ADVERTISEMENT

ಬೈಲಹೊಂಗಲ: ಮೂರುಸಾವಿರ ಮಠದಲ್ಲಿ ಜಾತ್ರಾ ಸಂಭ್ರಮ

ಮಾರ್ಚ್‌ 8ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ, ನಿತ್ಯ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 4:26 IST
Last Updated 3 ಮಾರ್ಚ್ 2024, 4:26 IST
ಪ್ರಭುನೀಲಕಂಠ ಸ್ವಾಮೀಜಿ
ಪ್ರಭುನೀಲಕಂಠ ಸ್ವಾಮೀಜಿ   

ಬೈಲಹೊಂಗಲ: ಇಲ್ಲಿನ ಶಾಖಾ ಮೂರುಸಾವಿರ ಮಠದಲ್ಲಿ ಈಗ ಸಂಭ್ರಮ ಮನೆಮಾಡಿದೆ. ಲಿಂ.ನೀಲಕಂಠ ಮಹಾಶಿವಯೋಗೀಶ್ವರರ ಜಾತ್ರೆ ಹಾಗೂ ಲಿಂ.ಗಂಗಾಧರ ಸ್ವಾಮೀಜಿ 15ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಆರಂಭಗೊಂಡಿದ್ದು, ಮಾರ್ಚ್‌ 8ರವರೆಗೆ ಜರುಗಲಿವೆ.

ನೀಲಕಂಠೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ ಎಲ್ಲ ಕಾರ್ಯಕ್ರಮಗಳ ನೇತೃತ್ವ ವಹಿಸಲಿದ್ದಾರೆ. ನಿತ್ಯ ಸಂಜೆ ನೆರವೇರುವ ಗುಡ್ಡಾಪುರ ದಾನಮ್ಮ ದೇವಿ ಪ್ರವಚನ ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಸೇರುತ್ತಿದ್ದಾರೆ. ಮಠದ ಆವರಣದಲ್ಲಿ ಪ್ರತಿದಿನ ದಾಸೋಹ ಸೇವೆ ನಡೆದಿದೆ.

ಶ್ರೀಗಳ ನೇತೃತ್ವದಲ್ಲಿ 10 ದಿನಗಳಿಂದ ಪಾದಯಾತ್ರೆ ನಡೆಯುತ್ತಿದೆ. ನಿತ್ಯ ಬೆಳಿಗ್ಗೆ ತಮ್ಮ ಮನೆಬಾಗಿಲಿಗೇ ಬರುತ್ತಿರುವ ಯಾತ್ರೆಯನ್ನು ಭಕ್ತರು ಶ್ರದ್ಧೆಯಿಂದ ಬರಮಾಡಿಕೊಳ್ಳುತ್ತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಇದರಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಯಾತ್ರೆಯಲ್ಲಿ ವಿಶ್ವಗುರು ಬಸವಣ್ಣವನ ಭಾವಚಿತ್ರ ಇರಿಸಿ ಪೂಜಿಸಲಾಗುತ್ತಿದೆ. ಧಾರ್ಮಿಕ ಆಚರಣೆಗಳ ಹಿನ್ನೆಲೆ ಮತ್ತು ಮಹತ್ವವನ್ನು ಸಾರಲಾಗುತ್ತಿದೆ.

ADVERTISEMENT

ಏನೇನು ಕಾರ್ಯಕ್ರಮ?:

ಮಾರ್ಚ್‌ 6ರಂದು ಬೆಳಿಗ್ಗೆ 10ಕ್ಕೆ ಗಂಗಾಧರ ಸ್ವಾಮೀಜಿ ವಿರಕ್ತಮಠದ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ನವೀಕರಿಸಿದ ಪಂಚಕರ್ಮ ಮತ್ತು ಶಲ್ಯ ತಂತ್ರ ಘಟಕಗಳ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಹಾನಗಲ್ಲ-ಹುಬ್ಬಳ್ಳಿಯ ಮೂರುಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿಸುವರು. ಅತಿಥಿಗಳಾಗಿ ಹುಬ್ಬಳ್ಳಿಯ ಕಿಮ್ಸ್ ಪ್ರಾಚಾರ್ಯ ಡಾ.ಕೆ.ಎಫ್.ಕಮ್ಮಾರ, ಹುಬ್ಬಳ್ಳಿ ಸಂಜೀವಿನಿ ಆಯುರ್ವೇದ ಮಹಾವಿದ್ಯಾಲಯದ ಮುಖ್ಯ ಆಡಳಿತಾಧಿಕಾರಿ ಡಾ.ಶ್ರೀನಿವಾಸ ಬನ್ನಿಗೋಳ, ಡಾ.ಎ.ಎಸ್.ಪ್ರಶಾಂತ, ರವೀಂದ್ರ ಪಾಟೀಲ, ಎಸ್.ಸಿ.ಮೆಟಗುಡ್ಡ, ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಸಿದ್ದಣ್ಣವರ, ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಸುಭಾಸ ಬಾಗಡೆ ಆಗಮಿಸುವರು.

