ಬೆಳಗಾವಿ: ಸಂಸದ ಜಗದೀಶ ಶೆಟ್ಟರ್, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹಾಗೂ ಕೇಂದ್ರ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಪ್ರಲ್ಹಾದ್ ಜೋಶಿ ಅವರು ಗುರುವಾರ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಜಿಲ್ಲೆಯ ಯೋಜನೆಗಳ ಕುರಿತು ಚರ್ಚಿಸಿದರು.
ನವದೆಹಲಿಯ ಸಚಿವರ ಕಚೇರಿಯಲ್ಲಿ ಚರ್ಚೆ ನಡೆಸಿದ ಸಂಸದ ಶೆಟ್ಟರ್, ‘ಲೋಕಾಪೂರ– ರಾಮದುರ್ಗ– ಸವದತ್ತಿ– ಧಾರವಾಡ ನಡುವೆ ನೂತನ ರೈಲು ಮಾರ್ಗ ರಚನೆಯ ಅಂಗವಾಗಿ ಪ್ರಾರಂಭಿಕವಾಗಿ ‘ಮಾರ್ಗ ಸಮೀಕ್ಷೆ’ ನಡೆಸಬೇಕು. ಸವದತ್ತಿಯ ರೇಣುಕಾದೇವಿಯ ಲಕ್ಷಾಂತರ ಭಕ್ತಾದಿಗಳ ಅನುಕೂಲಕ್ಕಾಗಿ ಈ ಮಾರ್ಗ ರಚನೆ ತುಂಬಾ ಅವಶ್ಯಕತೆ ಇದೆ’ ಎಂದು ಕೇಂದ್ರ ಸಚಿವರಲ್ಲಿ ಮನವರಿಕೆ ಮಾಡಿದರು.
ಬೆಳಗಾವಿ ರಹವಾಸಿಗಳ ಅನಕೂಲಕ್ಕಾಗಿ ಬೆಂಗಳೂರು– ಧಾರವಾಡ ನಡುವೆ ಸಂಚರಿಸುವ ‘ವಂದೇ ಭಾರತ ರೈಲು’ ಸೇವೆಯನ್ನು ಬೆಳಗಾವಿಯವರೆಗೆ ವಿಸ್ತರಿಸಿ, ಅನುಕೂಲ ಮಾಡಿ ಕೊಡಬೇಕು. ಅನೇಕ ದಿನಗಳಿಂದ ಈ ಬೇಡಿಕೆ ಕನಸಾಗಿಯೇ ಉಳಿದೆ. ಸಾಧ್ಯವಾದಷ್ಟು ಬೇಗ ನೆರವೇರಿಸಿ ಕೊಡಬೇಕು ಎಂದೂ ಸಂಸದ ಮನವಿ ಮಾಡಿದ್ದಾರೆ.
ಬೆಳಗಾವಿ– ಮಿರಜ್ ನಡುವೆ ದಿನನಿತ್ಯ ಸಂಚರಿಸುವ ಪ್ಯಾಸೆಂಜರ್ ರೈಲು ಸೇವೆಯನ್ನು ಪ್ರತಿ ತಿಂಗಳು ವಿಸ್ತರಿಸುತ್ತ ಬರಲಾಗಿದೆ. ಈ ಸೇವೆಯನ್ನು ಕಾಯಂ ಮಾಡುವ ನಿಟ್ಟಿನಲ್ಲಿ ಅಗತ್ಯ ಆದೇಶ ನೀಡಬೇಕು ಎಂದೂ ಕೋರಿದ್ದಾರೆ.
ಈ ಮೂರು ಬೇಡಿಕೆಗಳ ಬಗ್ಗೆ ಅವಲೋಕಿಸಿದ ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ನೂತನ ಲೋಕಾಪುರ– ರಾಮದುರ್ಗ– ಸವದತ್ತಿ– ಧಾರವಾಡ ರೈಲು ಮಾರ್ಗ ಸಮೀಕ್ಷೆ ಕಾರ್ಯ ಪ್ರಾರಂಭಕ್ಕೆ ಆದೇಶಿಸುವ ಬಗ್ಗೆ ಮತ್ತು ಬೆಂಗಳೂರು– ಧಾರವಾಡ ನಡುವೆ ಸಂಚರಿಸುವ ‘ವಂದೇ ಭಾರತ’ ರೈಲು ಸೇವೆಯನ್ನು ಬೆಳಗಾವಿ ನಗರದವರೆಗೆ ವಿಸ್ತರಿಸುವ ಬಗ್ಗೆ ಶೀಘ್ರದಲ್ಲಿ ನಿರ್ಧಾರ ಪ್ರಕಟಿಸಲಾಗುವುದು ಎಂದರು.
ಬೆಳಗಾವಿ– ಮಿರಜ್ ನಡುವೆ ದಿನನಿತ್ಯ ಸಂಚರಿಸುವ (ತಾತ್ಕಾಲಿಕ) ಪ್ಯಾಸೆಂಜರ್ ರೈಲು ಸೇವೆಯನ್ನು ಕಾಯಂ ಆಗಿ ಒದಗಿಸುವ ಬಗ್ಗೆ ಇಷ್ಟರಲ್ಲಿಯೇ ಅಗತ್ಯ ಕ್ರಮವನ್ನು ಕೈಕೊಳ್ಳಲಾಗುವುದಾಗಿ ಭರವಸೆ ನೀಡಿದರು ಎಂದೂ ಸಂಸದ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.