ADVERTISEMENT

ಬೆಳಗಾವಿ | ಇಸ್ಕಾನ್‌ನಿಂದ ಭವ್ಯ ರಥಯಾತ್ರೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 4:35 IST
Last Updated 26 ಜನವರಿ 2026, 4:35 IST
ಬೆಳಗಾವಿಯಲ್ಲಿ ಶನಿವಾರ ಇಸ್ಕಾನ್‌ ಆಯೋಜಿಸಿದ್ದ ಭವ್ಯ ರಥಯಾತ್ರೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡರು  ಪ್ರಜಾವಾಣಿ ಚಿತ್ರ
ಬೆಳಗಾವಿಯಲ್ಲಿ ಶನಿವಾರ ಇಸ್ಕಾನ್‌ ಆಯೋಜಿಸಿದ್ದ ಭವ್ಯ ರಥಯಾತ್ರೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡರು  ಪ್ರಜಾವಾಣಿ ಚಿತ್ರ   

ಬೆಳಗಾವಿ: ನಗರದಲ್ಲಿ ಶನಿವಾರ ಇಸ್ಕಾನ್‌ ವತಿಯಿಂದ ಹಮ್ಮಿಕೊಂಡಿದ್ದ ರಥಯಾತ್ರೆಯ ನಾಗರಿಕರ ಗಮನ ಸೆಳೆಯಿತು. ಪ್ರಮುಖ ರಸ್ತೆ, ವೃತ್ತಗಳ ಮೂಲಕ ಮೆವರಣಿಗೆ ಮಾಡಿದ ಭಕ್ತರು ಹಾಡಿ, ಕುಣಿದರು. ಇಡೀ ದಿನ ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣಕೃಷ್ಣ ಹರೇಹರೇ, ಹರೇ ರಾಮ ಹರೇ ರಾಮ, ರಾಮರಾಮ ಹರೇಹರೇ... ಎಂಬ ಜಪ ಕೇಳಿಬಂತು.

ನಗರದ ಧರ್ಮವೀರ ಸಂಭಾಜಿ ವೃತ್ತದಿಂದ ಆರಂಭವಾದ ಈ ರಥಯಾತ್ರೆಯು ಭಕ್ತರ ಪಾಲಿಗೆ ಸಂಭ್ರಮದ ಉತ್ಸವವಾಗಿ ಮೂಡಿಬಂತು. ಅಪಾರ ಸಂಖ್ಯೆಯ ಮಹಿಳಾ ಮತ್ತು ಪುರುಷ ಭಕ್ತರು ಸಂಭಾಜಿ ವೃತ್ತದಲ್ಲಿ ಜಮಾಯಿಸಿದ ನಂತರ, ಇಸ್ಕಾನ್ ಬೆಳಗಾವಿಯ ಅಧ್ಯಕ್ಷರಾದ ಭಕ್ತಿರಸಾಮೃತ ಸ್ವಾಮಿ ಮಹಾರಾಜ, ಸುಂದರ ಚೈತನ್ಯ ಮಹಾರಾಜ ಹಾಗೂ ವೃಂದಾವನದ ಬ್ರಜೇಶಚಂದ್ರ ಗೋಸ್ವಾಮಿ ಪ್ರಭು ಅವರು ಆಶೀರ್ವಚನ ನೀಡಿದರು.

ಪುಷ್ಪಾಲಂಕೃತ ರಥದಲ್ಲಿ ರಾಧಾ–ಕೃಷ್ಣ, ನಿತ್ಯಾನಂದ ಮಹಾಪ್ರಭು ಮತ್ತು ಗೌರಾಂಗ ಮಹಾಪ್ರಭುಗಳ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿತ್ತು. ರಥದ ಪೂಜೆ ಮತ್ತು ಆರತಿಯ ನಂತರ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಚಾಲನೆ ನೀಡಿದರು. ಭಕ್ತರು ಜಯಘೋಷ ಹಾಕುತ್ತ ರಥ ಎಳೆದರು.

