ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಕೊಂಕಣ ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಕೃಷ್ಣಾ, ದೂಧಗಂಗಾ ಹಾಗೂ ವೇದಗಂಗಾ ನದಿಗಳ ನೀರಿನ ಹರಿವಿನ ಪ್ರಮಾಣದಲ್ಲಿ ಇಳಿಮುಖವಾಗಿದೆ. ಹೀಗಾಗಿ ಕೃಷ್ಣಾ ಹಾಗೂ ಉಪನದಿಗಳಲ್ಲಿ ಪ್ರವಾಹ ಇಳಿಮುಖವಾಗಿದ್ದರಿಂದ ನದಿ ತೀರದ ಜನರು ನೆಮ್ಮದಿಯ ನಿಟ್ಟುಸಿರುವು ಬಿಡುವಂತಾಗಿದೆ.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ರಾಜಾಪೂರೆ ಬ್ಯಾರೇಜಿನಿಂದ ಭಾನುವಾರ ಕೃಷ್ಣಾ ನದಿಯ ಹೊರ ಹರಿವು 1,63,000 ಕ್ಯೂಸೆಕ್ ಇದ್ದು, ತಾಲ್ಲೂಕಿನ ಸದಲಗಾ ಪಟ್ಟಣದ ಬಳಿಯಲ್ಲಿ ದೂಧಗಂಗಾ ನದಿಗೆ ಹೊರ ಹರಿವು 39,072 ಕ್ಯೂಸೆಕ್ ಇದೆ. ತಾಲ್ಲೂಕಿನ ಕಲ್ಳೋಳ-ಯಡೂರ ಬ್ಯಾರೇಜ್ ಬಳಿಯ ಕೃಷ್ಣಾ-ದೂಧಗಂಗಾ ಸಂಗಮ ಸ್ಥಳದಲ್ಲಿ 2,02, 072 ಕ್ಯೂಸೆಕ್ ಹೊರ ಹರಿವು ಇದೆ. ನಿನ್ನೆಗಿಂತ ಇಂದು ಕೃಷ್ಣಾ ನದಿಯಲ್ಲಿ ಹೊರ ಹರಿವು 41,317 ಕ್ಯೂಸೆಕ್ ಇಳಿಮುಖವಾಗಿದೆ.
ಉಪ ವಿಭಾಗ ವ್ಯಾಫ್ತಿಯಲ್ಲಿ ಕೃಷ್ಣಾ ನದಿ ನೀರಿನಿಂದ ಜಲಾವೃತಗೊಂಡಿದ್ದ ತಾಲ್ಲೂಕಿನ ಯಡೂರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ತೆರುವುಗೊಂಡಿದೆ. ಅಲ್ಲದೇ, ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕೃಷ್ಣಾ ಹಾಗೂ ಪಂಚಗಂಗಾ ನದಿಯ ಸಂಗಮ ಸ್ಥಾನದಲ್ಲಿರುವ ನರಸಿಂಹವಾಡಿಯ ದತ್ತ ದೇವಸ್ಥಾನ ಭಾಗಶಃ ತೆರವುಗೊಂಡಿದೆ.
ಕಳೆದೊಂದು ವಾರದಿಂದ ಜಲಾವೃತಗೊಂಡ ಸೇತುವೆಗಳ ಪೈಕಿ ನಿಪ್ಪಾಣಿ ತಾಲ್ಲೂಕಿನ ವೇದಗಂಗಾ ನದಿಯ ಜತ್ರಾಟ- ಭೀವಸಿ ಕಿರು ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.