ಸಂಜೆ 6.30ಕ್ಕೆ ನಡೆಯಲಿರುವ ಗುಡ್ಡಾಪುರ ದಾನಮ್ಮ ದೇವಿ ಪ್ರವಚನದ ಮಂಗಲೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮುನವಳ್ಳಿಯ ಮುರಘೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶೇಗುಣಸಿಯ ಮಹಾಂತಪ್ರಭು ಸ್ವಾಮೀಜಿ, ಮಡಿವಾಳೇಶ್ವರ ಮಠದ ಮಡಿವಾಳ ಸ್ವಾಮೀಜಿ, ಗರಗದ ಪ್ರಶಾಂತ ದೇವರು ನೇತೃತ್ವ ವಹಿಸುವರು. ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಶಾಸಕರಾದ ಬಾಬಾಸಾಹೇಬ ಪಾಟೀಲ, ವಿಶ್ವಾಸ ವೈದ್ಯ, ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ನಿವೃತ್ತ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಸೋಮೇಶ್ವರ ಕಾರ್ಖಾನೆ ನಿರ್ದೇಶಕ ಪ್ರಕಾಶ ಮೂಗಬಸವ, ರಾಚಪ್ಪ ಬೋಳೆತ್ತಿನ ಆಗಮಿಸುವರು.

ಬೈಲಹೊಂಗಲದಲ್ಲಿರುವ ನೀಲಕಂಠೇಶ್ವರ ಗದ್ದುಗೆ

7ರಂದು ಸಂಜೆ 6.30ಕ್ಕೆ ಲಿಂ.ಗಂಗಾಧರ ಸ್ವಾಮೀಜಿ 15ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ನಡೆಯಲಿದೆ. ಮುರಗೋಡದ ನೀಲಕಂಠ ಸ್ವಾಮೀಜಿ ಸಾನಿಧ್ಯ ವಹಿಸುವರು. ಬಸವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಕಟಕೋಳದ ಸಚ್ಚಿದಾನಂದ ಸ್ವಾಮೀಜಿ ನೇತೃತ್ವ ವಹಿಸುವರು. ಘೋಡಗೇರಿಯ ಪ್ರಭುಲಿಂಗ ಸ್ವಾಮೀಜಿ, ಘಟಪ್ರಭಾದ ವಿರೂಪಾಕ್ಷ ಸ್ವಾಮೀಜಿ ನೇತೃತ್ವ ವಹಿಸುವರು. ಅತಿಥಿಗಳಾಗಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಶಾಸಕ ಮಹಾಂತೇಶ ಕೌಜಲಗಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕರಾದ ಅಮೃತ ದೇಸಾಯಿ, ಮಹಾಂತೇಶ ದೊಡಗೌಡರ, ಜಿ.ಪಂ ಮಾಜಿ ಸದಸ್ಯ ಶಂಕರ ಮಾಡಲಗಿ, ಚಿತ್ರನಟ ಶಿವರಂಜನ್ ಬೋಳಣ್ಣವರ, ಉಮೇಶ ಬಾಳಿ, ಪುರಸಭೆ ಸದಸ್ಯ ರಾಜು ಜನ್ಮಟ್ಟಿ ಆಗಮಿಸುವರು. ಇದೇವೇಳೆ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆಯಲಿದೆ.

8ರಂದು ಬೆಳಿಗ್ಗೆ 6ಕ್ಕೆ ನೀಲಕಂಠ ಮಹಾಶಿವಯೋಗೀಶ್ವರರು ಹಾಗೂ ಲಿಂ.ಗಂಗಾಧರ ಸ್ವಾಮೀಜಿ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪಲ್ಲಕ್ಕಿ ಉತ್ಸವ ನಡೆಯಲಿವೆ. ಸಂಜೆ 4ಕ್ಕೆ ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ಯಡ್ರಾಮಿಯ ಸಿದ್ಧಲಿಂಗ ಸ್ವಾಮೀಜಿ, ಹಳೇಕೋಟೆಯ ಸಿದ್ಧಬಸವ ಸ್ವಾಮೀಜಿ, ಚಿಕಲಪರ್ವಿಯ ಸದಾಶಿವ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಹಾರಥೋತ್ಸವ ನಡೆಯಲಿದೆ. 7.30ಕ್ಕೆ ಸಂಗೀತ ವೈಭವ ನಡೆಯಲಿದೆ.

ಲಿಂಗೈಕ್ಯ ಗಂಗಾಧರ ಸ್ವಾಮೀಜಿ

‘ಉತ್ತಮ ಸ್ಪಂದನೆ’

‘ನಮ್ಮದು ಭಾವೈಕ್ಯ ಮಠ. ಮಠದ ಧಾರ್ಮಿಕ ಕಾರ್ಯದಲ್ಲಿ ಸರ್ವಧರ್ಮೀಯರು ಜಾತಿ ಭೇದ ಮರೆತು ಭಾಗವಹಿಸುತ್ತಿದ್ದಾರೆ. ಪಟ್ಟಣದ ಪ್ರತಿ ವಾರ್ಡ್‌ನಲ್ಲಿ ಒಂದೊಂದು ದಿನ ಸಂಚರಿಸುತ್ತಿರುವ ಪಾದಯಾತ್ರೆಯಲ್ಲೂ ಸರ್ವಧರ್ಮೀಯರು ಪಾಲ್ಗೊಂಡು ಸಾಮರಸ್ಯದ ಸಂದೇಶ ಸಾರುತ್ತಿದ್ದಾರೆ. ಧಾರ್ಮಿಕ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ’ ಎಂದು ಪ್ರಭುನೀಲಕಂಠ ಸ್ವಾಮೀಜಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.