ADVERTISEMENT

ಜಲಜೀವನ ಮಿಷನ್‌: ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು

​ಪ್ರಜಾವಾಣಿ ವಾರ್ತೆ
Published 25 ಮೇ 2022, 11:26 IST
Last Updated 25 ಮೇ 2022, 11:26 IST
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್   

ಬೆಳಗಾವಿ: ‘ಜಲಜೀವನ ಮಿಷನ್‌ ಮೊದಲನೇ ಹಂತದ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಗ್ರಾಮೀಣ ಜನರ ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹಂತ-2ರ ಎಲ್ಲ ಕಾಮಗಾರಿಗಳನ್ನು ಕೂಡ ಪೂರ್ಣಗೊಳಿಸಬೇಕು. ಹಂತ-3ರ ಯೋಜನೆಗಳನ್ನು ಸಕಾಲದಲ್ಲಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

ನಿರೀಕ್ಷಿತ ಮಟ್ಟದಲ್ಲಿಲ್ಲ:

‘ಹಂತ-1 ಕಾಮಗಾರಿಗಳ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿಲ್ಲ. ಚುರುಕುಗೊಳಿಸಬೇಕು. ಹಂತ-2ರಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ಯೋಜನೆಗಳ ಡಿಪಿಆರ್ ಸಮಗ್ರವಾಗಿ ಪರಿಶೀಲಿಸಬೇಕು. ನ್ಯೂನತೆ ಇರದಂತೆ ಎಚ್ಚರ ವಹಿಸಬೇಕು. ಯಾವುದೇ ಕಾಮಗಾರಿ ವಿಳಂಬವಾಗಬಾರದು’ ಎಂದು ನಿರ್ದೇಶನ ನೀಡಿದರು.

‘ಚಿಕ್ಕೋಡಿ ವಿಭಾಗದ 666 ಕಾಮಗಾರಿಗಳ ಪೈಕಿ 652ನ್ನು ಜೂನ್ 15ರ ವೇಳೆಗೆ ಪೂರ್ಣಗೊಳಿಸಲಾಗುವುದು’ ಎಂದು ಚಿಕ್ಕೋಡಿ ವಿಭಾಗದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಬಣಗಾರ ತಿಳಿಸಿದರು.

‘ಡಿಪಿಆರ್ ತಯಾರಿಸುವಾಗ ಅಧಿಕಾರಿಗಳು ತಾಂತ್ರಿಕ ಅಂಶಗಳನ್ನು ಕೂಲಂಕುಶವಾಗಿ ಪರಿಶೀಲಿಸಬೇಕು. ಹಂತ -1 ಹಾಗೂ 2ರಲ್ಲಿನ ಲೋಪದೋಷಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಗ್ರಾಮದ ಎಲ್ಲ ಪ್ರದೇಶಗಳಿಗೂ ಯೋಜನೆಯ ವ್ಯಾಪ್ತಿ ವಿಸ್ತರಿಸಬೇಕು’ ಎಂದು ಅತೀಕ್‌ ಹೇಳಿದರು.

ಲಸಿಕೆ ಹಾಕಲು‌ ನಿರ್ದೇಶನ:

‘60 ವರ್ಷ ಮೇಲಿನ ಎಲ್ಲರಿಗೂ ಕೋವಿಡ್ ಲಸಿಕೆ ಹಾಕಲು ಪ್ರತಿ ಗ್ರಾಮಗಳಲ್ಲಿ ಜಾಗೃತಿ ಶಿಬಿರಗಳನ್ನು ನಡೆಸಬೇಕು. ಮನೆ ಮನೆಗೆ ತೆರಳಿ ಲಸಿಕೆ ಹಾಕಲು ಕ್ರಮ ಕೈಗೊಳ್ಳಬೇಕು. ಅಗತ್ಯವಿರುವ ಕಡೆ ಪಿಡಿಒಗಳು ವಾಹನ ವ್ಯವಸ್ಥೆ ಮಾಡಬೇಕು’ ಎಂದು ಸೂಚಿಸಿದರು.

‘ಪ್ರವಾಹ ಉಂಟಾದರೆ ಅಗತ್ಯವಿರುವ ಔಷಧಿ ಸಾಮಗ್ರಿಗಳನ್ನು ದಾಸ್ತಾನು ಇಟ್ಟುಕೊಳ್ಳಲಾಗಿದೆ’ ಎಂದು ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ಹೇಳಿದರು.