ADVERTISEMENT

ರಥಯಾತ್ರೆಯ ಮುಂಚೂಣಿಯಲ್ಲಿ ಮಂಜೀರಿ ಬೆನಕೆ ಅವರ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಯುವತಿಯರ ತಂಡವು ಆಕರ್ಷಕ ರಂಗೋಲಿಗಳನ್ನು ಬಿಡಿಸುತ್ತ ಸಾಗಿತು. ಇವುಗಳ ಬೆನ್ನಲ್ಲೇ ಸುಮಾರು 20ಕ್ಕೂ ಹೆಚ್ಚು ಅಲಂಕೃತ ಎತ್ತಿನ ಗಾಡಿಗಳು ಸಾಗಿದವು. ಮತ್ತೊಂದು ವಿಶೇಷ ಅಲಂಕೃತ ರಥದಲ್ಲಿ ಇಸ್ಕಾನ್ ಸಂಸ್ಥಾಪಕ ಆಚಾರ್ಯ ಪ್ರಭುಪಾದರ ಪ್ರತಿಮೆಯನ್ನು ಇರಿಸಲಾಗಿತ್ತು. ಭಗವಾನ್ ಶ್ರೀಕೃಷ್ಣನ ಜೀವನ ಚರಿತ್ರೆ ಆಧರಿಸಿದ ಭೀಷ್ಮರ ಶರಶಯ್ಯೆ, ನರಸಿಂಹ ದೇವ, ಕಾಲಿಯ ಮರ್ದನ, ಜಾರ್ಖಂಡ್ ಲೀಲೆ ಮುಂತಾದ ದೃಶ್ಯಗಳು ಜನಮನ ಸೆಳೆದವು.

ಭಾನುವಾರದ ಕಾರ್ಯಕ್ರಮಗಳು: ಸಂಜೆ 4 ರಿಂದ 5 ಗಂಟೆಯವರೆಗೆ ನರಸಿಂಹ ಯಜ್ಞ, 6.30 ರಿಂದ ರಾತ್ರಿ 10ರವರೆಗೆ ಭಜನೆ, ಕೀರ್ತನೆ, ಪ್ರವಚನ ಮತ್ತು ನಾಟ್ಯ ಲೀಲೆಗಳು ನಂತರ ಮಹಾಪ್ರಸಾದ ಇರಲಿದೆ.

ಬೆಳಗಾವಿಯಲ್ಲಿ ಶನಿವಾರ ಇಸ್ಕಾನ್‌ ಆಯೋಜಿಸಿದ್ದ ಭವ್ಯ ರಥಯಾತ್ರೆಯಲ್ಲಿ ರಾಮ ಕೃಷ್ಣ ರಾಧೆ ಸೀತೆಯರ ವೇಷದಲ್ಲಿ ಚಿಣ್ಣರು ಸಂಭ್ರಮಿಸಿದರು  ಪ್ರಜಾವಾಣಿ ಚಿತ್ರ

ಮೆರವಣಿಗೆ ಸಾಗಿದ ಮಾರ್ಗ ಧರ್ಮವೀರ ಸಂಭಾಜಿ ವೃತ್ತದಿಂದ ಆರಂಭವಾದ ಯಾತ್ರೆಯು ಸಮಾದೇವಿ ಮಂದಿರ ಖಡೇ ಬಜಾರ್ ಗಣಪತ್ ಗಲ್ಲಿ ಮಾರುತಿ ಗಲ್ಲಿ ಕಿರ್ಲೋಸ್ಕರ್ ರಸ್ತೆ ರಾಮಲಿಂಗ ಖಿಂಡ್ ಟಿಳಕ್ ಚೌಕ್ ಶನಿ ಮಂದಿರದ ಮಾರ್ಗವಾಗಿ ಕಪಿಲೇಶ್ವರ ರೈಲ್ವೆ ಓವರ್ ಬ್ರಿಜ್ ಮೂಲಕ ಶಹಾಪುರ ತಲುಪಿತು. ಅಲ್ಲಿಂದ ನಾಥ ಪೈ ಸರ್ಕಲ್ ಕೆ.ಎಲ್.ಇ ಆಯುರ್ವೇದ ಕಾಲೇಜ್ಕೃಷಿ ಭವನ ಮತ್ತು ಬಸವೇಶ್ವರ ವೃತ್ತದ ಮೂಲಕ ಸಾಗಿ ಸಂಜೆ 6.30ಕ್ಕೆ ಇಸ್ಕಾನ್ ರಾರಾಧಾ ಗೋಕುಲಾನಂದ ಮಂದಿರದ ಹಿಂಭಾಗದಲ್ಲಿ ನಿರ್ಮಿಸಲಾದ ಬೃಹತ್ ಶಾಮಿಯಾನ ತಲುಪಿತು. ದೇವಸ್ಥಾನದ ಆವರಣದಲ್ಲಿ ಭಗವದ್ಗೀತೆ ಪ್ರದರ್ಶನ ಸ್ಲೈಡ್ ಶೋ ಮೆಡಿಟೇಶನ್ ಪಾರ್ಕ್ ಗೋಸೇವಾ ಸ್ಟಾಲ್‌ಗಳು ಆಧ್ಯಾತ್ಮಿಕ ಪುಸ್ತಕ ಪ್ರದರ್ಶನ ಮತ್ತು ಯುವಜನತೆಗೆ ಮಾರ್ಗದರ್ಶನ ನೀಡುವ ಸ್ಟಾಲ್‌ಗಳನ್ನು ಹಾಕಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.