ADVERTISEMENT

ಮರುಕಳಿಸಿದ ಲವ್‌ ಜಿಹಾದ್‌: ಜಗದೀಶ ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2024, 14:00 IST
Last Updated 19 ಏಪ್ರಿಲ್ 2024, 14:00 IST
   

ಬೆಳಗಾವಿ: ‘ಹುಬ್ಬಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿನಿ ಕೊಲೆ ಪ್ರಕರಣ ಲವ್ ಜಿಹಾದ್‌ನ ಪ್ರತ್ಯಕ್ಷ ಸಾಕ್ಷ್ಯ. ಕಾಂಗ್ರೆಸ್ ಪಕ್ಷದ ತುಷ್ಟೀಕರಣ ನೀತಿಯಿಂದ ಇಂಥ ಪ್ರಕರಣಗಳು ಪದೇ ಪದೇ ಸಂಭವಿಸುತ್ತಿವೆ. ಕಾಂಗ್ರೆಸ್‌ಗೆ ಜನರು ತಕ್ಕ ಪಾಠ ಕಲಿಸಬೇಕು’ ಎಂದು ಬೆಳಗಾವಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಹೇಳಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಈ ಕೊಲೆ ಅತ್ಯಂತ ಖಂಡನೀಯ. ಪ್ರೀತಿ– ಪ್ರೇಮದ ಹೆಸರಿನಲ್ಲಿ ಲವ್ ಜಿಹಾದ್ ನಡೆದಿದೆ. ಕೊಲೆ ಆರೋಪಿಯ ಮನಸ್ಥಿತಿ ಅಪಾಯಕಾರಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದೇ ಇದಕ್ಕೆ ಕಾರಣ’ ಎಂದರು.

‘ಕೊಲೆಯಾದ ಯುವತಿಯ ತಂದೆ ಕಾಂಗ್ರೆಸ್‌ ಕಾರ್ಪೊರೇಟರ್‌. ಆಕೆಯ ತಂದೆಯೇ ಇದು ಲವ್ ಜಿಹಾದ್ ಹಿನ್ನೆಲೆಯಲ್ಲಿ ನಡೆದ ಘಟನೆ ಎಂದು ಹೇಳಿದ್ದಾರೆ. ಇದರ ಹಿಂದೆ ಯಾರಿದ್ದಾರೆ? ಏನಿದೆ? ಎಂದು ಸಂಪೂರ್ಣ ತನಿಖೆಗೆ ಆಗ್ರಹಿಸಿದ್ದಾರೆ. ಸರ್ಕಾರ ಜವಾಬ್ದಾರಿ ತೋರಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬಾಂಬ್ ಸ್ಫೋಟ, ಕೊಲೆ ಪ್ರಕರಣಗಳು ನಡೆಯುತ್ತಿವೆ. ಕಾಂಗ್ರೆಸ್ ತುಷ್ಟೀಕರಣ ನೀತಿಯಿಂದ ಈ ಎಲ್ಲ ಘಟನೆಗಳು ಸಂಭವಿಸುತ್ತಿವೆ. ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಾರೆ. ಈ ಧೈರ್ಯ ಹೇಗೆ ಬಂತು? ಕಾಲೇಜು ಕ್ಯಾಂಪಸ್‌ಗೆ ನುಗ್ಗಿ ಹುಡುಗಿ ಕೊಲೆ ಮಾಡುವ ಧೈರ್ಯ ಹೇಗೆ ಬಂತು? ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಗೃಹ ಸಚಿವ ಪರಮೇಶ್ವರ ಬರೀ ಹೇಳಿಕೆ‌ ನೀಡಿ ಯಾರನ್ನೂ ಸಮಾಧಾನ ಪಡಿಸಲು ಸಾಧ್ಯವಿಲ್ಲ. ಇಂಥ ಘಟನೆ ಮರುಕಳಿಸಬಾರದು. ಕಾನೂನು, ಸುವ್ಯವಸ್ಥೆ ಸರಿಯಾಗಿ ಕಾಪಾಡಿ. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು’ ಎಂದೂ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.