ಅನುದಾನ ಬೇಕು:

‘ಸಾರ್ವಜನಿಕ ಆಸ್ಪತ್ರೆಗಳು, ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಔಷಧಿ ವಿತರಣೆಗೆ ಅಗತ್ಯ ಅನುದಾನ ಬಿಡುಗಡೆಯಾಗಬೇಕು. ಇದಲ್ಲದೇ ಲಸಿಕಾ ವಾಹನ ಒದಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.

‘18 ವರ್ಷ ಮೇಲಿನವರಿಗೆ ಕೋವಿಡ್ ಲಸಿಕೆ ಮೊದಲ ಹಾಗೂ 2ನೇ ಡೋಸ್ ಶೇ 102ರಷ್ಟು ಗುರಿ ಸಾಧನೆಯಾಗಿದೆ. ಜಿಲ್ಲೆಯಲ್ಲಿ ಮೊದಲ ಡೋಸ್ ಪಡೆದಿರುವ 1.90 ಲಕ್ಷ ಜನರು 2ನೇ ಡೋಸ್ ಹಾಕಿಸಿಕೊಂಡಿಲ್ಲ’ ಎಂದು ಆರ್‌ಸಿಎಚ್‌ಒ ಡಾ.ಐ.ಪಿ. ಗಡಾದ ವಿವರಿಸಿದರು.

‘ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸಬೇಕು. ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮೈದಾನ ನಿರ್ಮಿಸುವಂತೆ ಯುವಜನ ಸೇವಾ ಇಲಾಖೆಗೆ ಸೂಚಿಸಲಾಗಿದೆ. ಗ್ರಾ.ಪಂ. ಅಧಿಕಾರಿಗಳು ಆ ಇಲಾಖೆ ಜತೆ ಸಮನ್ವಯದಿಂದ ಸ್ಥಳಗಳನ್ನು ಗುರುತಿಸಿ ಪಟ್ಟಿ ಸಿದ್ಧಪಡಿಸಬೇಕು’ ಎಂದರು.

‘ಜಿಲ್ಲೆಯ 20ಕ್ಕೂ ಅಧಿಕ ಪ್ರಾಥಮಿಕ ಆರೋಗ್ಯ ಕೇಂದ್ರಗಳ ದುರಸ್ತಿಗೆ ಕ್ರಮ ವಹಿಸಬೇಕು. ಬಾಕಿ ಉಳಿಸಬಾರದು. 2ನೇ ಹಂತದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳ ದುರಸ್ತಿ ಕೈಗೆತ್ತಿಕೊಳ್ಳಬೇಕು’ ಎಂದು ಜಿ.ಪಂ. ಸಿಇಒ ಎಚ್‌.ವಿ. ದರ್ಶನ್ ತಿಳಿಸಿದರು.

ನೀರು ಸಂರಕ್ಷಣಾ ಯೋಜನೆ ಜಾರಿಗೆ ಸೂಚನೆ

‘ಕುಡಿಯುವ ನೀರಿನ ಕೊರತೆ ಆಗದಂತೆ ಕ್ರಮ ಕೈಗೊಳ್ಳಬೇಕು. ಅಗತ್ಯಬಿದ್ದರೆ ಖಾಸಗಿ ಕೊಳವೆಬಾವಿ ಅಥವಾ ಟ್ಯಾಂಕರ್ ಬಾಡಿಗೆ ಪಡೆಯಬಹುದು. ಲಭ್ಯವಿರುವ ಅನುದಾನ ಬಳಸಿಕೊಂಡು ಕೂಡಲೇ ನೀರು ಒದಗಿಸಬೇಕು. ನಿರಂತರವಾಗಿ 10 ವರ್ಷಗಳಿಂದ ನೀರಿನ ಅಭಾವ ಇರುವ ಗ್ರಾಮಗಳಲ್ಲಿ ಮುಂದಿನ ಐದಾರು ವರ್ಷಗಳ ಕಾಲ ನರೇಗಾ ಯೋಜನೆಯಡಿ ನೀರು ಸಂರಕ್ಷಣಾ ಯೋಜನೆ ಜಾರಿಗೊಳಿಸಬೇಕು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಿಸಬಹುದು’ ಎಂದು ಅತೀಕ್ ತಿಳಿಸಿದರು.

ಉಪ ವಿಭಾಗಾಧಿಕಾರಿಗಳಾದ ರವೀಂದ್ರ ಕರಲಿಂಗಣ್ಣವರ, ಸಂತೋಷ ಕಾಮಗೌಡ, ಶಶಿಧರ್ ಬಗಲಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.