಸಿದರು.

‘ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಜೀವನ ನಿರ್ವಹಣೆಯ ವೆಚ್ಚ ಹೆಚ್ಚಾಗುತ್ತಿದೆ. ಹೀಗಾಗಿ, ಕನಿಷ್ಠ ವೇತನದ ಪ್ರಮಾಣವೂ ಹೆಚ್ಚಾಗಬೇಕಾದ ಅವಶ್ಯವಿದೆ’ ಎಂದರು.

ಚಿಕ್ಕೋಡಿಯಲ್ಲಿ ಆರಂಭ: ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ, ರಾಜ್ಯಸಭಾ ಸದಸ್ಯ ಪ‍್ರಭಾಕರ ಕೋರೆ ಮಾತನಾಡಿ, ‘ನಾವು ನರ್ಸಿಂಗ್‌ ಕಾಲೇಜು ಆರಂಭಿಸಿದಾಗ ಕರ್ನಾಟಕದ ಒಬ್ಬ ವಿದ್ಯಾರ್ಥಿಯೂ ಇರಲಿಲ್ಲ. ಶೇ 100ರಷ್ಟು ಮಂದಿ ಕೇರಳದವರೇ ಇದ್ದರು. ನರ್ಸ್‌ಗಳಾಗುವುದು ಕೆಳದರ್ಜೆಯ ಕೆಲಸ ಎನ್ನುವ ಮನೋಭಾವವಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ನರ್ಸ್‌ಗಳು ಕೂಡ ಕೈತುಂಬಾ ಸಂಬಳ ಪಡೆಯುತ್ತಿದ್ದಾರೆ. ನಮ್ಮ ಸಂಸ್ಥೆಯೊಂದರಿಂದಲೇ 7 ನರ್ಸಿಂಗ್‌ ಕಾಲೇಜು ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಚಿಕ್ಕೋಡಿಯಲ್ಲೊಂದು ಕಾಲೇಜು ಆರಂಭಿಸಲಾಗುವುದು’ ಎಂದು ತಿಳಿಸಿದರು.

ನವದೆಹಲಿಯ ಭಾರತೀಯ ನರ್ಸಿಂಗ್‌ ಪರಿಷತ್ತು ಅಧ್ಯಕ್ಷ ಟಿ. ದಿಲೀಪ್‌ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಕೆಎಲ್‌ಇ ಸೊಸೈಟಿ ಅಧ್ಯಕ್ಷ ಶಿವಾನಂದ ಕೌಜಲಗಿ, ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ ಕುಲಪತಿ ಡಾ.ವಿವೇಕ್‌ ಸಾವಜಿ, ಕುಲಸಚಿವ ಡಾ.ವಿ.ಡಿ. ಪಾಟೀಲ, ಉತ್ತರ ಐರ್ಲೆಂಡ್‌ನ ಆರ್‌ಸಿಎನ್‌ ಮುಖ್ಯ ಕಾರ್ಯನಿರ್ವಾಹಕಿ ಜೆನಿಸ್ ಸ್ಮಿತ್, ಅಪೊಲೊ ಸಮೂಹ ಸಂಸ್ಥೆಗಳ ನರ್ಸಿಂಗ್‌ ವಿಭಾಗದ ನಿರ್ದೇಶಕಿ ಕ್ಯಾ.ಉಷಾ ಬ್ಯಾನರ್ಜಿ, ಯುಎಇ ಆರೋಗ್ಯ ವಿಜ್ಞಾನಗಳ ಕಾಲೇಜಿನ ಉಪನ್ಯಾಸಕಿ ಜೇನ್‌ ನೀಧಂ, ಮಸ್ಕಟ್‌ನ ಕಬೂಸ್‌ ವಿಶ್ವವಿದ್ಯಾಲಯದ ನರ್ಸಿಂಗ್‌ ಕಾಲೇಜು ಉಪನ್ಯಾಸಕಿ ಶ್ರೀದೇವಿ ಬಾಲಚಂದ್ರನ್‌, ಡಾ.ಆ್ಯಮಿ ಪಾಲ್ಗೊಂಡಿದ್ದರು.

ತಿಪ್ಪೇಸ್ವಾಮಿ ಬಿಲ್ಲಹಳ್ಳಿ ಸ್ವಾಗತಿಸಿದರು. ಡೀನ್ ಡಾ.ಸುಧಾ ಎ. ರೆಡ್ಡಿ ಅತಿಥಿಗಳನ್ನು ಪರಿಚಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.