ADVERTISEMENT

ಗಡಿ ವಿವಾದ ಮುಗಿದ ವಿಚಾರ: ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 13:33 IST
Last Updated 16 ಫೆಬ್ರುವರಿ 2020, 13:33 IST

ಬೆಳಗಾವಿ: ‘ಬೆಳಗಾವಿ ಗಡಿ ವಿವಾದ ಮುಗಿದ ವಿಚಾರ. ಮಹಾಜನ ವರದಿಯೇ ಅಂತಿಮ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ಖಾನಾಪುರ ತಾಲ್ಲೂಕು ಬೋಗೂರ ಗ್ರಾಮದಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಪದೇ ಪದೇ ಕ್ಯಾತೆ ತೆಗೆಯುವ ಕೆಲಸವನ್ನು ಮಹಾರಾಷ್ಟ್ರದವರು ಮಾಡುತ್ತಿದ್ದಾರೆ. ಕೇವಲ ರಾಜಕೀಯ ಕಾರಣದಿಂದಾಗಿ, ಅವರ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಅಲ್ಲಿನ ಸಂಬಂಧಿಸಿದವರೊಂದಿಗೆ ಮುಖ್ಯಮಂತ್ರಿ ಸಮಾಲೋಚನೆ ನಡೆಸುತ್ತಾರೆ’ ಎಂದರು.

‘ವಿವಾದ ಸುಪ್ರೀಂ ಕೋರ್ಟ್‌ನಲ್ಲಿದೆ. ಸಮರ್ಥವಾಗಿ ಕಾನೂನು ಹೋರಾಟ ಮಾಡುವುದಕ್ಕೆ ಸರ್ಕಾರ ಬದ್ಧವಾಗಿದೆ. ಮಹದಾಯಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದೆ. ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಿಂದ ಅನುಮತಿ ಪಡೆಯುವ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಲಿದೆ’ ಎಂದರು.

ADVERTISEMENT

‘ನೆರೆ, ಅತಿವೃಷ್ಟಿಯಿಂದ ಸಂತ್ರಸ್ತರಾದವರಿಗೆ ಸಮರ್ಪಕವಾಗಿ ಪರಿಹಾರ ನೀಡಲಾಗಿದೆ. ಅದನ್ನು ಪ್ರತಿಪಕ್ಷದವರು ವೀಕ್ಷಿಸಿದ್ದರೆ, ಅವರು ಹೋರಾಟ ಮಾಡುತ್ತಿರಲಿಲ್ಲ. ಹಾನಿಯಾದಾಗ ಶೇ 100ರಷ್ಟು ಸರಿಪಡಿಸುವುದಕ್ಕೆ ಆಗುವುದಿಲ್ಲ. ಹಂತ ಹಂತವಾಗಿ ದುರಸ್ತಿ ಮಾಡಬೇಕಾಗುತ್ತದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಸ್ವತಃ ಓಡಾಡಿ ಉಸ್ತುವಾರಿ ವಹಿಸಿದ್ದಾರೆ. ಅಲ್ಲಿ ಇಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೆ ಸರಿಪಡಿಸಲಾಗುವುದು. ಹತ್ತಾರು ಸಾವಿರ ಕೋಟಿ, ಲಕ್ಷಾಂತರ ಕೋಟಿ ತಕ್ಷಣ ತಂದುಕೊಡುವುದಕ್ಕೆ ಆಗುವುದಿಲ್ಲ. ತುರ್ತಾಗಿ ಆಗಬೇಕಾದ ಕೆಲಸಗಳನ್ನು ಮಾಡಿದ್ದೇವೆ. ಕ್ರಮೇಣವಾಗಿ ಎಲ್ಲವನ್ನೂ ಸರಿಪಡಿಸಲಾಗುವುದು. ಆದರೆ, ತಕ್ಷಣಕ್ಕೆ ಏನು ಬೇಕಿತ್ತೋ ಅದನ್ನು ಸರ್ಕಾರ ಮಾಡಿದೆ’ ಎಂದು ಸಮರ್ಥಿಸಿಕೊಂಡರು.

‘ನೆರೆ ಸಂತ್ರಸ್ತರಿಗೆ ಸಾಲ ವಸೂಲಾತಿಗೆ ನೋಟಿಸ್‌ ಕೊಡುವುದನ್ನು ನಿಲ್ಲಿಸಲಾಗುವುದು. ಕಿರುಕುಳ ನೀಡಿದಂತೆ ತಡೆಯಲಾಗುವುದು. ಮುಖ್ಯಮಂತ್ರಿ ಗಮನಕ್ಕೂ ತರಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.